ಇಲ್ಲಿನ ಸರ್ಕಾರಿ ಪಿಯುಸಿ ಕಾಲೇಜಿನ ಎನ್.ಎಸ್.ಎಸ್.ಘಟಕದವತಿಯಿಂದ ಆಯೋಜಿಸಿದ್ದ ಪ್ರಕೃತಿ ವಿಕೋಪಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಚಿ.ನಾ.ಹಳ್ಳಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆಯನ್ನು ಶುಕ್ರವಾರದಂದು ಕಾಲೇಜು ಆವರಣದಲ್ಲಿ ಪ್ರಾಯೋಗಿಕವಾಗಿ ನಡೆಸಿಕೊಟ್ಟರು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಕಿ ನಂದಿಸಲು ಬಳಸುವ ಸಾಧನಗಳ ಬಗ್ಗೆ ಅಗ್ನಿಶಾಮಕದಳದ ಪಂಚಾಕ್ಷರಯ್ಯ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. |
ಅಗ್ನಿಶಾಮಕದಳದ ಪ್ರಭಾರ ಠಾಣಾಧಿಕಾರಿ ಪಂಚಾಕ್ಷರಯ್ಯ ಮಾತನಾಡಿ , ಬೆಂಕಿ ಅಂದರೆ ಶಾಖ ಮಾನವನಿಗೆ ಅವಶ್ಯಕವಾಗಿ ಬೇಕೆಬೇಕು. ಅದರಿಂದ ನಮಗೆ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವಿದ್ದು , ಬೆಂಕಿಯ ಬಳಕೆಯಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು ಎಂದರು. ಬೆಂಕಿ ವಿವಿಧ ರೀತಿಯಲ್ಲಿ ಪಸರಿಸಲಿದ್ದು ಅದಕ್ಕೆ ಅನುಗುಣವಾಗಿ ಬೆಂಕಿನಂದಿಸಲು ಕೆಲ ಸಾಧನಗಳು, ರಾಸಾಯನಿಕ ವಸ್ತುಗಳು,ತಾಂತ್ರಿಕ ವ್ಯವಸ್ಥೆಗಳನ್ನು ಅಯಾ ಸಂದರ್ಭಕ್ಕನುಗುಣವಾಗಿ ಬಳಕೆ ಮಾಡುವುದಾಗಿ ತಿಳಿಸಿದರು. ಪ್ರಸ್ತುತದಲ್ಲಿ ಎಲ್ಲರ ಮನೆಯಲ್ಲೂ ಎಲ್.ಪಿ.ಜಿ ಗ್ಯಾಸ್ ಇದ್ದು ಅದರ ಸೋರುವಿಕೆ ಉಂಟಾದಾಗ ಮರಳು, ಒದ್ದೆ ಮಾಡಿದ ಗೋಣಿಚೀಲ ಬಳಕೆ ಮಾಡುವಂತೆ ಹಾಗೂ ಯಾವುದೇ ಕಾರಣಕ್ಕೂ ಸ್ವಿಚ್, ಬೆಂಕಿಪೊಟ್ಟಣ ಹಚ್ಚುವುದು, ಯಾವುದೇ ರೀತಿಯ ಕಿಡಿ ಉಂಟಾಗುವಂತ ವಸ್ತುಗಳನ್ನು ಬಳಸಬಾರದು ಎಂದು ಎಚ್ಚರಿಸಿದರು. ಎಲ್ಲಿಯಾದರು ಆಕಸ್ಮಿಕವಾಗಿ ಬೆಂಕಿ ಬಿದ್ದಾಗ ಅಗ್ನಿಶಾಮಕ ಇಲಾಖೆಗೆ ಕರೆ ಮಾಡುವಾಗ ಸರಿಯಾದ ವಿಳಾಸ ಹಾಗೂ ತಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಬೇಕು, ಇದರಿಂದ ನಾವುಗಳು ಘಟನಾ ಸ್ಥಳಕ್ಕೆ ಧಾವಿಸಲು ಅನುಕೂಲವಾಗುತ್ತದೆ ಎಂದರು.
ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ಅಗ್ನಿಶಾಮಕದಳದವರು ಕೃತಕವಾಗಿ ಬೆಂಕಿ ಸೃಷ್ಠಿಸಿ ಬೆಂಕಿನಂದಿಸುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. |
ಕಾಲೇಜಿನ ಆವರಣದಲ್ಲಿ ಒಂದು ಗುಡಿಸಲು ಸಿದ್ದ ಮಾಡಿ ಅದಕ್ಕೆ ಬೆಂಕಿ ತಗುಲಿಸಿ ಅಗ್ನಿಶಾಮಕ ದಳದವರು ಅದನ್ನು ಯಾವರೀತಿ ನಂದಿಸುತ್ತಾರೆ ಎಂಬುದನ್ನು ಹಾಗೂ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಬಿದ್ದಾಗ ಅಲ್ಲಿನ ಜನರನ್ನು ಯಾವರೀತಿ ರಕ್ಷಿಸುವುದು ಎಂಬುದರ ಬಗ್ಗೆ ಮತ್ತು ಬೆಂಕಿ ನಂದಿಸಲು ಬಳಸುವ ಸಾಧನಗಳನ್ನು ತೋರಿಸುತ್ತಾ, ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವುಂಟಾಗುವಂತೆ ಮಾಡಿದರು.
ಪ್ರಾಚಾರ್ಯ ನಟರಾಜ್ ಅಧ್ಯಕ್ಷತೆವಹಿಸಿದ್ದು, ಉಪಪ್ರಾಂಶುಪಾಲೆ ಇಂದಿರಾ, ಎಸ್ಡಿಎಂಸಿ ಮಹೇಶ್, ಎನ್.ಎಸ್.ಎಸ್.ಅಧಿಕಾರಿ ಯೋಗೀಶ್, ಉಪನ್ಯಾಸಕರಾದ ಶಿವರುದ್ರಯ್ಯ,ಶಶಿಭೂಷಣ್, ಅನಂತರಾಮಯ್ಯ,ರೇವಣ್ಣ, ಶಿಕ್ಷಕ ಲೋಕೇಶ್ ಸೇರಿದಂತೆ ಅಗ್ನಿಶಾಮಕದಳದ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ