ನೀರು ಅತ್ಯಮೂಲ್ಯ ಜೀವ ಜಲವಾಗಿದ್ದು ನೀರಿನ ಸಂರಕ್ಷಣೆ ಮುಖ್ಯ. ಆ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿದ್ದರೂ ಸಹ ನೀರಿನ ಸದ್ಬಳಕೆ ಮಾಡುವವಲ್ಲಿ ನಾವು ವಿಫಲಾಗುತ್ತಿದ್ದೇವೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡರು ವಿಷಾಧಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್, ರೈತಸಂಘದ ಸಹಯೋಗದಲ್ಲಿ " ನೀರು-ನೀರು-ನೀರು, ನೀರೆಲ್ಲವೂ ತೀರ್ಥ- ತೀರ್ಥವೆಲ್ಲವೂ ನೀರು " ವಿಷಯದಡಿ ಗುರುವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಭದ್ರತೆಗೆ ಹಣ ವಿನಿಯೋಗಿಸುವಂತೆ ನೀರಿನ ಸಂರಕ್ಷಣೆಯೂ ಮುಖ್ಯವಾಗಿದ್ದು ಅದಕ್ಕಾಗಿ ಸರ್ಕಾರ ಇಂತಿಷ್ಟು ಹಣವನ್ನು ಸರ್ಕಾರ ಮೀಸಲಿಡಬೇಕು ಎಂದರು. ತಾವು ಭೇಟಿ ನೀಡಿದ ಅನೇಕ ಹಳ್ಳಿಗಳಲ್ಲಿ ಮೊದಲ ಸಮಸ್ಯೆ ಎಂದರೆ ಅದು ನೀರಿನ ಸಮಸ್ಯೆಯೇ ಆಗಿರುತ್ತದೆ. ಪ್ರಸ್ತುತದಲ್ಲಿ ಉತ್ತಮ ಮಳೆಗಾಲವಿಲ್ಲದೆ ಅಂತರ್ಜಲ ಬತ್ತಿರುವುದು ನೀರಿನ ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡಿದೆ ಎಂದರು. ಹೇಮಾವತಿ, ತುಂಗಭದ್ರಾ ನದಿ ನೀರನ್ನು ಹರಿಸುವ ನಿಟ್ಟಿನಲ್ಲಿ ಅನೇಕ ಹೋರಾಟಗಳೆ ನಡೆಯುತ್ತಿದ್ದು, ಹೇಮಾವತಿ ನದಿಯಿಂದ ತುಮಕೂರು ಜಿಲ್ಲೆಯ ನಾನಾ ಭಾಗಕ್ಕೆ ನೀರು ಹರಿಸುವಲ್ಲಿಯೂ ಸಹ ಅನೆಕ ಅಡೆತಡೆಗಳು ಎದುರಾಗುತ್ತಿವೆ ಎಂದರು. ನೀರಿನ ಸದ್ಬಳಕೆಯ ದೃಷ್ಠಿಯಿಂದ ಸರ್ಕಾರ ಸೂಕ್ತ ಕಾನೂನನ್ನು ಜಾರಿಗೆ ತರಬೇಕಿದೆ ಎಂದು ತಿಳಿಸಿದರು.
ಜಾಗೃತರಾಗಿ : ನೀರಿನ ಸಂರಕ್ಷಣೆ ಮಾಡುವಲ್ಲಿ ನಗರ ಹಾಗೂ ಹಳ್ಳಿಗಳ ನಾವುಗಳು ಅರಿವನ್ನು ಮೂಡಿಸಿಕೊಳ್ಳಬೇಕಿದ್ದು , ಅನಗತ್ಯವಾಗಿ ನೀರಿನ ಬಳಕೆ ಮಾಡದೆ, ಇಂಗುಗುಂಡಿ, ಹೊಲಗಳಲ್ಲಿ ಬದುಗಳನ್ನು ಹಾಕುವ ಮೂಲಕ ಮಳೆ ನೀರನ್ನು ಭೂಮಿಗೆ ಇಂಗುವಂತೆ ಮಾಡಬೇಕು. ಸರ್ಕಾರ ಜನರಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಅಯೋಜಿಸಬೇಕಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಬಿಳಿಗಿರಿ ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನೀರು ಅಮೃತದಷ್ಟೇ ಶೇಷ್ಠವಾಗಿದ್ದು ಆ ನೀರನ್ನು ಅನಿಯಮಿತವಾಗಿ ಬಳಕೆ ಮಾಡುವ ಬದಲು ಹಿತಮಿತವಾಗಿ ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಎಂದರು. ವಿದ್ಯಾರ್ಥಿಗಳು ನೀರಿನ ಬಳಕೆ ಹಾಗೂ ಸಂರಕ್ಷಣೆಯ ಬಗ್ಗೆ ಪೋಷಕರು ಹಾಗೂ ಗ್ರಾಮದ ಜನಗಳಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಭೂಗರ್ಭ ಶಾಸ್ತ್ರಜ್ಞರಾದ ದೇವರಾಜರೆಡ್ಡಿ ಅವರು ಮಳೆನೀರು ಕೊಯ್ಲು-ಕೃತಕ ಬರಕ್ಕೆ ಶಾಶ್ವತ ಪರಿಹಾರ" ವಿಷಯ ಕುರಿತ ಉಪನ್ಯಾಸ ನೀಡಿದರು. ತಾ.ಪಂ.ಸದಸ್ಯ ನವೀನ್, ಜಿ.ಪಂ.ಸದಸ್ಯೆ ಮಂಜುಳಾ, ಸಿಡಿಸಿಯ ಅಶೋಕ್, ನಂದಿಹಳ್ಳಿಶಿವಣ್ಣ, ಜಲಾಲ್ ಸಾಬ್,ಫರಾನಾ, ರೈತಸಂಘದ ಕೆಂಕೆರೆ ಸತೀಶ್, ಮಲ್ಲೇಶ್, ಮುಖಂಡರಾದ ಸಿದ್ರಾಮಣ್ಣ, ಶಿವಕುಮಾರ್, ಉಪನ್ಯಾಸಕರಾದ ಶಂಕರಲಿಂಗಯ್ಯ, ಅಶೋಕ್, ಇಬ್ರಾಹಿಂ, ಶ್ರೀನಿವಾಸಪ್ಪ,ಹನುಮಂತಪ್ಪ, ಶಿವಯ್ಯ ಹಾಗೂ ಅಕ್ಕಪಕ್ಕದ ಹಳ್ಳಿಯ ರೈತರುಗಳು ಸಹ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ