ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ೪೫ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ನಡೆದ ಸಿಡಿ ಕಾರ್ಯ ಹಾಗೂ ಓಕಳಿ ಸೇವೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಸಿಡಿಯನ್ನು ಕಣ್ತುಂಬಿಕೊಂಡರು.
ಹುಳಿಯಾರಿನ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿಯ ಸಿಡಿಕಾರ್ಯದ ರೋಮಾಂಚನಕಾರಿ ದೃಶ್ಯ, |
ಏನಿದು ಸಿಡಿ: ಸಿಡಿ ಆಟ ಜಾತ್ರೆಯ ಒಂದು ಆಚರಣೆಯಾಗಿದ್ದು ಸಿಡಿ ಹಾಗೂ ಓಕಳಿ ಆಡುವ ಮೂಲಕ ಜಾತ್ರೆ ಪರಿಸಮಾಪ್ತಿಯಾಗಲಿದೆ. ಸಿಡಿ ಕಂಬಕ್ಕೆ ನಿರ್ದಿಷ್ಟ ಜನಾಂಗದ ವ್ಯಕ್ತಿಯೊಬ್ಬನನ್ನು ಕಟ್ಟಿ ಮೂರು ಸಲ ತಿರುಗಿಸುತ್ತಾರೆ. ಸಿಡಿ ಆಡಲು ಮೊದಲು ಭೂಮಿಗೆ ನೇರವಾಗಿ ಕಂಬ ಹಾಗೂ ತಿರುಗಣಿ ಇಟ್ಟು ಅದಕ್ಕೆ ಸಮಾನಾಂತರವಾಗಿ ಸಿಡಿಕಂಬ ತಿರುಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಕಂಬದ ಒಂದು ತುದಿಗೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟಿ ಮತ್ತೊಂದು ತುದಿಯಲ್ಲಿ ದೇವಸ್ಥಾನದ ಯಜಮಾನರನ್ನು ಕುಳ್ಳಿರಿಸಿ ಮೂರು ಸಲ ತಿರುಗಿಸುವುದು ಆಚರಣೆಯಲ್ಲಿದೆ. ಕೆಲವೆಡೆ ಸಿಡಿಕಂಬಕ್ಕೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟುವ ಬದಲು ಬೆನ್ನಿಗೆ ಕೊಂಡಿ ಹಾಕಿ ತಿರುಗಿಸುವ ಪರಿಪಾಠವಿದೆ,
ಸಿಡಿ ಕಾರ್ಯದ ಅಂಗವಾಗಿ ಸಿಡಿಮರವನ್ನು ಕೆಂಪು,ಬಿಳಿ ಬಣ್ಣ ಬಳಿದು ಮಾವಿನ ಸೊಪ್ಪಿನಿಂದ ಅಲಂಕರಿಸಿದ್ದರು. ಸಿಡಿಮರಕ್ಕೆ ಕಟ್ಟುವ ವ್ಯಕ್ತಿಯನ್ನು ಹಾಗೂ ದುರ್ಗಮ್ಮದೇವಿಯನ್ನು ಕಳಸ ಸಮೇತ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಲಾಯಿತು. ನಂತರ ಸೋಮನನ್ನು ಹೊರಡಿಸಿ ಸಿಡಿಮರದತ್ತ ಕರೆದೊಯ್ದು ಸಿಡಿಮರಕ್ಕೆ ಪ್ರಾಣಿ ಬಲಿ ನೀಡಲಾಯಿತು. ಒಂದು ಸುತ್ತು ಪ್ರದಕ್ಷಿಣೆ ಬಂದ ನಂತರ ದುರ್ಗಮ್ಮ, ಹುಳಿಯಾರಮ್ಮ, ಕೊಲ್ಲಾಪುರದಮ್ಮ, ಗೌಡಗೆರೆ ದುರ್ಗಮ್ಮನವರ ಸಮ್ಮುಖದಲ್ಲಿ ಸಿಡಿಮರದ ಒಂದು ತುದಿಗೆ ಭಕ್ತನೊಬ್ಬನನ್ನು ಕಟ್ಟಿ ಮತ್ತೊಂದು ತುದಿಯಲ್ಲಿ ಗುಡಿಗೌಡರನ್ನು ಕುಳ್ಳಿರಿಸಿ ಭಕ್ತರ ಹರ್ಷೋದ್ಗಾರದಲ್ಲಿ ಸಿಡಿಮರವನ್ನು ಮೂರು ಸುತ್ತು ಸುತ್ತಿಸಲಾಯಿತು. ಸಿಡಿ ಮರದ ತುದಿಗೆ ಕಟ್ಟಿದ್ದ ಹಗ್ಗಕ್ಕೆ ಯುವಕರು ನೇತುಬಿದ್ದು ಸಿಡಿಮರ ಸುತ್ತಿಸುತ್ತಿದ್ದನ್ನು ಕಂಡ ಭಕ್ತರಲ್ಲಿ ಕೌತುಕ ಮನೆಮಾಡಿತ್ತು. ಈ ವೇಳೆ ದೇವಾಲಯ ಸಮಿತಿಯವರು ಹಾಗೂ ಗುಂಚಿಗೌಡರು ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಜನರಿದ್ದರು. ಶನಿವಾರ ಬೆಳಿಗ್ಗಿನಿಂದ ಮೋಡಕವಿದ ವಾತಾವರಣ ಉಂಟಾಗಿದ್ದು ಜನರನ್ನು ನಿರಾಳ ಮಾಡಿತ್ತಲ್ಲದೆ, ದೇವಾಲಯದ ಸುತ್ತಲಿನ ಬಿಲ್ಡಿಂಗ್ ಗಳ ಮೇಲೆಲ್ಲಾ ಜನ ನಿಂತು ಸಿಡಿಕಾರ್ಯ ವೀಕ್ಷಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ