ನೀರಿನ ಅಶ್ರಯ ತಾಣಗಳಾಗಿದ್ದ ಕೆರೆ,ಕಟ್ಟೆ,ಬಾವಿಗಳು ಬರಿದಾಗಿ ನೀರಿಗಾಗಿ ಜನ ಹಾಹಾಕಾರ ಪಡುವಂತಹ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಹೆಚ್ಚುತ್ತಿರುವ ಬೋರ್ ವೆಲ್ ಗಳು ಕಾರಣವಾಗಿದ್ದು ಅಂತರ್ಜಲ ಬತ್ತಿ ನೀರಿನ ಆಶ್ರಯತಾಣಗಳು ಮಾಯವಾಗುತ್ತಿವೆ ಎಂದು ಚಿತ್ರದುರ್ಗದ ಖ್ಯಾತ ಭೂಗರ್ಭ ಶಾಸ್ತ್ರಜ್ಞ ದೇವರಾಜರೆಡ್ಡಿ ವಿಷಾಧಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಳೆ ನೀರು ಕೊಯ್ಲು-ಕೃತಕ ಬರಕ್ಕೆ ಶಾಶ್ವತ ಪರಿಹಾರ" ವಿಷಯ ಕುರಿತು ಭೂಗರ್ಭ ಶಾಸ್ತ್ರಜ್ಞ ದೇವರಾಜರೆಡ್ಡಿ ಉಪನ್ಯಾಸ ನೀಡಿದರು. |
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್, ರೈತಸಂಘದ ಸಹಯೋಗದಲ್ಲಿ " ನೀರು-ನೀರು-ನೀರು, ನೀರೆಲ್ಲವೂ ತೀರ್ಥ- ತೀರ್ಥವೆಲ್ಲವೂ ನೀರು " ವಿಷಯದಡಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ : ಮಳೆ ನೀರು ಕೊಯ್ಲು-ಕೃತಕ ಬರಕ್ಕೆ ಶಾಶ್ವತ ಪರಿಹಾರ" ವಿಷಯ ಕುರಿತು ಉಪನ್ಯಾಸ ನೀಡಿದರು.
ಅತಿ ಹೆಚ್ಚು ಬೋರ್ ವೆಲ್ ಗಳನ್ನು ಕೊರೆಸಿ ಭೂಮಿಯಲ್ಲಿನ ನೀರನ್ನು ಹೀರುವ ಮೂಲಕ ಭೂಮಿಯನ್ನು ಬರಡಾಗುವಂತೆ ಮಾಡುತ್ತಿದ್ದೇವೆ ಹಾಗೂ ಇದರಿಂದಾಗಿ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗುವಂತೆ ಮಾಡುತ್ತಿದ್ದೇವೆ ಎಂದರು. ಕಳೆದ ೪೦ ವರ್ಷದಿಂದ ಈಚೆಗೆ ಬೋರ್ ವೆಲ್ ಗಳ ಹಾವಳಿ ಹೆಚ್ಚಿದ್ದು ಯಾವುದೇ ಹಂಗಿಲ್ಲದೆ ಸಾವಿರಾರು ಅಡಿವರೆಗೂ ಭೂಮಿಯನ್ನು ಕೊರೆಯುವ ಕಾರ್ಯ ಮಾಡುತ್ತಿದ್ದೇವೆ ಇದರಿಂದ ಹೆಚ್ಚಿನ ದುಷ್ಫರಿಣಾಮ ಎದುರಾಗಲಿದ್ದು ಮುಂದೊಂದು ದಿನ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗುವ ಸಂಭವವಿದೆ ಎಂದು ಎಚ್ಚರಿಸಿದರು.
ಪ್ರಪಂಚದಲ್ಲೇ ಹೆಚ್ಚು ಮಳೆಯಾಗುವ ದೇಶಗಳ ಸಾಲಿನಲ್ಲಿ ಭಾರತಕ್ಕೆ ೨ ನೇ ಸ್ಥಾವವಿದ್ದರೂ ಸಹ ನಾವು ಜಲ ಮರುಪೂರಣ ಮಾಡದೆ ಅನಗತ್ಯವಾಗಿ ಬಳಸುತ್ತಾ ನೀರಿಗಾಗಿ ಪರದಾಡುತ್ತಿದ್ದೇವೆ ಎಂದರು. ನೀರಿನ ಸಂರಕ್ಷಣೆ ಮಾಡುವಲ್ಲಿ ನಾವು ಎಚ್ಚೆತ್ತುಕೊಳ್ಳದೇಹೋದರೆ ಇಂದು ೨೦ ರೂ ಗೆ ೧ ಲೀ ನೀರು ಸಿಗುತ್ತಿದೆ ಮುಂದೊಂದು ದಿನ ಇನ್ನೂ ಅಧಿಕ ಬೆಲೆ ತೆತ್ತಬೇಕಾಗುತ್ತದೆ ಎಂದರು.
ಮಳೆ ನೀರು ಕೊಯ್ಲ : ನೀರಿನ ಸಂರಕ್ಷಣೆಯಲ್ಲಿ ಮಳೆ ನೀರುಕೊಯ್ಲ ಪ್ರಮುಖವಾಗಿದ್ದು ಮಳೆಗಾಲದಲ್ಲಿ ಸಿಗುವ ನೀರನ್ನು ಭೂಮಿಗೆ ಇಂಗುವಂತೆ ಮಾಡಿಬೇಕು.ತೋಟ, ಹೊಲಗಳಲ್ಲಿ ಒಡ್ಡು, ಬದು, ಚೆಕ್ ಡ್ಯಾಂ, ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು ಭೂಮಿಗೆ ಇಂಗುವಂತೆ ಮಾಡಿ ಎಂದು ಸಲಹೆ ನೀಡಿದರು.ನಾವು ನಿತ್ಯ ಬಳಸುವ ನೀರಿನಲ್ಲಿ ಅನೇಕ ವಿಷಯುಕ್ತ ಅಂಶಗಳಿದ್ದು ಅದನ್ನೇ ಬಳಸುತ್ತೇವೆ ಹೊರತು ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟುಮಾಡದ ಮಳೆ ನೀರನ್ನು ಕುಡಿಯಲು ಹೆಚ್ಚು ಮಂದಿ ಮುಂದಾಗುತ್ತಿಲ್ಲ ಎಂದರು. ಮಳೆ ನೀರನ್ನು ಹೆಚ್ಚು ಖರ್ಚಿಲ್ಲದೆ ನಾವೇ ಸ್ವತ: ಸಂಸ್ಕರಣೆ ಮಾಡಿ ಕುಡಿಯಲು ಬಳಸಬಹುದಾಗಿದ್ದು ಒಮ್ಮೆ ಸಂಸ್ಕರಿಸಿದ ಮಳೆ ನೀರನ್ನು ಐದಾರು ವರ್ಷಗಳ ಕಾಲ ಕುಡಿಯಬಹುದು ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಒಂದು ಬೋರ್ ವೆಲ್ ನಿಂತು ಹೋಯಿತೆಂದು ಮತ್ತೊಂದು ಬೋರ್ ವೆಲ್ ಕೊರೆಸುವ ಬದಲು ಆ ಬೋರ್ ವೆಲ್ ಸುತ್ತ ಮಳೆ ನೀರು ಇಂಗುವ ವ್ಯವಸ್ಥೆ ಮಾಡುವ ಕಾರ್ಯಮಾಡುವಂತೆ ತಿಳಿಸಿದರು.
ನೀರಿನ ಅನಗತ್ಯ ಬಳಕೆ ಬೇಡ : ನೀರಿಗೆ ತನ್ನದೇ ಆದ ಮೌಲ್ಯವಿದ್ದು ಅದರ ಬಳಕೆ ಮಾಡುವಲ್ಲಿಯೂ ಸಹ ಎಚ್ಚರವಹಿಸಬೇಕು, ಅನಗತ್ಯವಾಗಿ ನೀರನ್ನು ಪೋಲು ಮಾಡುವ ಬದಲು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕು ಎಂದರು. ನಮ್ಮಲ್ಲೇ ದೊರೆಯುವ ನೀರನ್ನು ಬಳಸಿ ಅನೇಕ ವಿದೇಶಿ ಕಂಪನಿಗಳು ಬಗೆಬಗೆಯ ಪಾನೀಯಗಳನ್ನು ತಯಾರಿಸಿ ಅಧಿಕ ಬೆಲೆಗೆ ನಮಗೆ ಮಾರುತ್ತಿದ್ದಾರೆ ಎಂದರು. ಜೀವಜಲವಾಗಿರುವ ನೀರಿನ ಸದ್ಬಳಕೆ ಮಾಡುವಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಬಿಳಿಗಿರಿ ಕೃಷ್ಣಮೂರ್ತಿ, ಉಪನ್ಯಾಸಕರಾದ ಶಂಕರಲಿಂಗಯ್ಯ, ಇಬ್ರಾಹಿಂ, ಹನುಂತಪ್ಪ, ಶ್ರೀನಿವಾಸ್, ಶಿವಯ್ಯ, ಚಂದ್ರಮೌಳಿ,ಕುಮಾರಸ್ವಾಮಿ, ಗ್ರಂಥಪಾಲಕ ಲೋಕೇಶ್ ಸೇರಿದಂತೆ ರೈತತಸಂಘದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ