ಹುಳಿಯಾರು ಹೋಬಳಿ ಗಾಣಧಾಳು ಗಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸೇರಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಶುಕ್ರವಾರ ಘಟಿಸಿದೆ.
ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದಲ್ಲಿ ಖಾತ್ರಿಹಣ ಬಿಡುಗಡೆಗೆ ಒತ್ತಾಯಿಸಿ ಸಾರ್ವಜನಿಕರು ಗ್ರಾ.ಪಂ ಕಛೇರಿಗೆ ದಿಢೀರ್ ಬೀಗ ಹಾಕಿ ಪ್ರತಿಭಟನೆ ನಡೆಸಿದರು. |
ಈ ಭಾಗದ ಅನೇಕ ರೈತರು ಖಾತ್ರಿ ಯೋಜನೆಯಡಿ ಶೌಚಾಲಯ, ಹಿಂಗುಗುಂಡಿ, ದನದಕೊಟ್ಟಿಗೆ, ಕೃಷಿ ಹೊಂಡ,ಚೆಕ್ ಡ್ಯಾಂ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಿದ್ದು ಸೂಕ್ತ ದಾಖಲೆಗಳನ್ನು ನೀಡಿದ್ದರೂ ಸಹ ಹಣ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಹಿಂದೇಟಾಕುತ್ತಿದ್ದಾರೆ. ಈ ಸಂಬಂಧ ಈಗಾಗಲೇ ತಾಲ್ಲೂಕು ಪಂಚಾಯ್ತಿ ಇಓ ಅವರು ಗ್ರಾ.ಪಂ. ಅಧಿಕಾರಿಗಳಿಗೆ ಎನ್.ಎಂ.ಆರ್. ತೆಗೆಯಲು ಆದೇಶ ನೀಡಿ, ಅದರಂತೆ ಕೆಲವು ರೈತರು ಈಗಾಗಲೇ ಎನ್.ಎಂ.ಆರ್ ತೆಗೆದು ತಿಂಗಳು ಕಳೆಯುತ್ತಾ ಬಂದರೂ ಸಹ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾಮಗಾರಿಗಳ ಅನುಷ್ಠಾನಗೊಳಿಸಿಲ್ಲ. ಈ ಬಗ್ಗೆ .ಪಂಚಾಯ್ತಿ ಪಿಡಿಓ ಅವರನ್ನು ಕೇಳಿದರೆ ಅನುಷ್ಠಾನಾಧಿಕಾರಿ ಥಮ್ ಇಂಪ್ರೆಷನ್ ಕೊಡಬೇಕು ಅದುವರೆಗೂ ಹಣ ಬಿಡುಗಡೆಯಾಗುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಸಾಲಸೂಲ ಮಾಡಿ ಕಾಮಗಾರಿಗಳನ್ನು ಮುಗಿಸಿದ ತಾಳ್ಮೆಗೆಟ್ಟ ರೈತರು ಹಾಗೂ ಸಾರ್ವಜನಿಕರು ರೋಷಗೊಂಡು ಕಚೇರಿಗೆ ಆಗಮಿಸಿ ದಿಢೀರ್ ಬೀಗಹಾಕಿ ಪ್ರತಿಭಟಿಸಿದರು. ಈ ವೇಳೆ ಕಚೇರಿಯಲ್ಲಿದ್ದ ಅಧ್ಯಕ್ಷರೂ ರೈತರ ಸಮಸ್ಯೆಯನ್ನು ಕೇಳಿ ಅವರೂ ಸಹ ಪ್ರತಿಭನೆಯಲ್ಲಿ ಸೇರಿಕೊಂಡು ಖಾತ್ರಿ ಹಣ ಬಿಡುಗಡೆಗೆ ಒತ್ತಾಯಿಸಿದರಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದರು.
ವಿಷಯ ತಿಳಿದ ಇಓ ಅವರು ಸಂಬಂಧಪಟ್ಟ ಕೃಷಿ ಇಲಾಖೆಯ ಅನುಷ್ಠಾನಾಧಿಕಾರಿ ನೂರುಲ್ಲಾ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದರು. ಸಂಪೂರ್ಣ ಕಾಮಗಾರಿ ಆದವುಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ ಪ್ರಕ್ರಿಯೆ ಸ್ವಲ್ಪ ತಡವಾಗುತ್ತಿದೆ ಶೀಘ್ರವೇ ಕೆಲಸ ಮಾಡುವುದಾಗಿ ತಿಳಿಸಿದರೂ ಸಹ ಪ್ರತಿಭಟನಾ ನಿರತರು ಇದ್ಯಾವುದನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದರು. ನಂತರ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನೂರುಲ್ಲಾ ಅವರು ಈಗಲೇ ಥಮ್ ಇಂಪ್ರೆಷನ್ ನೀಡಿ ನಾಳೆಯಿಂದಲೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಹೇಳಿ ಪ್ರತಿಭಟನಾ ನಿರತರ ಮನವೋಲಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ತಾ.ಪಂ.ಸದಸ್ಯ ಜಿ.ಆರ್.ಸೀತಾರಾಮಯ್ಯ, ಗ್ರಾ.ಪಂ.ಅಧ್ಯಕ್ಷ ಕೆ.ವೈ.ಶಿವಮೂರ್ತಿ, ಮುಖಂಡರಾದ ಆಟೋಮೋಹನ್, ಏಕಾಂತಯ್ಯ, ಎಂ.ಎಲ್.ರಾಮಯ್ಯ, ಜಿ.ಬಿ.ಪ್ರಕಾಶ್, ಜಿ.ಎಂ.ರವಿಶಂಕರ್, ವೆಂಕಟೇಶ್, ಚಿದಾನಂದ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ