ಹುಳಿಯಾರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೧೫ರಿಂದ ೨೦೨೦ರ ಸಾಲಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿಯ ಒಟ್ಟು ೧೦ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯಲಿರುವ ಹುಳಿಯಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. |
ಸಾಲಗಾರರ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ೪ ಸ್ಥಾನ, ಹಿಂದುಳಿದವರ್ಗದಿಂದ ೨ ಸ್ಥಾನ, ಪರಿಶಿಷ್ಟಜಾತಿ ಮತ್ತು ಪಂಗಡದಿಂದ ೧ ಸ್ಥಾನ ಹಾಗೂ ಮಹಿಳೆ ಮೀಸಲು ೨ ಸ್ಥಾನ ಸೇರಿ ೯ ನಿರ್ದೇಶಕರು ಆಯ್ಕೆಯಾಗಬೇಕಿದ್ದು ೨೧ ಮಂದಿ ಕಣದಲ್ಲಿದ್ದಾರೆ. ಸಾಲಪಡೆಯದವರ ಕ್ಷೇತ್ರದಿಂದ ಒಬ್ಬ ನಿರ್ದೇಶಕನ ಆಯ್ಕೆ ನಡೆಯಬೇಕಿದ್ದು ೫ ಮಂದಿ ಕಣದಲ್ಲಿದ್ದು ಒಟ್ಟು ೨೬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಗೆಲುವಿಗಾಗಿ ಜಿದ್ದಾಜಿದ್ದಿ ನಡೆದಿದೆ.
ಸೊಸೈಟಿಯಲ್ಲಿ ಒಟ್ಟು ೧೨೬೦ ಷೇರುದಾರರಿದ್ದು ಆ ಪೈಕಿ ಸಾಲಪಡೆದವರ ಕ್ಷೇತ್ರಕ್ಕೆ ೫೪೦ ಮಂದಿ ಹಾಗೂ ಸಾಪಪಡೆಯದವರ ಕ್ಷೇತ್ರಕ್ಕೆ ೭೨೦ ಮಂದಿ ಮತ ಚಲಾಯಿಸಲಿದ್ದಾರೆ. ಒಟ್ಟು ೧೦ ಸ್ಥಾನಗಳ ಪೈಕಿ ಸಾಲಪಡೆದವರ ಕ್ಷೇತ್ರದಿಂದ ೯ ಅಭ್ಯರ್ಥಿಗಳು ಹಾಗೂ ಸಾಲಪಡೆಯದವರ ಕ್ಷೇತ್ರದದಿಂದ ಒಬ್ಬ ಅಭ್ಯರ್ಥಿಯ ಆಯ್ಕೆಯಾಗಬೇಕಿದೆ. ಈಗ ಸಾಲಪಡೆದವರ ೯ ಸ್ಥಾನಕ್ಕೆ ಸಾಮಾನ್ಯ ವರ್ಗದಿಂದ ಹುಳಿಯಾರಿನ ಅಶೋಕ್ ಬಾಬು, ಕಲ್ಲಳ್ಳಿ ಕರಿಯಪ್ಪ, ಟಿ.ಎಸ್.ಹಳ್ಳಿಯ ಜಗದೀಶ್,ಹೊಸಹಳ್ಳಿ ಜಯಣ್ಣ,ಕಲ್ಲಹಳ್ಳಿ ನಾಗರಾಜು,ನಂದಿಹಳ್ಳಿ ಬೋರಲಿಂಗಯ್ಯ,ಟಿ.ಎಸ್.ಹಳ್ಳಿ ಮಲ್ಲೇಶ್,ಲಿಂಗಪ್ಪನಪಾಳ್ಯದ ಮೋಹನ್ ಕುಮಾರ್, ಸೀಗೆಬಾಗಿ ಶಂಕರಯ್ಯ,ಹುಳಿಯಾರು ವಸಂತನಗರದ ಶಿವಕುಮಾರ್,ಹೊಸಹಳ್ಳಿ ಸುಗಂಧರಾಜ್, ಪರಿಶಿಷ್ಟ ಜಾತಿ ಹಾಗೂ ಪಂಗಡದಿಂದ ಅವಳಗೆರೆಯ ಗುರುವಯ್ಯ,ದೊಡ್ಡಬಿದರೆ ತಾಂಡ್ಯದ ಲಕ್ಷ್ಮನಾಯ್ಕ,ದುರ್ಗಮ್ಮನಗುಡಿ ಬೀದಿಯ ಹನುಮಂತಯ್ಯ, ಹಿಂದುಳಿದವರ್ಗದ ಅಭ್ಯರ್ಥಿಗಳಾಗಿ ಟಿ.ಎಸ್.ಹಳ್ಳಿಯ ರಮೇಶ್,ಹೊಸಹಳ್ಳಿ ರಾಜಣ್ಣ,ಬಳ್ಳೆಕಟ್ಟೆ ರಾಮಯ್ಯ, ವೈ.ಎಸ್.ಪಾಳ್ಯದ ಸೈಯ್ಯದ್ ಜಲಾಲ್ ,ಮಹಿಳಾ ಅಭ್ಯರ್ಥಿಯಾಗಿ ಹುಳಿಯಾರು ವಿಜಯನಗರದ ಕೆಂಚಮ್ಮ, ಸಿದ್ದಗಂಗಮ್ಮ,ಕಲ್ಲಳ್ಳಿಯ ಇಂದ್ರಮ್ಮ ಸೇರಿ ಒಟ್ಟು ೨೧ ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸಾಮಪಡೆಯದವರ ಒಂದು ಸ್ಥಾನಕ್ಕೆ ಲಿಂಗಪ್ಪನಪಾಳ್ಯದ ಕುಮಾರ,ತಿಮ್ಲಾಪುರದ ತಿಮ್ಮಯ್ಯ,ಹುಳಿಯಾರಿನ ಧನುಷ್ ರಂಗನಾಥ್,ಬಳ್ಳೆಕಟ್ಟೆ ರಂಗಸ್ವಾಮಿ,ಸೀಗೆಬಾಗಿ ವರದಯ್ಯ ಸೇರಿ ಒಟ್ಟು ೫ ಮಂದಿ ಕಣದಲ್ಲಿದ್ದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಸಹಕಾರಿ ಬ್ಯಾಂಕಿಗೆ ಇದೇ ಪ್ರಥಮಬಾರಿಗೆ ಹೆಚ್ಚು ಮಂದಿ ಸ್ಪರ್ಧಿಸಿದ್ದು ಚುನಾವಣೆ ಕಾವು ಹೆಚ್ಚಿದೆ. ಅಲ್ಲದೆ ಸಹಕಾರ ರಂಗ ರಾಜಕೀಯಗೊಂಡಿದ್ದು, ಜಾತಿ ಪಾತ್ರವೂ ಪ್ರಧಾನಪಾತ್ರವಹಿಸಿದೆ. ಸಾಲಗಾರರ ಕ್ಷೇತ್ರದಲ್ಲಿ ಸ್ಪರ್ಧಾಳುಗಳು ತಮ್ಮತಮ್ಮಲ್ಲೇ ಗುಂಪುಗಳನ್ನು ರಚಿಸಿಕೊಂಡು ಪ್ರತಿ ಷೇರುದಾರರ ಮನೆಮನೆಗೂ ತೆರಳಿ ಮತಯಾಚಿಸುತ್ತಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಲ್ಲಿ ರಾಜಕೀಯ ಅಶೀರ್ವಾದವೂ ಸೇರಿಕೊಂಡು ಎಲ್ಲಾ ೫ ಅಭ್ಯರ್ಥಿಗಳು ಸೇರಿಕೊಂಡು ಟಿಬಿಜೆ ಕಾಂಗ್ರೆಸ್ ಬೆಂಬಲವಿದೆ ಎಂದು ಧನುಷ್ ರಂಗನಾಥ್, ಮುದ್ದಹನುಮೇಗೌಡ ಹಾಗೂ ಸಾಸಲು ಸತೀಶ್ ಬೆಂಬಲವಿದೆ ಎಂದು ಸೀಗೆಬಾಗಿ ವರದಯ್ಯ , ಬಿಜೆಪಿಯ ಕಿರಣ್ ಕುಮಾರ್ ಬೆಂಬಲದಲ್ಲಿ ಲಿಂಗಪ್ಪನಪಾಳ್ಯದ ಕಾಯಿಕುಮಾರ್, ಜೆಡಿಎಸ್ ಬೆಂಬಲದಲ್ಲಿ ತಿಮ್ಲಾಪುರದ ತಿಮ್ಮಯ್ಯ ತುರುಸಿನಪ್ರಚಾರದಲ್ಲಿ ತೊಡಗಿದ್ದಾರೆ. ಇವರೊಂದಿಗೆ ಸ್ನೇಹಿತರು ಹಾಗೂ ಸಮಾಜದ ಮುಖಂಡರು ಸೇರಿ ಚುನಾವಣಾ ಪ್ರಚಾರ ಕಾವೇರಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ