ಕೆಇಬಿ, ಹಾಸ್ಟೆಲ್ , ಐಬಿ ಕಾಂಪೌಂಡ್ ಮುಂದೆ ಅಂಗಡಿಯಿಡಲು ಸಜ್ಜು ತಹಸೀಲ್ದಾರ್ ರಿಂದ ಮತ್ತೊಮ್ಮೆ ತೆರವು : ಅನಧಿಕೃತ ಅಂಗಡಿಯಿಟ್ಟರೆ ಕಾನೂನುಕ್ರಮ
ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಅಂಗಡಿಗಳನ್ನು ಕಳೆದುಕೊಂಡ ಅಂಗಡಿದಾರರು ರಸ್ತೆಬದಿಯ ಸರ್ಕಾರಿ ಹಾಗೂ ಸಾರ್ವಜನಿಕ ಜಾಗಗಳಲ್ಲಿ ತರಾತುರಿಯಿಂದ ಅಂಗಡಿಗಳನ್ನಿಡಲು ಜಾಗಗುರುತು ಮಾಡಿಕೊಳ್ಳಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿ, ತಹಸೀಲ್ದಾರ್ ಕಾಮಾಕ್ಷಮ್ಮ ಸ್ಥಳಕ್ಕಾಗಮಿಸಿ ಅಂಗಡಿದಾರರು ಗುರುತಿಗಾಗಿ ನೆಟ್ಟಿದ್ದ ಸರ್ವೆಗಳನ್ನು ತೆರವು ಮಾಡಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಇಡದಂತೆ ಎಚ್ಚರಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಅಂಗಡಿಗಳನ್ನಿಡದಂತೆ ಪಿಡಿಓ ಗಮನಹರಿಸುವಂತೆ ತಾಕೀತು ಮಾಡಿದ ತಹಸೀಲ್ದಾರ್ ಕಾಮಾಕ್ಷಮ್ಮ. |
. ಹುಳಿಯಾರಿನ ಕೆರೆಅಂಗಳದಲ್ಲಿ ಹೆದ್ದಾರಿಗೆ ಲಗತ್ತಾಗಿ ಸುಮಾರು ೮೦ಕ್ಕೂ ಅಧಿಕ ಅಂಗಡಿಗಳನ್ನು ಕಳೆದ ಎರಡು ದಿನಗಳಿಂದಷ್ಟೆ ತೆರವುಗೊಳಿದ್ದರಿಂದ ಬೀದಿಗೆ ಬಿದ್ದ ಅಂಗಡಿದಾರರು ಕೆರೆ ಪ್ರದೇಶ ಹೊರತುಪಡಿಸಿ ಇತರೆ ಸರ್ಕಾರಿ ಜಾಗಗಳಾದ ಬೆಸ್ಕಾಂ ಕಛೇರಿ, ಬಾಲಕರ ಹಾಸ್ಟೆಲ್ ಹಾಗೂ ಪರಿವೀಕ್ಷಣಾ ಮಂದಿರದ ಕಾಂಪೌಡ್ ಮುಂದಿನ ಜಾಗದಲ್ಲಿ ಅಂಗಡಿಗಳನ್ನಿಡಲು ಮುಂದಾದರು. ಹುಳಿಯಾರು-ಹಿರಿಯೂರು ಎಸ್.ಎಚ್-೧೯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಅಂಗಡಿಗಳನ್ನಿಡಲು ತಮಗೆ ಬೇಕಾದ ಜಾಗವನ್ನು ತಾವೇ ಗುರ್ತಿಸಿಕೊಂಡ ಕೆಲ ಅಂಗಡಿದಾರರು ಗಿಡಗಂಟೆಗಳನ್ನು ಕಡಿದು ಸರ್ವೆಮರಗಳನ್ನು ನೆಟ್ಟರೆ,ಮತ್ತೆಕೆಲವರು ತಾವೇ ಆ ಜಾಗದಲ್ಲಿ ನಿಂತು ಇಷ್ಟು ಜಾಗ ನನ್ನದು ಎಂದು ಹೇಳುತ್ತಿದ್ದರು.
ವಿಚಾರ ಕ್ಷಣಾರ್ಧದಲ್ಲೆ ಹರಡಿ ಹೆದ್ದಾರಿಯಲ್ಲಿ ಒಂದಿಚು ಜಾಗಬಿಡದಂತೆ ಆಕ್ರಮಿಸಿಕೊಂಡರು. ಜಾಗ ಸಿಗದ ಕೆಲವರು ಹತಾಶರಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮಿಂಚಿನಂತೆ ಸುದ್ದಿ ಮುಟ್ಟಿಸಿದರೆ ಕೆಇಬಿ ಅಧಿಕಾರಿಗಳು ಸಹ ಕಛೇರಿ ಮುಂದೆ ತೆರವು ಮಾಡಲು ಸೂಚಿಸಿದ್ದಾರೆ .
ಸ್ಥಳಕ್ಕಾಗಮಿಸಿದ ಪಿಎಸೈ ಪ್ರವೀಣ್ ಕುಮಾರ್ ಅವರು ಅಂಗಡಿದಾರರೊಂದಿಗೆ ಚರ್ಚಿಸಿ ಇಲ್ಲಿ ಅಂಗಡಿಯಿಡಲು ಯಾರು ಒಪ್ಪಿಗೆ ಕೊಟ್ಟಿದ್ದಾರೆ ಈರೀತಿ ಏಕಾಏಕಿ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯನ್ನಿಡಲು ಮುಂದಾಗುವುದು ಕಾನೂನುಬಾಹಿರ ಎಂದು ಅಂಗಡಿದಾರರನ್ನು ತಡೆಯುವಲ್ಲಿ ಮುಂದಾದರು.
ತಹಸೀಲ್ದಾರ್ ಕಾಮಾಕ್ಷಮ್ಮ ,ತಾಲ್ಲೂಕ್ ಪಂಚಾಯ್ತಿಯ ಇಓ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಪಿಡಿಓ ಅಡವೀಶ್ ಅವರನ್ನು ಕರೆಸಿ ಈ ಜಾಗದ ಬಗ್ಗೆ ಮಾಹಿತಿ ಪಡೆದು ನಂತರ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಿಡಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ, ಸರ್ಕಾರಿ ಕಛೇರಿಯ ಮುಂದಿನ ಜಾಗಕ್ಕೆ ಪೆನ್ಸಿಂಗ್ ಮಾಡಿ ಇದು ಸರ್ಕಾರಿ ಜಾಗ ಅತಿಕ್ರಮಣ ನಿಷಿದ್ಧ ಎಂದು ಬೋರ್ಡ್ ಹಾಕಿ . ಒಂದು ವೇಳೆ ಯಾರಾದರೂ ಅನಧಿಕೃತವಾಗಿ ಅಂಗಡಿಗಳನ್ನಿಟ್ಟರೆ ಅವರೆ ಮೇಲೆ ಕಾನೂನುಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅಂಗಡಿದಾರರು ಗುರ್ತಿಗಾಗಿ ನೆಟ್ಟಿದ್ದ ಸರ್ವೆಮರಗಳನ್ನು ಪಂಚಾಯ್ತಿಯ ವಶಕ್ಕೆ ಪಡೆಯುವಂತೆ ಸೂಚಿಸಿದರು.
ಅಂಗಡಿದಾರರ ಮನವಿ ಆಲಿಸುತ್ತಿರುವ ತಹಸೀಲ್ದಾರ್ ಹಾಗೂ ಇಓ ಕೃಷ್ಣಮೂರ್ತಿ. |
ಮಾತಿನಚಕಮುಕಿ: ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಿಡುವುದು ತಪ್ಪಾದರೆ ಹುಳಿಯಾರಿನ ತುಂಬಾ ಸರ್ಕಾರಿ ಜಾಗ ಅತಿಕ್ರಮಿಸಿ ಅಂಗಡಿಗಳನ್ನಿಟ್ಟಿರುವುದನ್ನು ತೆರವುಗೊಳಿಸಿ ಅಲ್ಲದೆ ಹೆದ್ದಾರಿ ಜಾಗ ಕಂದಾಯ ಇಲಾಖೆಯವರಿಗೆ ಸೇರದಿರುವುದರಿಂದ ನಮ್ಮನ್ನು ತೆರವುಗೊಳಿಸಲು ತಮಗೆ ಅಧಿಕಾರವೇಯಿಲ್ಲ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ್ಯ ಕೃಷ್ಣಪ್ಪ ಮಾತಿನಚಕಮುಕಿ ನಡೆಸಿದರು.
ಅಂಗಡಿದಾರು ಇಲ್ಲಿಯೂ ಜಾಗದ ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡು ನಮ್ಮ ಅಂಗಡಿಗಳನ್ನು ಸ್ವಲ್ಪವೂ ಕರುಣೆಯಿಲ್ಲದೆ ತೆರವು ಮಾಡಿದ್ದೀರಿ. ಈಗ ನಾವು ಬೀದಿಗೆ ಬಿದ್ದಿದ್ದು ಜೀವನಕ್ಕಾಗಿ ಅಂಗಡಿಯಿಡಲು ಸೂಕ್ತ ಜಾಗ ಕೊಡಿಸಿ ಎಂದು ಅಂಗಲಾಚಿದರು.
ಈವೇಳೆ ಡಿಟಿ ಸತ್ಯನಾರಾಯಣ್,ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,ಸದಸ್ಯರುಗಳಾದ ರಾಘವೇಂದ್ರ, ವೆಂಕಟಮ್ಮ, ಬಾಲರಾಜ್,ಪ್ರದೀಪ, ಏಜೆಂಟ್ ಕುಮಾರ್ ,ಕರವೇ ಶ್ರೀನಿವಾಸ್, ಬಸವರಾಜು,ಇನ್ನಿತರರಿದ್ದರು.
----------------
ಪಟ್ಟಣದಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರ್ತಿಸಿ ಸರ್ವೆ ಮಾಡಿ ಅತಿಕ್ರಮಣದಾರರ ಪಟ್ಟಿ ಮಾಡಿ. ಸೂಕ್ತ ನೋಟೀಸ್ ನೀಡಿದ ನಂತರ ತೆರವುಗೊಳಿಸಿ : ಇಓ ಕೃಷ್ಣಮೂರ್ತಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ