ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ ೪೫ನೇ ವರ್ಷದ ವೈಭವಯುತ ಜಾತ್ರಾಮಹೋತ್ಸವ (ತಾ.೪) ಶನಿವಾರದಿಂದ ಪ್ರಾರಂಭಗೊಂಡು ತಾ.೧೨ರ ಭಾನುವಾರದವರೆಗೆ ಒಂಭತ್ತು ದಿನಗಳ ಕಾಲ ಜರುಗಲಿದೆ.
ತಾ.೪ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ ತಾ.೫ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯದ ಭಕ್ತಾಧಿಗಳಿಂದ ಅಮ್ಮನವರ ಮಡಿಲಕ್ಕಿ ಸೇವೆ ,ತಾ.೬ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ಹಾಗೂ ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ನಡೆಯಲಿದೆ. ತಾ.೭ರ ಮಂಗಳವಾರ ಆಅತಿಬಾನ, ಎಡೆಸೇವೆ, ತಾ.೮ರ ಬುಧವಾರ ರಾತ್ರಿ ಹುಳಿಯಾರಿನ ಹುಳಿಯಾರಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆ ದುರ್ಗಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಕೆರೆಯಲ್ಲಿಗೆ ದಯಮಾಡಿಸಲಿದ್ದಾರೆ. ತಾ.೯ರ ಗುರುವಾರ ಮುಂಜಾನೆ ೫ಕ್ಕೆ ಕೆರೆಯ ಬಾವಿಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ತಾ.೧೦ರ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಬ್ರಹ್ಮರಥೋತ್ಸವ ನಡೆದು ನಂತರ ವಸಂತ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ ಅಮ್ಮನವರ ಮದಾಲ್ ಸಿ ಉತ್ಸವ ಹಾಗೂ ದೇವಿಮಹಾತ್ಮೆ ನಾಟಕಾಭಿನಯ ಅಯೋಜಿಸಲಾಗಿದೆ. ತಾ.೧೧ರ ಶನಿವಾರ ಬೆಳಿಗ್ಗೆ ಸಿಡಿ ಕಾರ್ಯ ,ಓಕಳಿಸೇವೆ, ಕಂಕಣ ವಿಸರ್ಜನೆ,ಮಡಿಲಕ್ಕಿ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಕನ್ವೀನರ್ ಹು.ಕೃ.ವಿಶ್ವನಾಥ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ