ಹುಳಿಯಾರು ಪಟ್ಟಣದ ನಾಢಕಛೇರಿಯ ಆಟಲ್ ಜನಸ್ನೇಹಿ ಕೇಂದ್ರದಲ್ಲಿ ಕಳೆದ ಎರಡುಮೂರು ದಿನಗಳಿಂದ ಗಣಕಯಂತ್ರ ಹಾಗೂ ಪ್ರಿಂಟರ್ ನಲ್ಲಿ ದೋಷ ಉಂಟಾಗಿದ್ದು ಯಾವುದೇ ರೀತಿಯ ಅರ್ಜಿಗಳನ್ನು ಸ್ವೀಕರಿಸುವುದಾಗಲಿ, ಪಹಣಿ ನೀಡುವುದಾಗಲಿ ನಡೆಯದೆ ಸಾರ್ವಜನಿಕರಿಗೆ ದಾಖಲೆಗಳು ಸಿಗದೆ ಪರದಾಡುವಂತಾಗಿದೆ.
ಹುಳಿಯಾರಿನ ಆಟಲ್ ಜನಸ್ನೇಹಿ ಕೇಂದ್ರದಲ್ಲಿ ಗಣಯಂತ್ರದಲ್ಲಿ ತಾಂತ್ರಿಕ ದೋಷದಿಂದ ದಾಖಲೆ ದೊರೆಯದೆ ತಲೆಯ ಮೇಲೆ ಕೈಹೊತ್ತು ಕೂತಿರುವ ಹಳ್ಳಿ ಜನ. |
ವಂಶವೃಕ್ಷ, ಜನನಪ್ರಮಾಣ ಪತ್ರ,ಮರಣ ಪ್ರಮಾಣಪತ್ರ, ಸಂಧ್ಯಾಸುರಕ್ಷಾ, ವಾಸಸ್ಥಳ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ಹಲವಾರು ದಾಖಲೆಗಳನ್ನು ಜನ ಸ್ನೇಹಿ ಕೇಂದ್ರದಲ್ಲೇ ಪಡೆಯಬೇಕಿದ್ದು ಹೋಬಳಿಯ ಹದಿನೈದು ಇಪ್ಪತ್ತು ಕಿ.ಮೀ ದೂರದ ನಾನಾ ಭಾಗದ ಗ್ರಾಮದ ಸಾರ್ವಜನಿಕರು ನಾಢಕಛೇರಿಯಲ್ಲಿಗೆ ನಿತ್ಯ ಬಂದು ವಾಪಸ್ಸ್ ಹೋಗುವಂತಾಗಿದೆ. ಪ್ರಿಂಟರ್ ನಲ್ಲಿ ತಾಂತ್ರಿಕ ತೊಂದರೆ ಉಂಟಾಗುವುದು ಸಹಜ, ಅದಕ್ಕೆ ಬದಲಾಗಿ ಮತ್ತೊಂದು ಪ್ರಿಂಟರ್ ತಂದು ಅರ್ಜಿ ದಾಖಲೆಗಳನ್ನು ಸ್ವೀಕರಿಸುವ ಕಾರ್ಯ ಮಾಡುವ ಬದಲು ಕೆಟ್ಟಿರುವ ಅದೇ ಪ್ರಿಂಟರನ್ನು ಸರಿ ಮಾಡಿಸುವಲ್ಲಿ ಮುಂದಾಗಿರುವುದರಿಂದ ಜನಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.ಇಂದು ಪ್ರತಿಯೊಂದಕ್ಕೂ ಗಣಕೀಕೃತ ದಾಖಲೆಗಳು ಅಗತ್ಯವಿದ್ದು ಅದಿಲ್ಲದೆ ಎಲ್ಲಾ ಕೆಲಸಗಳಿಗೆ ಎಡವಟ್ಟಾಗಿದೆ ಎಂದು ಬೆಳಿಗ್ಗಿನಿಂದ ಕಾಯುತ್ತಿರುವವರು ತಮ್ಮ ನಿಸ್ಸಾಹಯಕತೆ ವ್ಯಕ್ತಪಡಿಸಿದರು.
ಪ್ರಿಂಟರ್ ಕೆಟ್ಟು ಹೋಗಿರುವುದರ ಬಗ್ಗೆ ತಹಸೀಲ್ದಾರ್ ಅವರ ಗಮನಕ್ಕೆ ತಂದು, ತಾಲ್ಲೂಕ್ ಕಛೇರಿಯಲ್ಲಿ ಹೆಚ್ಚುವರಿಯಾಗಿ ಯಾವುದಾದರೂ ಪ್ರಿಂಟರ್ ಇದ್ದರೆ ಕೊಡುವಂತೆ ಕೇಳಿದ್ದೇವೆ. ಸದ್ಯ ಕೆಟ್ಟಿರುವ ಪ್ರಿಂಟರ್ ರನ್ನು ಆ ಕಂಪನಿಯವರೇ ಬಂದು ಸರಿ ಮಾಡಬೇಕಿದ್ದು, ಈಗಾಗಲೇ ಅವರಿಗೆ ವಿಷಯ ಮುಟ್ಟಿಸಿದ್ದೇವೆ ಎರಡು ದಿನ ರಜೆ ಇದ್ದು ಶನಿವಾರದ ಒಳಗಾಗಿ ಸರಿ ಮಾಡಿಸಲಿದ್ದು ಸಾರ್ವಜನಿಕರು ಸಹಕರಿಸುವಂತೆ ಉಪತಹಸೀಲ್ದಾರ್ ಸತ್ಯನಾರಾಯಣ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ