ಗ್ರಾ.ಪಂ. ವ್ಯಾಪ್ತಿಗೆ ಬರುವ ಸೋಮಜ್ಜನಪಾಳ್ಯ ಹಾಗೂ ಕೆ.ಸಿ.ಪಾಳ್ಯ ಮಾರ್ಗದ ರಸ್ತೆಯ ತುಂಬೆಲ್ಲಾ ಕೊರಕಲುಂಟಾಗಿ ಆಳುದ್ದ ಗುಂಡಿಯಾಗಿ ವಾಹನ, ಜನ ಸಂಚಾರಕ್ಕೆ ದುಸ್ಥರವಾಗಿದ್ದರೂ ಸಹ ಸ್ಥಳೀಯ ಪಂಚಾಯ್ತಿಯವರು ಮೌನವಹಿಸಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.
ಹುಳಿಯಾರು ಗ್ರಾ.ಪಂ.ವ್ಯಾಪ್ತಿಯ ಸೋಮಜ್ಜನಪಾಳ್ಯ-ಕೆ.ಸಿ.ಪಾಳ್ಯದ ಮಣ್ಣು ರಸ್ತೆಯಲ್ಲಿ ಕೊರಕಲುಂಟಾಗಿರುವುದನ್ನು ತೋರಿಸುತ್ತಿರುವ ಸ್ಥಳೀಯರು. |
ಸೋಮಜ್ಜನಪಾಳ್ಯದಿಂದ ಕೆ.ಸಿ.ಪಾಳ್ಯಕ್ಕೆ ಹೋಗಲು ಮಣ್ಣು ದಾರಿಯಿದ್ದು ಈ ಹಿಂದೆ ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವಂತೆ ಡ್ರೈನೇಜ್ ತೆಗೆದಿದ್ದರು. ಈ ಡ್ರೈನೇಜ್ ಗಳೆಲ್ಲಾ ಮುಚ್ಚಿದ್ದರಿಂದ ಮಳೆ ನೀರೆಲ್ಲಾ ಮಣ್ಣು ರಸ್ತೆಯಲ್ಲೇ ಹರಿದು ಕೊರಕಲು ಬಿದಿದ್ದೆ. ಈ ದಾರಿಯಲ್ಲಿ ನಿತ್ಯ ಶಾಲೆಗೆ ಮಕ್ಕಳು ಹೋಗುತ್ತಾರೆ, ಬೈಕ್ ಸವಾರರು, ಕಾರು ಸೇರಿದಂತೆ ಸಣ್ಣಪುಟ್ಟ ವಾಹನಗಳು ಸಂಚರಿಸುತ್ತಿದ್ದು ಗುಂಡಿಯ ಮಧ್ಯದಲ್ಲೇ ಸಾಗುವಂತಹ ಪರಿಸ್ಥಿತಿ ಎದುರಾಗಿದೆ. ಬೈಕ್ ಸವಾರರು ಈ ದಾರಿಯಲ್ಲಿ ಸಾಗುವಾಗ ಆಯಾತಪ್ಪಿ ಬೈಕ್ ಸಮೇತ ಬಿದ್ದು ಕೈಕಾಲು ಮುರಿದು ಕೊಂಡು ಆಸ್ಪತ್ರೆಗೆ ದಾಖಲಾದ ಪ್ರಸಂಗಗಳು ನಡೆದಿವೆ. ಟಾಟಾ ಎಸಿಯಂತಹ ವಾಹನಗಳು ಈ ಗುಂಡಿ ಮಧ್ಯ ಚಲಿಸುವಾಗ ಸಿಕ್ಕಿ ಹಾಕಿಕೊಂಡು ಗಂಟೆಗಟ್ಟಲ್ಲೇ ದಾರಿ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿವೆ. ರಸ್ತೆ ದುರಸ್ಥಿ ಬಗ್ಗೆ ಸ್ಥಳಿಯ ಆಡಳಿತದವರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಸಂಚಾರಕ್ಕೆ ದುಸ್ಥರವಾಗಿರುವ ಸೋಮಜ್ಜನಪಾಳ್ಯ-ಕೆ.ಸಿ.ಪಾಳ್ಯದ ಮಣ್ಣು ರಸ್ತೆ. |
ಕೆ.ಸಿ.ಪಾಳ್ಯ ಹಾಗೂ ಸೊಮಜ್ಜನಪಾಳ್ಯದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಇರುವ ಚರಂಡಿಯಲ್ಲಿ ನೀರು ಹರಿಯದೆ ನಿಂತ್ತಿದ್ದು ಸೊಳ್ಳೆಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಕೆಲ ಬೀದಿಗಳಲ್ಲಿ ಚರಂಡಿಯೇ ಇಲ್ಲದೆ ಮನೆಯ ಶೌಚಾಲಯದ ನೀರೆಲ್ಲಾ ರಸ್ತೆಯಲ್ಲಿ ಹರಿಯುವಂತಾಗಿದ್ದು ಅವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ. ಎಲ್ಲೆಡೆ ಹಂದಿಜ್ವರ, ಚಿಕನ್ ಗುನ್ಯಾ ಸೇರಿದಂತೆ ಇನ್ನಿತರ ಮಾರಕ ರೋಗಗಳು ಉಲ್ಬಣಿಸುತ್ತಿದ್ದು ಇಲ್ಲಿನ ವಾತಾವರಣ ಇದಕ್ಕೆ ಪೂರಕವಾದಂತಿದೆ. ಗ್ರಾ.ಪಂ.ನವರು ಶೀಘ್ರವೇ ಈ ಬಗ್ಗೆ ಎಚ್ಚೆತ್ತು ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ಹಾಲಿ ಇರುವ ಚರಂಡಿಗಳ ದುರಸ್ಥಿ ಮಾಡಿಸುವಂತೆ ಸ್ಥಳಿಯರಾದ ಮಹೇಶ್ ಒತ್ತಾಯಿಸಿದ್ದಾರೆ.
ಹುಳಿಯಾರು ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಈ ರಸ್ತೆ ಅಭಿವೃದ್ದಿ ಮಾಡುವಲ್ಲಿ ಗ್ರಾ.ಪಂ.ನವರು ನಿರ್ಲಕ್ಷ್ಯ ತಾಳಿದ್ದು ಜನಸಾಮಾನ್ಯರನ್ನು ಸಂಕಷ್ಟಕ್ಕೀಡುಮಾಡಿದೆ. ಒಟ್ಟಾರೆ ತಾಲ್ಲೂಕಿನಲ್ಲೇ ದೊಡ್ಡಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿದರೂ ಸಹ ಪಂಚಾಯ್ತಿ ವ್ಯಾಪ್ತಿಯ ಅನೇಕ ಸಣ್ಣಸಣ್ಣ ಹಳ್ಳಿಗಳ ರಸ್ತೆ, ಚರಂಡಿ ಸೇರಿದಂತೆ ಇನ್ನಿತ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ವಿಷಯದಲ್ಲಿ ಮಾತ್ರ ಇಂದಿಗೂ ಆಮೆಗತಿಯಲಿದ್ದು ಜನಸಾಮಾನ್ಯರ ಜೀವನದ ಜೊತೆ ಆಟವಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ.
--------------------
ದಾರಿಯಲ್ಲಿ ಕೊರಕಲು ಗುಂಡಿಬಿದ್ದು ಇಲ್ಲಿ ದಾರಿಯಾವುದು , ಚರಂಡಿ ಯಾವುದು ಎಂಬುದು ತಿಳಿಯದಂತಾಗಿದೆ. ಪಂಚಾಯ್ತಿಗೆ ಬರುವ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಪಡಿಸುವ ಮೂಲಕ ಜನಸಂಚಾರಕ್ಕೆ ಅನುವುಮಾಡಿಕೊಡಿ : ನಿವೃತ್ತ ಉಪನ್ಯಾಸಕ ಎಸ್.ರಾಮಯ್ಯ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ