ಕೆರೆ ಒತ್ತುವರಿ ತೆರವು : ಮೂರು ತಿಂಗಳ ಗಡುವು
ಪುನರ್ವಸತಿಗೆ ಲಿಂಗಪ್ಪನಪಾಳ್ಯದ ಬಳಿ ಜಾಗ ಬಿಟ್ಟು ಕೊಡುವುದಿಲ್ಲ : ಗ್ರಾಮಸ್ಥರು
---------------------------------------------------------------
ಹುಳಿಯಾರು ಪಟ್ಟಣದ ಕೆರೆ ಒತ್ತುವರಿ ಜಾಗವನ್ನು ತೆರವು ಮಾಡುವ ಮೊದಲು ಇಲ್ಲಿನ ನಿವಾಸಿಗಳಿಗೆ ಬೇರೆಡೆ ಪುನರ್ವಸತಿ ಕಲ್ಪಿಸಿಕೊಡುವಂತೆ ಶಂಕರಪುರ ಬಡಾವಣೆಯ ನಿವಾಸಿಗಳು ಕೋರಿದರೆ ಯಾವುದೇ ಕಾರಣಕ್ಕೂ ಅಲ್ಲಿನ ನಿರಾಶ್ರಿತರಿಗೆ ನಮ್ಮೂರಿಗೆ ಸೇರಿದ ಗೋಮಾಳದಲ್ಲಿ ಸ್ಥಳಾವಾಕಾಶ ಕಲ್ಪಿಸಕೂಡದೆಂದು ಲಿಂಗಪ್ಪನಪಾಳ್ಯದವರು ವಾಗ್ವಾದ ನಡೆಸಿದ ಪ್ರಸಂಗ ಶಾಸಕರು ಹಾಗೂ ತಹಶೀಲ್ದಾರರ ಸಮಕ್ಷಮ ನಡೆಯಿತು.
ಇಂದು ಪಟ್ಟಣದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಕೊಡುತ್ತಿರುವಾಗಲೇ ಶಾಸಕರಿಗೆ ಎರಡು ಕಡೆಯವರು ತಂತಮ್ಮ ಅಹವಾಲು ಸಲ್ಲಿಸಿದರು. ನಿರಾಶ್ರಿತರಿಗೆ ತಮ್ಮ ಗ್ರಾಮದ ಬಳಿಯ ಗೋಮಾಳದಲ್ಲಿ ಜಾಗ ಕೊಡುವ ಬಗ್ಗೆ ಚಿಂತನೆ ನಡೆದಿರುವುದನ್ನು ಅರಿತ ಅಲ್ಲಿನ ಗ್ರಾಮಸ್ಥರು ಗ್ರಾಮದ ಪ್ರತಿಯೊಬ್ಬರು ಇಂದು ಶಾಸಕರ ಬಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸಾರಿ ಹಾಕುವ ಮುಖಾಂತರ ಗ್ರಾಮದ ನೂರಾರು ಜನರು ಪಾಲ್ಗೊಳ್ಳುವಂತೆ ನೋಡಿಕೊಂಡರು.
ಗ್ರಾಮದ ಪರವಾಗಿ ಮಾತನಾಡಿದ ಬೀರಣ್ಣ ಹಾಗೂ ಪ್ರಭಣ್ಣ ಗ್ರಾಮದವರು ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟ ಪ್ರದೇಶವನ್ನು ಯಾವುದೇ ಕಾರಣಕ್ಕೂ ಅನ್ಯಕಾರಣಗಳಿಗೆ ಕೊಡುವುದಕ್ಕೆ ಸಾಧ್ಯವಿಲ್ಲ.ಹುಳಿಯಾರು ಕೆರೆ ಅಂಗಳದಲ್ಲಿರುವವರು ನಿರ್ಗತಿಕರಲ್ಲ ಅಲ್ಲದೆ ಸ್ಥಳೀಯರೂ ಅಲ್ಲ, ಬೇರೆಡೆಯಿಂದ ಬಂದಂತವರಾಗಿದ್ದಾರೆ,ಅಲ್ಲಿನ ಜಮೀನುಗಳನ್ನು ಉತ್ತಮ ಬೆಲೆಗೆ ಮಾರಿಕೊಂಡು ಇಲ್ಲಿಗೆ ಬಂದು ಗುಡಿಸಲು ಹಾಕಿಕೊಂಡಿದ್ದಾರೆ. ಇಂತಹವರಿಗೆ ಯಾವುದೇ ಕಾರಣಕ್ಕೂ ನಮ್ಮೂರ ಹತ್ತಿರ ಪುನರ್ವಸತಿ ಕಲ್ಪಿಸಿಕೊಡಕೂಡದು ಎಂದು ಪಟ್ಟುಹಿಡಿದರು. ಗೋಮಾಳದ ಜಾಗ ಅನಾದಿಕಾಲದಿಂದಲೂ ಇದ್ದು ಅದನ್ನು ತಮ್ಮ ಗ್ರಾಮದವರಿಗೆ ಮೀಸಲಿರಿಸಬೇಕು ಬೇರೆ ಯಾರಿಗೂ ಕೊಡಕೂಡದು ಎಂದು ತಹಶೀಲ್ದಾರ್ ಅವರಿಗೆ ಧೃಢವಾಗಿ ತಿಳಿಸಿದರು.
ಈ ಮಾತು ಕೇಳಿದ ಕೆರೆ ಅಂಗಳದ ನಿವಾಸಿಗಳು ಏಕೆ ಆಗದು ಎಂದು ಚಕಾರವೆತ್ತಿದಾಗ ಮಾತಿನ ಚಕಮಕಿಯೇ ನಡೆಯಿತು.
ಇದೇ ಸಮಯದಲ್ಲಿ ಶಾಸಕರಿಗೆ ಮನವಿಪತ್ರ ಸಲ್ಲಿಸಿದ ಕೆರೆಬಳಿಯ ನಿವಾಸಿಗಳು ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ನಡೆದರೆ ಪಟ್ಟಣಾದ 6 ನೇ ವಾರ್ಡ್ ನ ಶಂಕರಪುರಬಡಾವಣೆಯ ನೂರಕ್ಕೂ ಹೆಚ್ಚು ಕುಟುಂಬದವರು ನಿರಾಶ್ರಿತರಾಗಲಿದ್ದೇವೆ , ಇಲ್ಲಿ ಹೆಚ್ಚಾಗಿ ಕೂಲಿ ಮಾಡಿಕೊಂಡೆ ಜೀವನ ನಡೆಸುವವರಾಗಿದ್ದು, ನಮಗೆ ಯಾವುದೇ ಆದಾಯದ ಮೂಲವಿಲ್ಲ ಹಾಗೂ ಬೇರೆಡೆ ಜಾಗವೂ ಸಹ ಇಲ್ಲ. ಒಂದು ವೇಳೆ ಕೆರೆತೆರವು ನಡೆದರೆ ನಾವೆಲ್ಲಾ ಬೀದಿಗೆ ಬೀಳುತ್ತೇವೆ. ಮೊದಲು ನಮಗೆ ಬೇರೆಡೆ ಪುನರ್ವಸತಿ ಕಲ್ಪಿಸಿ ನಂತರ ತೆರವು ಕಾರ್ಯಾಚರಣೆ ನಡೆಸಿ ಎಂದು ತಮ್ಮ ಬೇಡಿಕೆಯನ್ನು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮುಂದಿಟ್ಟರು.
ಸುಮಾರು ಗಂಟೆಗಳ ಕಾಲ ನಡೆದ ಮಾತಿನಚಕಮಕಿ ಆಲಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ , ಕೆರೆ ಒತ್ತುವರಿ ತೆರವು ಮಾಡೂವಂತೆ ಕೋರ್ಟ್ ಆದೇಶವಿದ್ದು ಅದರಂತೆ ಎಲ್ಲಡೆ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೆ ಹುಳಿಯಾರು ಕೆರೆ ಒತ್ತುವರಿ ತೆರವು ನಡೆದರೆ ಹೆಚ್ಚಿನ ಜನಕ್ಕೆ ತೊಂದರೆಯಾಗುತ್ತದೆ ಎಂಬುದು ತಮಗೂ ತಿಳಿದಿದೆ.ಈ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಮಾತನಾಡಿದ್ದು, ಇಲ್ಲಿನ ನಿವಾಸಿಗಳಿಗೆ ಬೇರೆಡೆ ಜಾಗ ಕಲ್ಪಿಸಿಕೊಟ್ಟನಂತರ ತೆರವು ಕಾರ್ಯ ನಡೆಸುವಂತೆ ಸೂಚಿಸಿದ್ದೇನೆ. ಪುನರ್ವಸತಿಗಾಗಿ ಕೆಲವು ಕಡೆ ಸ್ಥಳಪರಿಶೀಲನೆ ನಡೆಯುತ್ತಿದ್ದು ಕೇಶವಾಪುರದ ಬಳಿಯ ಜಾಗಕ್ಕೆ ವ್ಯಕ್ತಿಯೊಬ್ಬ ತಕರಾರು ಅರ್ಜಿ ಹಾಕಿ ಸ್ಟೇ ಮಾಡಿಸಿದ್ದು, ಸದ್ಯದಲ್ಲೇ ಸ್ಟೇ ತೆರವಾಗಲಿದ್ದು ಆನಂತರವಷ್ಟೆ ಕಾರ್ಯಾಚರಣೆ ಮುಂದುವರಿಯಲಿದೆ. ಇನ್ನು ಮೂರು ತಿಂಗಳು ಯಾವುದೇ ಕಾರ್ಯಾಚರಣೆ ನಡೆಸದಂತೆ ತಹಶಿಲ್ದಾರ್ ಅವರಿಗೆ ನಿರ್ದೇಶಿಸಲಾಗಿದೆ ಎಂದು ಭರವಸೆ ನೀಡಿದರು.
ಕೆರೆ ತರವಿನಿಂದ ನಿರಾಶ್ರಿತರಾಗುವವರ ಪಟ್ಟಿ ಸಿದ್ದ ಮಾಡಿ ಅವರಲ್ಲಿ ಯಾರು ಅರ್ಹ ಎಂಬುದನ್ನು ಗುರ್ತಿಸಿ ಅಂತಹವರಿಗೆ ಮಾತ್ರ ಪುನರ್ವಸತಿ ಕಲ್ಪಿಸಿಕೊಡುವುದಾಗಿ ತಿಳಿಸಿದರಲ್ಲದೆ, ಲಿಂಗಪ್ಪನ ಪಾಳ್ಯದ ಪಕ್ಕದಲ್ಲಿನ ಗೋಮಾಳದ ಜಾಗವನ್ನು ಯಾವುದೇ ಕಾರಣಕ್ಕೂ ಪುನರ್ವಸತಿ ಕಲ್ಪಿಸಲು ಬಳಸಲಾಗುವುದಿಲ್ಲ ಅದನ್ನು ಆ ಗ್ರಾಮಕ್ಕೆ ಬೇಕಾದ ಅವಶ್ಯ ಕಟ್ಟಡಗಳ ನಿರ್ಮಾಣಕ್ಕೆ ಅಥವಾ ಅಲ್ಲಿನ ನಿರಾಶ್ರಿತರಿಗೆ ನೀಡಲು ಮಾತ್ರ ಸಾಧ್ಯವೆಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕಾಮಾಕ್ಷಮ್ಮ, ಕೇವಲ ಅತಿಕ್ರಮಣದಾರರ ಪಟ್ಟಿ ಮಾಡೂವಂತೆ ಸೂಚಿಸಿದ್ದೇನೆ ಹೊರತು ತೆರವಿಗೆ ಮುಂದಾಗಿಲ್ಲ , ನೋಟಿಸ್ ಕೊಡದೆ ತೆರವು ಮಾಡಲಿಕ್ಕೆ ಸಾಧ್ಯವಿಲ್ಲ, ಕೇವಲ ಊಹಾಪೋಹದ ಮಾತುಗಳು ಇಂದಿನ ಕಾವೇರಿದ ಘಟನೆಗೆ ಕಾರಣಾವಾಗಿದೆ ಎಂದರು.
ಒಟ್ಟಾರೆ ತೆರವು ಕಾರ್ಯಾಚರಣೆ ಇನ್ನು ಮೂರು ತಿಂಗಳು ನಡೆಯುವುದಿಲ್ಲ ಎಂಬುದರಿಂದ ತೃಪ್ತರಾದ ಎರಡೂ ಕಡೆಯವರು ತೆರಳಿದ್ದರಿಂದ ವಿಕೋಪಕ್ಕೆ ತೆರಳಿದ ಘಟನೆ ಶಾಂತವಾಗಿ ಅಂತ್ಯ ಕಂಡಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ