ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234 ಕ್ಕೆ ಸಂಬಂಧಪಟ್ಟಂತೆ ಹುಳೀಯಾರು-ಶಿರಾ ಮಾರ್ಗ ಮಧ್ಯೆ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನು ಮಾಲೀಕರುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಜಮೀನಿನ ದಾಖಲಾತಿಗಳು, ಜಮೀನಿಗೆ ಬೇಕೆಂದಿರುವ ಪರಿಹಾರದ ಮೊತ್ತ ಇನ್ನಿತರ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ಮಾಹಿತಿವುಳ್ಳ ಅರ್ಜಿಯನ್ನು ಭರ್ತಿ ಮಾಡಿಸಿಕೊಳ್ಳುವ ಮೂಲಕ ವಿಶೇಷ ಭೂಸ್ವಾಧೀನಾಧಿಕಾರಿಗಳು ಸ್ವೀಕರಿಸಿದರು.
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳಿಗೆ ಭೂಮಾಲೀಕರು ದಾಖಲಾತಿಗಳನ್ನು ಸಲ್ಲಿಸಿದರು. |
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ದಾಖಲಾತಿ ಸ್ವೀಕಾರ ಸಭೆಯಲ್ಲಿ ರಸ್ತೆ ವಿಸ್ತರಣೆಯಿಂದ ಜಮೀನು ಕಳೆದುಕೊಂಡ ರೈತರು ಪರಿಹಾರ ಪಡೆಯುವ ನಿಟ್ಟಿನಲ್ಲಿ ಜಮೀನಿನ ಮೂಲ ದಾಖಲಾತಿ ಪತ್ರಗಳು, ಕ್ರಯಪತ್ರ, ಮ್ಯುಟೇಶನ್, ಪಹಣಿ, ಕಂದಾಯಪಾವತಿ ರಸೀದಿ, ಭೂಪರಿವರ್ತನೆ ಆದೇಶ, ಸಾಗುವಳಿಚೀಟಿ, ರೆವಿನ್ಯೂ ನಕ್ಷೆಯೊಂದಿಗೆ ಮುಂತಾದ ದಾಖಲೆಗಳ ನಕಲನ್ನು ವಿಶೇಷಭೂಸ್ವಾಧೀನಾಧಿಕಾರಿಯಾದ ರಶ್ಮಿ ಅವರಿಗೆ ನೀಡಿದರು.
ಪರಿಹಾರ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ರಶ್ಮಿ ಅವರು, ರಾಷ್ಟ್ರೀಯ ಹೆದ್ದಾರಿ 234 ಮಂಗಳೂರಿನಿಂದ ಪ್ರಾರಂಭವಾಗಿ ತಮಿಳುನಾಡಿನ ವಿಲ್ಲುಪುರಂಗೆ ಸಂಪರ್ಕ ಕಲ್ಪಿಸಲಿದ್ದು ಹುಳಿಯಾರು ಮಾರ್ಗವಾಗಿ ಶಿರಾವರೆಗೆ ಹಾದು ಹೋಗಿರುವ ಈ ರಸ್ತೆಗೆ ಸದ್ಯ ಭೂಸ್ವಾಧೀನ ಕಾರ್ಯ ಅಂತಿಮವಾಗಿದೆ ಎಂದರು. ಹುಳಿಯಾರು-ಶಿರಾ ಸೆಕ್ಷನ್ ಗೆ ಸಂಬಂಧಿಸಿದಂತೆ ಕಿಮೀ 243.30 ರಿಂದ 290.2 ವರೆಗೆ ಹುಳಿಯಾರು-ಬಳ್ಳೆಕಟ್ಟೆ-ಮಾರುಹೊಳೆ-ಹೊಯ್ಸಳಕಟ್ಟೆ-ಬೆಳ್ಳಾರ-ಬುಕ್ಕಾಪಟ್ಟಣ-ಮೇಕರೆಹಳ್ಳಿ ಮಾರ್ಗದ ವರೆಗೆ ಹೆದ್ದಾರಿ ವಿಸ್ತರಣೆಗೆ ಅವಶ್ಯ ಬೇಕಾಗಿರುವ ಜಮೀನನ್ನು ಹೆದ್ದಾರಿ ಕಾಯ್ದೆ ಅನ್ವಯ ವಶಪಡಿಸಿಕೊಂಡಿದ್ದು, ನಿಯಮದಂತೆ ಸಂಬಂಧಪಟ್ಟ ಜಮೀನುಗಳ ಮಾಲೀಕರ ಪಟ್ಟಿಯನ್ನು ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಭೂಮಾಲೀಕರಿಗೆ ನೋಟೀಸ್ ನೀಡಲಾಗಿದ್ದು , ಭೂಮಾಲೀಕರಿಗೆ ಅನುಕೂಲ ಮಾಡುವ ದೃಷ್ಠಿಯಿಂದ ಪ್ರಾಧಿಕಾರವೇ ಭೂಮಾಲೀಕರ ಬಳಿ ಬಂದು ದಾಖಲೆ ಸ್ವೀಕರಿಸಲಾಗುತ್ತಿದೆ ಎಂದರು.
ನೊಂದಣಿ ಕಛೇರಿಯಲ್ಲಿ ಅತಿಹೆಚ್ಚು ಬೆಲೆಗೆ ನೋಂದಣಿಯಾಗಿರುವ ದರದಂತೆ ಪರಿಹಾರ ವಿತರಿಸಲಾಗುವುದು, ಇನ್ನು ಹೆಚ್ಚಿನ ಬೆಲೆ ಬೇಕೆಂದಿದ್ದಲ್ಲಿ ಸ್ಥಳೀಯವಾಗಿ ಮಾರಾಟವಾಗಿರುವ ಜಾಗದ ದಾಖಲಾತಿಗಳನ್ನು ನೀಡಿದಲ್ಲಿ ಮಾತ್ರವೇ ಅದರಂತೆ ಪರಿಹಾರ ಹೆಚ್ಚಳ ಮಾಡಬಹುದೆಂದರು. ವಶಪಡಿಸಿಕೊಂಡ ಜಮೀನಲ್ಲಿ ಭೂಮಿಯನ್ನು ಹೊರತುಪಡಿಸಿ ತಂತಿಬೇಲಿ, ಬೆಳೆ,ಬೋರ್ ವೆಲ್, ತೋಟಗಾರಿಕೆ ಬೆಳೆಗಳು ಮುಂತಾದವುಗಳಿದ್ದಲ್ಲಿ ಅವುಗಳಿಗೂ ಸಹ ನಿಗದಿ ಪಡಿಸಿದ ಮೊತ್ತವನ್ನು ಪರಿಹಾರವಾಗಿ ಪಡೆಯಬಹುದೆಂದರು.
ಭೂಮಿ ಕಳೆದುಕೊಂಡ ಹೋಬಳಿಯ ನಾನಾ ಗ್ರಾಮಗಳ ರೈತರು ಸಧ್ಯ ಪ್ರಾಧಿಕಾರ ನೀಡುವ ಹಣವನ್ನು ಪಡೆದುಕೊಂಡು ನಂತರ ಹೆಚ್ಚುವರಿ ಪರಿಹಾರ ಕೋರಿ ದಾಖಲಾತಿಗಳೊಂದಿಗೆ ಅರ್ಜಿಸಲ್ಲಿಸಬಹುದು . ಜಿಲ್ಲಾಧಿಕಾರಿಗಳು ಆರ್ಬಿಟ್ರೇಟರ್ ಆಗಿರುವ ಸಮಿಯು ಹೆಚ್ಚಿನ ದರ ನೀಡುವಂತೆ ನಿರ್ದೇಶಿಸಿದಲ್ಲಿ ವ್ಯತ್ಯಾಸದ ಮೊತ್ತವನ್ನು ಬಡ್ಡಿಸೇರಿಸಿ ನೀಡಲಾಗುವುದು ಎಂದರು.
ರೈತರ ಸಮಸ್ಯೆ : ಸರ್ಕಾರದಿಂದ ಪರಿಹಾರ ದೊರೆಯುವುದು ಖಚಿತವಿದ್ದರೂ ಸಹ ಜಮೀನಿನ ದಾಖಲೆಗಳನ್ನು ಒದಗಿಸಲು ರೈತರು ಪರದಾಡುವಂತಾಯಿತು. ಕೆಲ ರೈತರುಗಳ ಜಮೀನಿನ ಅನುಭವದಲ್ಲಿದ್ದರೂ ಪಹಣಿ,ಮ್ಯುಟೇಷನ್ ಗಳು ಬದಲವಣೆಯಾಗದೆ, ಸಾಗುವಳಿ ಚೀಟಿ ಇದ್ದರೂ ಪೋಡಾಗದೆ ಇನ್ನು ಅನೇಕ ಸಮಸ್ಯೆಗಳಿಂದ ಕೂಡಿದ್ದು ದಾಖಲೆಗಳ ಸಲ್ಲಿಸುವಿಕೆಯಲ್ಲಿ ಗೊಂದಲ ಮೂಡಿತ್ತು.
ಇವರೊಟ್ಟಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುರೇಶ್, ಅಜ್ಜಪ್ಪ, ಸದಾನಂದ್ ಹಾಗೂ ಭೂಸ್ವಾಧೀನ ಪ್ರಾಧಿಕಾರಾದ ಅಧಿಕಾರಿಗಳು ಆಗಮಿಸಿದ್ದರು. ಕಂಪನಹಳ್ಳಿ,ಮಾರುಹೊಳೆ,ಬೆಳ್ಳಾರ, ಹೊಯ್ಸಳಕಟ್ಟೆ,ಗಾಣಧಾಳು,ಯಗಚಿಹಳ್ಳಿ,ದಸೂಡಿ,ದಬ್ಬಗುಂಟೆ ಮುಂತಾದ ಭಾಗಗಳ ರೈತರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ