ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು ಪಟ್ಟಣದ ಮಾರುತಿನಗರದ ಐದನೇ ಬ್ಲಾಕ್ ನ ನೇಮತ್ ಬಿನ್ ಅನ್ವರ್ ಸಾಬ್ ಎಂಬುವರ ಮನೆಗೆ ಶುಕ್ರವಾರ ರಾತ್ರಿ ಬಂದ ಮಳೆಯ ನೀರು ನುಗ್ಗಿದ ಪರಿಣಾಮ ಮನೆಯ ಗೋಡೆಕುಸಿದಿದೆ.
ಹುಳಿಯಾರಿನ ೫ನೇ ಬ್ಲಾಕ್ ನ ಅವರ ಮನೆಗೆ ಮಳೆ ನೀರು ನುಗ್ಗಿ ಗೋಡೆ ಕುಸಿದಿರುವುದು ಹಾಗೂ ಮನೆಗೆ ನೀರು ನುಗ್ಗಿರುವುದು. |
ಶುಕ್ರವಾರ ಸಂಜೆಯಿಂದ ಮಳೆ ಪ್ರಾರಂಭವಾಗಿ ಕೆಲ ಗಂಟೆಗಳಕಾಲ ಸುರಿದ ಹಿನ್ನಲೆಯಲ್ಲಿ ಪಟ್ಟಣದ ರಸ್ತೆಬದಿಯ ಚರಂಡಿಯ ತುಂಬಿ ರಸ್ತೆಯಲೆಲ್ಲಾ ನೀರು ಹರಿಯುವಂತಾಗಿತ್ತು. ನೇಮತ್ ಅವರ ಮನೆ ಮುಂದಿನ ಚರಂಡಿಯಲ್ಲಿಯೂ ಸಹ ತ್ಯಾಜ್ಯ ತುಂಬಿಕೊಂಡಿದ್ದ ಪರಿಣಾಮ ನೀರು ಸರಾಗವಾಗಿ ಹರಿಯದೆ ಅವರ ಮನೆಗೆ ನುಗ್ಗಿದ್ದು, ಗೋಡೆ ಕುಸಿದಿದೆ. ಮನೆ ಒಳಗೆ ನಿಲ್ಲಿಸಿದ ಬೈಕ್ ಮೇಲೆ ಗೋಡೆ ಬಿದ್ದು ಬೈಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶನಿವಾರವೂ ಸಹ ಪಟ್ಟಣದೆಲ್ಲೆಡೆ ಉತ್ತಮಮಳೆಯಾಗಿದ್ದು ಬೆಳಿಗ್ಗಿನಿಂದ ಮೋಡಕವಿದ ವಾತಾವರಣವಿದ್ದು ಮಧ್ಯಾಹ್ನದ ವೇಳೆ ಗಾಳಿಸಹಿತ ಜೋರುಮಳೆ ಸುರಿಯಿತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ್ದರಿಂದ ರಸ್ತೆಯಲ್ಲಿ ನೀರು ಹರಿದು ರಸ್ತೆಯ ತುಂಬೆಲ್ಲಾ ಕಸ,ಕಡ್ಡಿ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದವು. ಬಸ್ ನಿಲ್ದಾಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಅಲ್ಲಿಯೇ ನಿಂತು ಕೆಸರುಂಟಾಗಿತ್ತು. ಅಲ್ಲದೆ ಬಸ್ ಗಳು ಬಂದಾಗ ಪ್ರಯಾಣಿಕರು ಕೆಸರ ಮಧ್ಯದಲ್ಲೇ ನಡೆದು ಬಸ್ ಹತ್ತಬೇಕಾಗಿತ್ತು. ಕೆಲ ಪ್ರಯಾಣಿಕರು ಜಾರಿಬಿದ್ದು ಮೈಕೈಗೆಲ್ಲಾ ಕೆಸರು ಮೆತ್ತಿಸಿಕೊಂಡರಲ್ಲದೆ, ಸ್ಥಳೀಯ ಆಡಳಿತದವರಿಗೆ ಹಿಡಿಶಾಪ ಹಾಕಿದರು.
ಗಾಣಧಾಳು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಂದ ಮಳೆಯಿಂದಾಗಿ ೪ ಮನೆಗಳು ಕುಸಿದಿದ್ದು, ಈಶ್ವರಯ್ಯ ಎಂಬುವರ ವಾಸದ ಮನೆ ಸೇರಿದಂತೆ ಮೂರು ದನದ ಕೊಟ್ಟಿಗೆ ಮನೆಗಳು ಕುಸಿದಿವೆ.
ಆಲಿಕಲ್ಲು ಸಹಿತ ಮಳೆ : ಹೋಬಳಿಯ ರಂಗನಕೆರೆ,ಸೋಮನಹಳ್ಳಿ ಭಾಗದಲ್ಲಿ ಶುಕ್ರವಾರ ರಾತ್ರಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದ್ದು, ತೋಟತುಡಿಕೆಗಳಲ್ಲಿ ನೀರು ತುಂಬಿದೆ. ಹೆಸರು ಕಾಳು ಬಿತ್ತಿದ್ದಾಯ್ತು ಮಳೆ ಬಂದರೆ ಸಾಕು ಎನ್ನುತ್ತಿದ್ದ ರೈತರಿಗೆ ಈ ಮಳೆ ಸಂತಸ ತಂದಿದ್ದು ಹೆಸರು ಚಿಗುರೊಡೆಯಲು ಸಹಕಾರಿಯಾಗಿದೆ. ಶುಕ್ರವಾರ ರಾತ್ರಿ ಹುಳಿಯಾರು ಮಳೆಮಾಪನಕೇಂದ್ರದಲ್ಲಿ ೪೮.೨ ಮಿ.ಮೀ ಮಳೆಯಾಗಿರುವುದಾಗಿ ಕಂದಾಯ ತನಿಖಾಧಿಕಾರಿ ಹನುಮಂತನಾಯಕ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ