ಹುಳಿಯಾರು-ಶಿರಾ ಹಾಗೂ ಹುಳಿಯಾರು-ಪಂಚನಹಳ್ಳಿ ರಸ್ತೆ ಮಾರ್ಗ ದುಸ್ಥರವಾಗಿದ್ದು ಸಂಚಾರಕ್ಕೆ ತೊಡಕಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿದ್ದು ಈಗಾಗಲೇ ಪಿಡಬ್ಯೂಡಿ ಇಂಜಿನಿಯರ್ ಅವರೊಂದಿಗೆ ಚರ್ಚಿಸಿದ್ದೇನೆ. ಇನ್ನೆರಡು ವಾರದಲ್ಲಿ ಈ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತದೆ ಎಂದು ಸಂಸದ ಎಸ್.ಪಿ.ಮುದ್ದುಹನುಮೇಗೌಡ ತಿಳಿಸಿದರು.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಸ್.ಪಿ.ಮುದ್ದುಹನುಮೇಗೌಡ ಹಾಗೂ ಕಾಂಗ್ರೆಸ್ಸ್ ಮುಖಂಡ ಸಾಸಲು ಸತೀಶ್. |
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಮಂಗಳೂರಿನಿಂದ ತಮಿಳುನಾಡಿನ ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ಹುಳಿಯಾರು ಮಾರ್ಗವಾಗಿ ಹಾದು ಹೋಗಿದ್ದು ಈಗಾಗಲೇ ರಸ್ತೆ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಅಲ್ಲಲ್ಲಿ ನಡೆದಿದೆ.ಆದರೆ ಟೆಂಡರ್ ಪಡೆದ ಕಂಟ್ರಾಕ್ಟರ್ ರಸ್ತೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ಆತನನ್ನು ಸರ್ಕಾರ ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದು, ರೀ ಟೆಂಡರ್ ಕರೆಯಲು ಯೋಜನೆ ರೂಪಿಸಿದೆ ಎಂದರು. ಸದ್ಯ ಹೊಸ ಟೆಂಡರ್ ಆಗುವತನಕ ರಸ್ತೆಯಲ್ಲಿನ ಗುಂಡಿಗಳನ್ನು ಡಾಂಬಾರ್ ಹಾಕಿ ಮುಚ್ಚುವಂತೆ ಪಿಡಬ್ಯೂಡಿ ಇಂಜಿನಿಯರ್ ಗೆ ತಿಳಿಸಿದ್ದು ಕೆಲಸ ಶೀಘ್ರದಲ್ಲೇ ನಡೆಯಲಿದೆ ಎಂದರು.
ಹುಳಿಯಾರು ಮಾರ್ಗವಾಗಿ ರೈಲ್ವೆ ಮಾರ್ಗದ ಕಾಮಗಾರಿ ನಡೆಯಲಿದ್ದು ಈ ಬಾರಿಯ ಬಜೆಟ್ ನಲ್ಲಿ ಸೇರಿಸಿ ಅನುದಾನ ಮಂಜೂರು ಮಾಡಿಸುವುದಾಗಿ ಜೊತೆಗೆ ತುಮಕೂರು- ಅರಸೀಕೆರೆ ನಡುವೆ ಇರುವ ಸಿಂಗಲ್ ರೈಲ್ವೆ ಮಾರ್ಗವನ್ನು ಡಬ್ಲಿಂಗ್ ಮಾರ್ಗ ಮಾಡಿಸುವ ಯೋಜನೆಯಿದೆ ಎಂದರು. ಪಟ್ಟಣದ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕ ಹಾಗೂ ಆಸ್ಪತ್ರೆಯ ಸ್ವಚ್ಚತೆ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಕಂದಾಯ ಇಲಾಖೆಯಲ್ಲಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಂಸದರ ಮುಂದಿಟ್ಟಾಗ ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಅವರನ್ನು ಕರೆಸಿ ತಾಲ್ಲೂಕು ಕಛೇರಿ ಹಾಗೂ ನಾಡಕಛೇರಿಯಲ್ಲಿ ಯಾವ ಅಧಿಕಾರಿ ರೈತರ ಹಾಗೂ ಸಾರ್ವಜನಿಕರೊಂದಿಗೆ ಉತ್ತಮರೀತಿಯಲ್ಲಿ ನಡೆದುಕೊಳ್ಳುವುದಿಲ್ಲ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಇಲ್ಲವಾದಲ್ಲಿ ಸಾರ್ವಜನಿಕರಿಂದಲ್ಲೇ ಲಿಖಿತರೂಪದ ದಾಖಲೆ ಪಡೆದು ಅಧಿಕಾರಿಗಳ ಮೇಲೆ ತಾವೇ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದರು.
ಸ್ಥಳಾವಕಾಶದ ಭರವಸೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ತೆರವಾದ ಅಂಗಡಿದಾರರು ತಮಗೆ ಸ್ಥಳಾವಕಾಶ ಮಾಡಿಕೊಡಿ ಸಂಸದರಲ್ಲಿ ಮನವಿ ಮಾಡಿದರು. ಕೋರ್ಟ್ ಆದೇಶದಂತೆ ಅಂಗಡಿಗಳನ್ನು ಕಂದಾಯ ಇಲಾಖೆಯವರು ತೆರವು ಮಾಡಿದ್ದಾರೆ. ಮತ್ತೆ ಅದೇ ಜಾಗದಲ್ಲಿ ತಳ್ಳುವ ಗಾಡಿಗಳನ್ನಾಗಲಿ ಅಥವಾ ತಾತ್ಕಾಲಿಕ ಅಂಗಡಿಗಳನ್ನು ಇಡುವಂತೆ ಹೇಳುವ ಅಧಿಕಾರ ತಮಗಿಲ್ಲ. ಪಟ್ಟಣದಲ್ಲಿ ಅಂಗಡಿಗಳನ್ನಿಡಲು ಸೂಕ್ತ ಜಾಗವನ್ನು ಗುರ್ತಿಸಿ ಶೀಘ್ರದಲ್ಲೇ ಸ್ಥಳಾವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ. ಅಂಗಡಿದಾರರು ತಮಗೆ ಅಂಗಡಿಗಳನ್ನು ಇಟ್ಟುಕೊಳ್ಳಲು ಸರ್ಕಾರಿ ಜಾಗದಲ್ಲಿ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯವರಿಗೆ ಮನವಿ ಸಲ್ಲಿಸಿ ಆ ಬಗ್ಗೆ ತಾವು ಗಮನಹರಿಸುವುದಾಗಿ ತಿಳಿಸಿದರು.
ಈ ವೇಳೆ ಮುಖಂಡರಾದ ಸಾಸಲು ಸತೀಶ್, ತಾಲ್ಲೂಕ್ ಯುವಕಾಂಗ್ರೆಸ್ಸ್ ಅಧ್ಯಕ್ಷ ಹೊಸಳ್ಳಿ ಅಶೋಕ್, ಎಪಿಎಂಸಿ ನಿರ್ದೇಶಕ ಸಿದ್ರಾಮಯ್ಯ, ಚಿ.ನಾ.ಹಳ್ಳಿ ಪಿಎಲ್.ಡಿ ಬ್ಯಾಂಕ್ ನ ನಿರ್ದೇಶಕ ಕೆ.ಸಿ.ಶಿವಕುಮಾರ್, ರಹಮತ್ ಉಲ್ಲಾ, ಮೋಹನ್ ಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ