ಹುಳಿಯಾರು ಹೋಬಳಿಯಲ್ಲಿ ಜಾತಿಗಣತಿ ಪ್ರಗತಿಯಲಿದ್ದು ಶನಿವಾರದಂದು ಪಟ್ಟಣದಲ್ಲಿ ಗಣತಿ ಭರದಿಂದ ಸಾಗಿತ್ತು. ಬಂದ್ ಹಿನ್ನಲೆಯಲ್ಲಿ ಹೆಚ್ಚಿನ ಜನ ಮನೆಯಲ್ಲಿ ಸಿಗುವ ನಿರೀಕ್ಷೆಯಿಂದ ಮುಂಜಾನೆಯಿಂದಲೇ ಗಣತಿದಾರರು ಮನೆಗಳನ್ನು ಎಡೆತಾಕುತ್ತಿದ್ದರು.
ಹುಳಿಯಾರಿನ ಮನೆಯೊಂದರ ಸದಸ್ಯರಿಂದ ಮಾಹಿತಿ ಪಡೆಯುತ್ತಿರುವ ಗಣತಿದಾರ |
ಹಿಂದಿನ ದಿನವೇ ಅಗತ್ಯ ಬೇಕಾದ ದಾಖಲಾತಿಗಳನ್ನು ಸಿದ್ದಪಡಿಸಿಕೊಳ್ಳಲು ತಿಳಿಸುತ್ತಿದ್ದರೂ ಸಹ ಕೆಲವರು ಆಧಾರ್ , ಐಡಿ ಕಾರ್ಡ್ ಕೊಡಲು ವಿಳಂಬಿಸುತ್ತಿರುವುದರಿಂದ ಗಣತಿ ತಡವಾಗುತ್ತಿದೆ.ಇನ್ನೂ ಹತ್ತುದಿನ ವಿಸ್ತರಣೆ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂಬ ಮಾತು ಎಲ್ಲಾ ಗಣತಿದಾರರಲ್ಲೂ ಸಾಮಾನ್ಯವಾಗಿ ಕೇಳೀಬಂತು.
ದೂರೇನು: ಜಾತಿಗಣತಿಯ ಫಾರಂನಲ್ಲಿರುವ ಒಟ್ಟು ೫೫ ಪ್ರಶ್ನೆಗಳನ್ನು ಕುಟುಂಬದವರಿಗೆ ಹೇಳಿ ಅವರಿಂದ ಉತ್ತರ ಪಡೆಯಬೇಕಿದೆ. ಕೆಲ ಕುಟುಂಬದಲ್ಲಿ ಗಣತಿದಾರರು ಕೇಳಿದಾಗ ದಾಖಲೆಗಳನ್ನು ಹುಡುಕಲು ಮನೆಯವರು ಮುಂದಾಗುತ್ತಿದ್ದು ಸಮಯ ವ್ಯಯವಾಗುತ್ತಿದೆ. ಪಟ್ಟಣದಲ್ಲಿ ಬೆಳಿಗ್ಗೆ ಹತ್ತರ ನಂತರ ಮಾಹಿತಿ ಪಡೆಯಲು ಹೋದರೆ ಮನೆಯ ಯಜಮಾನರ ಬಳಿ ದಾಖಲೆಗಳಿವೆ ನಾಳೆ ಬನ್ನಿ ಎನ್ನುತ್ತಾರೆ. ಇದರಿಂದ ಕೆಲ ಮನೆಗಳಿಗೆ ಪದೇಪದೆ ಹೋಗುವಂತಾಗಿದೆ ಅಲ್ಲದೆ ಪಟ್ಟಣಗಳಲ್ಲಿ ಬೆಳಿಗ್ಗೆ ೧೦ರ ಒಳಗಾಗಿ ಗಣತಿಕಾರ್ಯ ಮಾಡುವಂತಾಗಿದೆ.
ನಾಲ್ಕು ಮಂದಿಯಿರುವ ಒಂದು ಕುಟುಂಬವರ ವಿವರವನ್ನು ಪಡೆಯಲು ಕನಿಷ್ಠ ೩೦ ನಿಮಿಷವಾಗುತ್ತಿದ್ದು, ಎಂಟತ್ತು ಮಂದಿ ಇರುವ ಕುಟುಂಬದವರಿಂದ ಮಾಹಿತಿ ಪಡೆಯಲು ಒಂದು ಗಂಟೆ ಸಮಯವಾಗುತ್ತಿದೆ, ದಿನಕ್ಕೆ ಹತ್ತು ಮನೆಯವರ ಮಾಹಿತಿ ಕಲೆ ಹಾಕುವುದೇ ದುಸ್ಥರವಾಗಿದೆ ಎನ್ನುತ್ತಾರೆ ಗಣತಿದಾರ ಉಮೇಶ್.
ಸಹಾಯ ಮಾಡದ ಸಹಾಯವಾಣಿ: ಗಣತಿ ವೇಳೆ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೆಲ್ಪ್ ಲೈನ್ ಇದ್ದು ಆ ನಂಬರ್ ಗೆ ಗಣತಿದಾರರು ಕರೆ ಮಾಡಿದರೆ ಕರೆಯನ್ನು ಹೋಲ್ದ್ ಮಾಡಿ, ಮಾಹಿತಿ ನೀಡಲು ತಡ ಮಾಡುತ್ತಾರೆ. ಉಚಿತವಾಗಿರಬೇಕಾದ ಹೆಲ್ಪ್ ಲೈನ್ ನಲ್ಲಿ ನಾವು ಮಾಡುವ ಕರೆಗೆ ಹಣ ಕಟ್ಟಾಗುತ್ತಿರುವುದಲ್ಲದೆ, ನಾವು ಕೇಳುವ ಸಮಸ್ಯೆಗಳಿಗೆ ಉತ್ತರ ಸಿಗದೆ ಪರದಾಡುವಂತಾಗಿದೆ. ಈ ಬಗ್ಗೆ ಸರ್ಕಾರ ಗಮನ ಕೊಡಬೇಕಿದೆ ಎನ್ನುತ್ತಾರೆ.
ಹೆಚ್ಚು ಕುಟುಂಬಗಳ ಹೊರೆ: ಸದ್ಯ ನಿಗಧಿ ಮಾಡಿರುವ ಕೊನೆ ದಿನಾಂಕದ ಒಳಗೆ ಒಬ್ಬ ಗಣತಿದಾರ ೧೫೦ ಮನೆಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ. ಆದರೆ ಒಬ್ಬ ಗಣತಿದಾರನಿಗೆ ೧೫೦ರಿಂದ ೨೦೦ ಮನೆಗಳನ್ನು ನೀಡಿದ್ದು ಏಪ್ರಿಲ್ ೩೦ರ ಒಳಗೆ ಎಲ್ಲಾ ಮನೆಗಳ ಮಾಹಿತಿಯನ್ನು ಪಡೆಯಲು ಅಸಾಧ್ಯವಾಗಿದ್ದು, ಕಾಲಾವಕಾಶ ನೀಡಿದಲ್ಲಿ ಅನುಕೂಲವಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಗಣತಿ ಮಾಡಬೇಕಾದಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಮನೆಯವರಿಂದ ಸಮರ್ಪಕ ಉತ್ತರ ದೊರೆಯುವುದಿಲ್ಲ. ಮದುವೆಯಾದಾಗ ಎಷ್ಟು ವರ್ಷ, ಮನೆಯಾಕೆ ಮದುವೆಯಾದಾಗ ಎಷ್ಟು ವರ್ಷ, ಮನೆಯಲ್ಲಿ ಕಾರು, ಬೈಕ್,ಟಿವಿ, ಫ್ರಿಡ್ಜ್, ಆದಾಯ ಎಷ್ಟು ಎಂಬ ಕೆಲವೊಂದು ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡದೆ ನಿಮಗೆ ಇದೆಲ್ಲಾ ಯಾಕೆ ಎಂದು ರೇಗಾಡಿದ ಸಂದರ್ಭವು ಎದುರಾಗಿವೆ. ಹಾಗಾಗಿ ಅವರು ನೀಡುವ ತಪ್ಪು ಮಾಹಿತಿಯಿಂದ ಸಮೀಕ್ಷೆ ಎಷ್ಟರ ಮಟ್ಟಿಗೆ ಸರಿ ಇರುತ್ತದೆ ಎನ್ನುವ ಅಭಿಪ್ರಾಯ ಕೆಲವು ಗಣತಿದಾರರು ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ