ವರದಿ : ಡಿ.ಆರ್.ನರೇಂದ್ರಬಾಬು
------------
ಹುಳಿಯಾರು : ಆಕ್ರಮ-ಸಕ್ರಮದಡಿ ಅನಧಿಕೃತ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗಳಿಸಿಕೊಳ್ಳುವಂತೆ ಮಾರ್ಚ್ ೩೧ ಅಂತಿಮ ಗಡುವು ನೀಡಿ ಮತ್ತೆ ವಿಸ್ತರಣೆ ಪ್ರಶ್ನೆಯೇ ಇಲ್ಲ ನಂತರದ ದಿನದಿಂದಲೆ ಸಕ್ರಮ ಮಾಡಿಕೊಳ್ಳದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಬೆಸ್ಕಾಂ ಇದೀಗ ಮತ್ತೆ ಮೇ.೧೫ರ ವರೆಗೆ ಸಕ್ರಮಕ್ಕೆ ಗಡುವು ನೀಡಿದೆ.
ಆಕ್ರಮ-ಸಕ್ರಮದಡಿ ರೈತರು ಅರ್ಜಿಸಲ್ಲಿಸಿ ತಮ್ಮ ಬೋರ್ ವೆಲ್ ಗಳನ್ನು ಸಕ್ರಮಗಳಿಸಿಕೊಂಡಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ ಕೊಡುವುದಾಗಿ ಹೇಳುತ್ತಾ ಸಾಗುತ್ತಿದ್ದಾರೆ ಹೊರತು ಇದುವರೆಗೂ ಸಕ್ರಮಗಳಿಕೊಂಡವರಿಗೆ ಯಾವುದೇ ರೀತಿಯ ಸೌಲಭ್ಯ ಮಾತ್ರ ದೊರೆತಿಲ್ಲ.ಜೊತೆಗೆ ಆಕ್ರಮ ಸಂಪರ್ಕ ಪಡೆದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡ ಉದಾಹರಣೆಯಿಲ್ಲ. ಬಹುತೇಕ ಮಂದಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಪಂಪ್ ಸೆಟ್ ಗಳನ್ನು ಓಡಿಸುತ್ತಿದ್ದು ಗೊತ್ತಿದ್ದರೂ ಕಂಡುಕಾಣದಂತೆ ಇಲಾಖೆ ವರ್ತಿಸುತ್ತಿದೆ.
ಪ್ರಸ್ತುತದಲ್ಲಿ ಮಳೆಯ ಕೊರತೆಯಿಂದಾಗಿ ರೈತರು ಹೊಲ,ಗದ್ದೆ,ತೋಟಗಳಿಗೆ ಬೋರ್ ವೆಲ್ ಗಳನ್ನೆ ಆಶ್ರಯಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುವಲ್ಲಿ ಇಲಾಖೆ ವಿಫಲವಾಗಿದ್ದು ಕೇವಲ ೨ ರಿಂದ ೩ ಗಂಟೆ ಅದೂ ರಾತ್ರಿ ಸಮಯದಲ್ಲಿ ಕೊಡಲಷ್ಟೆ ಶಕ್ತವಾಗಿದೆ. ಹಳ್ಳಿಪ್ರದೇಶಗಳಲ್ಲಿ ಒಂದೊಂದು ಟಿಸಿ ಗಳಲ್ಲೂ ಮೂರ್ನಾಲ್ಕು ಸಂಪರ್ಕ ಸಕ್ರಮವಿದ್ದರೆ ಹತ್ತಕ್ಕು ಹೆಚ್ಚು ಆಕ್ರಮ ಸಂಪರ್ಕವಿದೆ. ಆಕ್ರಮ ಸಕ್ರಮಡಿ ಹಣ ಪಾವತಿ ಮಾಡಿದವರೂ ಹಾಗೂ ಹಣಕಟ್ಟದ ಇಬ್ಬರೂ ಸಹ ಒಂದೇ ಟಿಸಿಯಲ್ಲಿ ಸಂಪರ್ಕ ಹೊಂದಿದ್ದಾರೆ. ಆಕ್ರಮ-ಸಕ್ರಮದಡಿ ಹಣಕಟ್ಟಿದ್ದರ ಪ್ರಯೋಜನ ಮಾತ್ರ ಏನು ಎಂಬುದು ತಿಳಿಯಾದಾಗಿ ಎನ್ನುತ್ತಾರೆ ಕೆಲ ರೈತರು. ಈ ಬಗ್ಗೆ ಇಲಾಖೆಯವರು ಜಾಣಕುರುಡು ಪ್ರದರ್ಶಿಸಿ ಮೌನವಹಿಸಿದ್ದಾರೆ.
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಆಕ್ರಮ-ಸಕ್ರಮದಡಿ ಜುಲೈ೨೦೧೩ ರಿಂದ ಮಾರ್ಚ್ ೨೦೧೫ ರವರ ಅವಧಿಯಲ್ಲಿ ಒಟ್ಟು ೪೫೬ ಜನ ಮಾತ್ರ ಹಣಕಟ್ಟಿ ಸಕ್ರಮಗೊಳಿಸಿಕೊಂಡಿದ್ದು, ಇನ್ನೂ ಸಾವಿರಾರು ಮಂದಿ ಆಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದಾರೆ. ಹಲವಾರು ಬಾರಿ ಆಕ್ರಮ-ಸಕ್ರಮದಡಿ ಪಂಪ್ ಸೆಟ್ ಗಳನ್ನು ನೊಂದಾಯಿಸಿಕೊಳ್ಳಿ ಎಂದು ಇಲಾಖೆ ಹಣ ಕಟ್ಟಿಸಿಕೊಳ್ಳುತ್ತಿದೆ ಹೊರತು ಆಕ್ರಮವಾಗಿ ಸಂಪರ್ಕ ಹೊಂದಿದವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ.
ಆಕ್ರಮ-ಸಕ್ರಮದಡಿ ಹಣ ಕಟ್ಟಿದರೆ ಉತ್ತಮ ವಿದ್ಯುತ್ ನೀಡುತ್ತೇವೆ, ಹಣಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡುವುದಾಗಿ ತಿಳಿಸುವ ಅಧಿಕಾರಿಗಳು, ನಮ್ಮಿಂದ ಹಣಕಟ್ಟಿಸಿಕೊಂಡಿದ್ದರೂ ಸಹ ಇದುವರೆಗೂ ಉತ್ತಮ ವೋಲ್ಟೇಜ್ ನ ವಿದ್ಯುತ್ ನೀಡಿಲ್ಲ, ಹಣಕಟ್ಟಿದವರೂ ,ಹಣಕಟ್ಟದವರೂ ಇಬ್ಬರೂ ಒಂದೇ ಟಿಸಿಗಳಲ್ಲಿ ಕನೆಕ್ಷನ್ ಹಾಕಿಕೊಂಡು ಪಂಪ್ ಸೆಟ್ ಚಲಾಯಿಸುತ್ತಿದ್ದು ಹಣಕಟ್ಟುವುದು ವ್ಯರ್ಥವಾಯಿತೇನೊ ಎಂಬುದು ಹಣಕಟ್ಟಿರುವ ರೈತರು ಪ್ರಶ್ನೆಯಾಗಿದೆ.
ಆಕ್ರಮ ಸಂಪರ್ಕದವರ ವಿರುದ್ದ ಕ್ರಮ ಏನು ಎಂದು ಬೆಸ್ಕಾಂನವರನ್ನು ಕೇಳಿದರೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮೇಲಾಧಿಕಾರಿಗಳು ಏನು ಹೇಳುತ್ತಾರೋ ಆ ರೀತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಅನಧಿಕೃತವಾಗಿ ಪಂಪ್ ಸೆಟ್ ಗಳು ಓಡುತ್ತಲೆ ಇವೆ. ಈ ಬಾರಿಯೂ ಸಹ ಅದೇ ಪುನರಾವರ್ತನೆಯಾಗುತ್ತದೆಯೋ ಏನೋ. ನಾವು ಸಾವಿರಾರು ರೂ ಹಣ ಕಟ್ಟಿದ್ದು ವ್ಯರ್ಥವೆನೋ ಎಂದು ಈಗಾಗಲೇ ಹಣ ಕಟ್ಟಿ ನೋಂದಣಿ ಮಾಡಿಸಿಕೊಂಡವರು ಕೇಳುತ್ತಿದ್ದಾರೆ.
-------------
ಆಕ್ರಮ-ಸಕ್ರಮದಡಿ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಿಕೊಳ್ಳುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸರಿಯಾಗಿ ದೊರೆತಿಲ್ಲ. ಇದಕ್ಕಾಗಿ ೧೫ ಸಾವಿರ ಕಟ್ಟಬೇಕೆಂದು ಅವರಿವರು ಹೇಳಿದ್ದರು. ಈಗಾಗಲೇ ಸಾಲ ಮಾಡಿ ಬೋರ್ ಹಾಕಿಸಿರುವ ರೈತ ಬಳಿ ಅಷ್ಟೊಂದು ಹಣವೆಲ್ಲಿರುತ್ತೆ, ವಿದ್ಯುತ್ ಉಚಿತ ಎಂದು ಸರ್ಕಾರ ಹೇಳಿದ್ದು ಹಣಕಟ್ಟಿ ಎನ್ನುವುದು ರೈತರ ಮೇಲೆ ಗದಾಪ್ರಹಾರ ಮಾಡಿದಂತಾಗುತ್ತದೆ : ಕೃಷ್ಣಮೂರ್ತಿ ,ಗೂಬೆಹಳ್ಳಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ