ವರದಿ : ಡಿ.ಆರ್.ನರೇಂದ್ರಬಾಬು.
ಹುಳಿಯಾರು: ಹೋಬಳಿ ವ್ಯಾಪ್ತಿಯ ಕೆಂಕೆರೆ, ಗಾಣಧಾಳು,ರಂಗನಕೆರೆ,ದಸೂಡಿ,ದಬ್ಬಗುಂಟೆ, ಹೊಯ್ಸಳಕಟ್ಟೆ ಸೇರಿದಂತೆ ಬಹುತೇಕ ಕಡೆ ಈ ಬಾರಿ ಉತ್ತಮ ಪೂರ್ವ ಮುಂಗಾರು ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕಾಗಿದೆ. ಕಳೆದೊಂದು ತಿಂಗಳಿಂದ ಜಾತ್ರೆ,ಹಬ್ಬ ಹರಿದಿನಗಳಲ್ಲಿ ತೊಡಗಿಕೊಂಡಿದ್ದ ರೈತರು , ಉತ್ತಮ ಮಳೆಯಾಗಿರುವುದರಿಂದ ತಮ್ಮ ಹೊಲಗಳತ್ತ ಮುಖಮಾಡಿ ಉತ್ತುಬಿತ್ತುವ ಕಾರ್ಯದಲ್ಲಿ ಮುಂದಾಗಿದ್ದಾರೆ.
ಹೆಸರನ್ನು ಪೂರ್ವ ಮುಂಗಾರಿನಲ್ಲಿ ಬೆಳೆಯುವ ವಾಡಿಕೆಯಿದ್ದು ಸುಮಾರು 2-3 ಬಾರಿ ಉತ್ತಮ ಹದಮಳೆ ಬಂದಿರುವುದರಿಂದ ಕೆಲವರು ತಮ್ಮ ಹೊಲಗಳ ಸ್ವಚ್ಚತೆಯಲ್ಲಿ ತೊಡಗಿದರೆ ಮತ್ತೆ ಕೆಲವರು ಹೆಸರು ಬಿತ್ತನೆಗೆ ಮುಂದಾಗಿದ್ದಾರೆ.
ಯಳನಡು,ಕೋರಗೆರೆ,ತಿಮ್ಲಾಪುರ,ಸೀಗೆಬಾಗಿ ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿ ಬೇಸಾಯ ಮಾಡಿ ಹೊಲಗಳನ್ನು ಸ್ವಚ್ಚಮಾಡಿಕೊಂಡಿದ್ದು ಸೊನೆಮಳೆ ಬಂದರೆ ಸಾಕು ಬಿತ್ತನೆ ಮಾಡಲು ಕಾದುಕೂತಿದ್ದಾರೆ. ಗುರುವಾರ ರಾತ್ರಿ ಗುರುವಾಪುರ,ಮೇಲನಹಳ್ಳಿ,ಸೋಮನಹಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಉತ್ಸಾಹದಿಂದ ಹೆಸರು ಬಿತ್ತನೆಗೆ ಮುಂದಾಗಿದ್ದಾರೆ.
ಹುಳಿಯಾರು ಹೋಬಳಿ ರಂಗನಕೆರೆ ಬಳಿ ಉಳುಮೆಯಲ್ಲಿ ತೊಡಗಿರುವ ರೈತ.
|
ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಹಾಗೂ ರೈತರ ಬಳಿ ದನಗಳ ಸಂಖ್ಯೆ ಕೂಡ ಇಳಿಮುಖವಾಗಿರುವುದರಿಂದ ಉಳುಮೆಗಾಗಿ ಟ್ರಾಕ್ಟರ್ ಗಳ ಮೊರೆ ಹೋಗುತ್ತಿದ್ದಾರೆ. ೪೫ ದಿನಗಳ ಬೆಳೆಯಾದ ಹೆಸರು ಜೂನ್ ತಿಂಗಳೊಳಗೆ ಕೈ ಸೇರಲಿದೆ.ಪೂರ್ವ ಮುಂಗಾರಿನಲ್ಲಿ ಬೇಗ ಬಿತ್ತನೆ ಮಾಡುವುದರಿಂದ ಬೆಳೆ ಕಟಾವಿನ ನಂತರ ಮತ್ತೊಂದು ಬೆಳೆ ಮಾಡಬಹುದು ಎನ್ನುತ್ತಾರೆ ಅನುಭವಿ ರೈತರು.
ಸದ್ಯ ರೈತರು ಬೀಜ ಹಾಗೂ ರಸಗೊಬ್ಬರ ಖರೀದಿಗೆ ತೊಡಗಿದ್ದು, ಕೆಲ ರೈತರು ಮುಂದಿನ ಬೆಳೆಗೆಂದು ಉಳಿಸಿಕೊಂಡಿದ್ದ ಬೀಜವನ್ನು ಬಿತ್ತನೆಗೆ ಬಳಸುತ್ತಿದ್ದರೆ ಮತ್ತೆ ಕೆಲ ರೈತರು ರೈತ ಸಂಪರ್ಕ ಕೇಂದ್ರದತ್ತ ಮುಖಮಾಡಿದ್ದಾರೆ. ಕೃಷಿ ಇಲಾಖೆ ಈಗಾಗಲೇ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ಜೈವಿಕ ಗೊಬ್ಬರ ಪೂರೈಕೆ ಮಾಡುತ್ತಿದೆ. ಹುಳಿಯಾರಿನ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರ ೩೯೦ರೂ ಗೆ ೫ ಕೆಜಿ ಬಿತ್ತನೆ ಹೆಸರುಕಾಳು ಬೀಜ ನೀಡುತ್ತಿದ್ದು ಪಹಣಿ ಮತ್ತು ಐಡಿ ಕಾರ್ಡ್ ತಂದು ಪಡೆಯಬಹುದಾಗಿದೆ.
ಮಳೆ ಬರುವುದಕ್ಕೂ ಮೊದಲೆ ಗೊಬ್ಬರದ ಅಂಗಡಿಯವರು ರಸಗೊಬ್ಬರದ ದಾಸ್ತಾನಿಗೆ ಮುಂದಾಗಿದ್ದರಿಂದ ಎಲ್ಲೂ ಗೊಬ್ಬರದ ಕೊರತೆ ಕಾಣದೆ ದಂಡಿಯಾಗಿ ರಸಗೊಬ್ಬರ ದೊರೆಯುತ್ತಿದೆ. ಜಿಂಕ್, ಕ್ಯಾಲ್ಸಿಯಂ,ಬೋರಾನ್,ಜಿಪ್ಸಂ ಅವಶ್ಯಕತೆಯಿದ್ದು ರೈತಸಂಪರ್ಕ ಕೇಂದ್ರದಲ್ಲಿ ಬೋರಾನ್ ,ಬಿಪ್ಸಂ ಮಾತ್ರ ಲಭ್ಯವಿದ್ದು ಉಳಿದ ಗೊಬ್ಬರವನ್ನು ಶೀಘ್ರವೇ ವ್ಯವಸ್ಥೆ ಮಾಡಬೇಕಿದೆ.
ಕಳೆದ ಬಾರಿ ಕಾಯಿ ಹಿಡಿದು,ಬಲಿಯುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೆಲ ರೈತರಿಗೆ ಹೆಸರು ಕೈಹತ್ತಲಿಲ್ಲ. ವಾಡಿಕೆಯಂತೆ ಅಶ್ವಿನಿ,ಭರಣೆ ಮಳೆಗೆ ಮುಂಗಾರು ಬಿತ್ತನೆ ಪ್ರಾರಂಭಗೊಳ್ಳುವುದಿದ್ದು , ಇದೀಗ ರೈತರು ಮುಂಚಿತವಾಗಿಯೇ ಬಿತ್ತನೆ ಮಾಡಿದ್ದಾರೆ. ಇದೀಗ ಅಶ್ವಿನಿ ಮಳೆ ಪ್ರಾರಂಭವಾಗಿದ್ದು ಮುಂದಿನ್ನು ಭರಣಿ,ಕೃತಿಕಾ,ರೋಹಿಣಿ, ಮೃಗಶಿರಾ ಮಳೆಗಳಿದ್ದು ಬಿತ್ತನೆ ಮಾಡಿರುವ ಬೆಳೆಗೆ ಮಳೆ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ ಎಂಬ ನಂಬಿಕೆ ರೈತರಲ್ಲಿ ಮನೆ ಮಾಡಿದೆ.ಮುಂದಿನಗಳಲ್ಲಿ ಮಳೆ ಉತ್ತಮವಾಗಿ ಬಂದರೆ ಹೆಸರು ಹುಲುಸಗಿ ಬೆಳೆದು ರೈತರ ಬಾಳನ್ನು ಹಸನು ಮಾಡಲಿದೆ.
----------
ಬಿತ್ತನೆಗೂ ಮುಂಚೆ ಹೆಸರುಕಾಳಿನ ಬೆಲೆ ಕೆಜಿಗೆ ೭೫ ರಿಂದ ೮೦ ಇದ್ದರೆ, ಬೆಳೆ ಬಂದ ಸಮಯದಲ್ಲಿ ದಿಢೀರ್ ಅಂತ ಕಡಿಮೆಯಾಗುತ್ತದೆ. ಹಾಕಿದ ಬೀಜ,ಗೊಬ್ಬರ,ಬೇಸಾಯದ ಕೂಲಿ ಇವನೆಲ್ಲ ಕಳೆದು ಉಳಿಯೋದು ಮಾತ್ರ ತೀರಾ ಕಡಿಮೆನೆ. ಈ ಬಾರಿಯಾದರೂ ಸಕಾಲಕ್ಕೆ ಮಳೆಬಂದಲ್ಲಿ ಒಂದಿಷ್ಟು ಹೆಸರುಕಾಳನ್ನು ದಾಸ್ತಾನು ಮಾಡುತ್ತೇವೆ : ಕೆಂಕೆರೆಯ ಕರೆಸಿದ್ದಯ್ಯನ ಚಂಬಣ್ಣ., ರೈತ .
--------
ಈ ಭಾಗದ ಹೆಸರುಕಾಳಿಗೆ ಗುಜರಾತ್, ಆಂಧ್ರಪ್ರದೇಶ, ರಾಜಸ್ತಾನ, ಹರಿಯಾಣ,ಪಶ್ಚಿಮ ಬಂಗಾಳ,ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಇಲ್ಲಿನ ಎಪಿಎಂಸಿ ಯಲ್ಲಿ ಹೆಚ್ಚಿನ ಪ್ರಮಾಣದ ಹೆಸರು ಖರೀದಿ ಆಗುತ್ತದೆ: ಬಾಲಾಜಿ, ರವಾನೆದಾರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ