ಪಲ್ಸ್ ಪೋಲಿಯೋದಂತಹ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸ್ಥಳೀಯ ಪಂಚಾಯ್ತಿ ಹಾಗೂ ಜವಬ್ದಾರಿ ಹೊತ್ತ ರೋಟರಿ ಸಂಸ್ಥೆಯವರು ನಿರ್ಲಕ್ಷ್ಯವಹಿಸಿದ ಕಾರಣ ಮುಂಜಾನೆ ಕೆಲ ಸಮಯ ಪೋಲಿಯೋ ಹನಿ ಹಾಕಲು ಬಂದ ಕಾರ್ಯಕರ್ತೆಯರು ಸೂಕ್ತ ಸ್ಥಳ ದೊರೆಯದೆ ಪರದಾಡಿದರು.
ಹುಳಿಯಾರು ಬಸ್ ನಿಲ್ದಾಣದಲ್ಲಿನ ತಂಗುದಾಣ ಸ್ವಚ್ಚಗೊಳಿಸದ್ದರಿಂದ ಪುಟ್ ಪಾತಲ್ಲೆ ಕಾಯುತ್ತಿದ್ದ ಆಶಾಕಾರ್ಯಕರ್ತೆಯರು |
ಕಳೆದ ಹಲವಾರು ವರ್ಷಗಳಿಂದ ರೋಟರಿ ಸಂಸ್ಥೆಯವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದ ಪೋಲಿಯೋ ಕಾರ್ಯಕ್ರಮದ ಬಗ್ಗೆ ಇತ್ತೀಚೆಗೆ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ನಿರ್ಲಕ್ಷ್ಯ ತಾಳುತ್ತಿದ್ದಾರೆಂಬ ಭಾವನೆ ಉಂಟಾಗಿದೆ.ಈ ಹಿಂದೆ ಪಲ್ಸ್ ಪೋಲಿಯೋ ದಿನ ರೋಟರಿ ಸಂಸ್ಥೆಯವರು ಸಾಕಷ್ಟು ಪ್ರಚಾರ ಸಾಮಗ್ರಿಗಳೊಂದಿಗೆ ಆಗಮಿಸಿ ಗ್ರಾಮದ ಪ್ರತಿಯೊಂದು ಕೇಂದ್ರಗಳಲ್ಲೂ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಅಲ್ಲದೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಸ್ಟಾಲ್ ಹಾಕಿ, ಪೋಲಿಯೋ ಬಗೆಗಿನ ಹಾಡುಗಳನ್ನು ಹಾಕಿ ಜನರಲ್ಲಿ ಪೋಲಿಯೋ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.
ಪಂಚಾಯ್ತಿಯವರೂ ಸಹ ಬಸ್ ನಿಲ್ದಾಣದ ತಂಗುದಾಣವನ್ನು ಮುಂಚಿತವಾಗಿಯೇ ಸ್ವಚ್ಚಗೊಳಿಸಿ ಕೂತುಕೊಳ್ಳಲು ಸಜ್ಜುಗೊಳಿಸುತ್ತಿದ್ದರು. ಆದರಿಂದು ತಂಗುದಾಣದ ತುಂಬ ಎಲ್ಲೆಂದರಲ್ಲಿ ಕಸತುಂಬಿ ಕಾಲಿಡಲು ಸಹ ಅಸಹ್ಯವಾಗಿತ್ತು. ಈ ಬಗ್ಗೆ ಗಮನಿಸಿದ ಸಾರ್ವಜನಿಕರು ಪಂಚಾಯ್ತಿಯವರಿಗೆ ಸ್ವಚ್ಚಗೊಳಿಸುವಂತೆ ತಾಕೀತು ಮಾಡಿದ ನಂತರವಷ್ಟೆ ಸ್ವಚ್ಚಗೊಳಿಸಿ ಲಸಿಕೆ ಹಾಕಲು ಅನುವು ಮಾಡಿಕೊಟ್ಟರು. ಲಸಿಕಾ ಕಾರ್ಯಕ್ರಮದ ಬಗ್ಗೆ ನಮಗೆ ಮುಂಚಿತವಾಗಿ ಯಾರು ತಿಳಿಸಿಲ್ಲ, ಇಂದು ಭಾನುವಾರವಾದ್ದರಿಂದ ಎಲ್ಲರಿಗೂ ರಜೆ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂಬ ಉತ್ತರ ಕೇಳಿಬಂತು.
ಸಮಯಕ್ಕೆ ಸರಿಯಾಗಿ ಆಗಮಿಸಿದ ಕಾರ್ಯಕರ್ತರು ಲಸಿಕೆ ಹಾಕಲು ಸೂಕ್ತ ಜಾಗವಿಲ್ಲದೆ ರಸ್ತೆ ಬದಿಯಲ್ಲೇ ನಿಂತು ಲಸಿಕೆ ಹಾಕುವಂತಾಗಿತ್ತು. ಲಸಿಕೆಗಳನ್ನೊಳಗೊಂಡ ಕಿಟ್ಟನ್ನು ಇಡಲು, ಕೂರಲು ಸೂಕ್ತ ಜಾಗವಿಲ್ಲದೆ ಪೆಟ್ಟಿಗೆ ಅಂಗಡಿಗಳ ಅಕ್ಕಪಕ್ಕ ಕೂತು ಲಸಿಕೆ ಹಾಕುವ ಸ್ಥಿತಿ ನಿರ್ಮಾಣವಾಗಿತ್ತು. ಒಟ್ಟಾರೆ ಇಂದಿನ ಘಟನೆಯಲ್ಲಿ ಪೋಲಿಯೋದಂತಹ ರಾಷ್ಟ್ರೀಯ ಕಾರ್ಯಕ್ರಮದ ಬಗ್ಗೆ ಇವರುಗಳು ತಾಳಿದ ನಿರ್ಲಕ್ಷ್ಯತೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ