ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿದೇವಿಯ ೪೫ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ದೇವಿಯ ಕಳಸೋತ್ಸವ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿಯ ನಡೆಮುಡಿ ಕಳಸ ಶ್ರದ್ಧಾಭಕ್ತಿಯಿಂದ ನಡೆಯಿತು. |
ಬುಧವಾರ ರಾತ್ರಿ ದೇವರುಗಳ ಕೂಡುಭೇಟಿ ನಡೆದು ದುರ್ಗಮ್ಮನವರೊಂದಿಗೆ ಹುಳಿಯಾರಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ, ಕೆಂಚಮ್ಮ, ಗೌಡಗೆರೆ ದುರ್ಗಮ್ಮ ನವರೊಂದಿಗೆ ಕೆರೆಯಲ್ಲಿನ ಬಾವಿಹತ್ತಿರ ಗದ್ದುಗೆ ಮಾಡಲಾಗಿತ್ತು. ಮುಂಜಾನೆ ಪಟ್ಟದಕಳಸ ಸ್ಥಾಪನೆ ಹಾಗೂ ಗಂಗಾಸ್ನಾನ ನಡೆಸಲಾಯಿತು. ಮಂಗಳಾರತಿ ಹಾಗೂ ಪನಿವಾರವಿತರಿಸಿದ ನಂತರ ಸರ್ವಾಲಂಕೃತದುರ್ಗಮ್ಮನವರೊಂದಿಗೆ ಪಟ್ಟದಕಳಸ ಸಮೇತ ನಡೆಮುಡಿ ಪ್ರಾರಂಭಗೊಂಡಿತು. ಬೆಳಗಿನ ಜಾವದಿಂದಲೇ ಕೆರೆ ಬಾವಿ ಸಮೀಪ ಹೆಣ್ಣುಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಪಟ್ಟದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ಊರಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಹಾಗೂ ಇತರೆ ಕಾರಣಗಳಿಗೆ ಹರಕೆ ಹೊತ್ತವರು ತಮ್ಮ ಹೆಣ್ಣು ಮಕ್ಕಳಿಗೆ ಕಳಸ ಹೊರಿಸುವುದು ಇಲ್ಲಿನ ಸಂಪ್ರದಾಯವಾಗಿದ್ದು , ಕಳಸಹೊತ್ತ ಹೆಣ್ಣುಮಕ್ಕಳು ನಡೆಮುಡಿಯಲ್ಲಿ ದೇವಿಯ ಮೂಲಸ್ಥಾನದತ್ತ ಹೆಜ್ಜೆ ಹಾಕಿದರು. ಕೆರೆಯ ಬಾವಿ ಹತ್ತಿರದಿಂದ ಪ್ರಾರಂಭವಾದ ನಡೆಮುಡಿ ವಿವಿಧ ದೇವರುಗಳ ಮದಾಸಿ ಕುಣಿತದೊಂದಿಗೆ ರಂಗನಾಥಸ್ವಾಮಿ ರಸ್ತೆ, ಬ್ರಾಹ್ಮಣರ ಬೀದಿ,ಆಚಾರ್ ಬೀದಿ ಮಾರ್ಗದಲ್ಲಿ ಸಾಗಿ ದುರ್ಗಮ್ಮನ ಮೂಲಸ್ಥಾನ ತಲುಪಿ, ದೇವಾಲಯವನ್ನು ಪ್ರದಕ್ಷಿಣೆ ಹಾಕಿದ ನಂತರ ಕಳಸಗಳನ್ನು ವಿಸರ್ಜಿಸಲಾಯಿತು.
ಹುಳಿಯಾರು,ಲಿಂಗಪ್ಪನಪಾಳ್ಯ,ಕೋಡಿಪಾಳ್ಯ,ಕಾಮಶೆಟ್ಟಿಪಾಳ್ಯ, ಕೇಶವಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ೨೧೩ ಮಂದಿ ಹೆಣ್ಣುಮಕ್ಕಳು ಕಳಸ ಹೊತ್ತು ತಮ್ಮ ಹರಕೆ ತೀರಿಸಿದರು. ಕಳಸೋತ್ಸವದಲ್ಲಿ ಪೋಷಕರು,ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು. ಕಳಸ ಹೊತ್ತ ಹೆಣ್ಣುಮಕ್ಕಳಿಗೆ ಪೋಲೀಸ್ ಇಲಾಖೆವತಿಯಿಂದ ಉಪಹಾರ ವ್ಯವಸ್ಥೆ ಮಾಡಿಸಿದ್ದರು. ಕನಕ ಯುವ ವೇದಿಕೆವತಿಯಿಂದ ಪಾನಕವಿತರಣೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ