ಮಹಾನ್ ದಾರ್ಶನಿಕರಾದ ಯತಿಶ್ರೇಷ್ಠ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ತಾಲ್ಲೂಕ್ ಆಡಳಿತ ಆಚರಿಸದೆ ಕಡೆಗಣಿಸಿರುವುದನ್ನು ತಾಲ್ಲೂಕ್ ವಿಪ್ರಹಿತರಕ್ಷಣಾ ವೇದಿಕೆ ಖಂಡಿಸಿದೆ.
ವೇದಾಂತ ತತ್ವಕ್ಕೆ ಆದಿ ಶಂಕರರು ನೀಡಿದ ಕೊಡುಗೆ ಪರಿಗಣಿಸಿದ ರಾಜ್ಯ ಸರ್ಕಾರ ಈ ಹಿಂದೆಯೇ ಶ್ರೀ ಶಂಕರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ. ಈ ದಿನವನ್ನು ತತ್ವಜ್ಞಾನಿಗಳ ದಿನಚಾರಣೆಯಾಗಿ ಸರ್ಕಾರಿ ಕಛೇರಿಗಳಲ್ಲಿ ರಜೆ ರಹಿತವಾಗಿ ಆಚರಿಸುವ ಆಶಯ ಹೊಂದಿ 5-3-2003ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಇದನ್ನು ಅನುಸರಿಸಿ ಶಂಕರ ಜಯಂತಿಯನ್ನು ಆಚರಿಸಿ ಎಂಬ ವಿಪ್ರವಿಪ್ರಹಿತರಕ್ಷಣಾ ವೇದಿಕೆ ಮನವಿಯನ್ನು ಪರಿಗಣಿಸದೆ ತಹಸಿಲ್ದಾರ್ ತಾತ್ಸಾರ ಮಾಡಿದ್ದಾರೆ ಎಂದು ವೇದಿಕೆಯ ಪ್ರಧಾನಕಾರ್ಯದರ್ಶಿ ಮಧೂಸೂಧನ್ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅದ್ವೈತ ದರ್ಶನವನ್ನು ಭಾರತದ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸಿದ ಮಹಾಮಹಿಮರಾದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸರ್ಕಾರದ ಸುತ್ತೋಲೆಯಂತೆ ಆಚರಿಸಿ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಡಳಿತವನ್ನು ತಾಲ್ಲೂಕ್ ವಿಪ್ರಹಿತರಕ್ಷಣ ವೇದಿಕೆ ಒತ್ತಾಯಿಸಿತ್ತು. ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮನವಿಪತ್ರದೊಂದಿಗೆ ರಾಜ್ಯ ಸರ್ಕಾರದ ಗೆಜೆಟ್ ಪ್ರತಿಯನ್ನು ಸಹ ಸಲ್ಲಿಸಿ ೨೩ರಂದು ಆಚರಿಸುವಂತೆ ಮನವಿ ಕೂಡ ಮಾಡಲಾಗಿತ್ತು. ರಾಜ್ಯಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದ್ದರೂ ಸಹ ಬೆಲೆಕೊಡದೆ ಜಿಲ್ಲಾಡಳಿತವನ್ನು ಕೇಳಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ತಹಸೀಲ್ದಾರ್ ಅವರಿಗೆ ರಾಜ್ಯಪತ್ರದ ಸುತ್ತೋಲೆ ಅನ್ವಯವಾಗುವುದಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.
ತಾಲ್ಲೂಕು ಆಡಳಿತದಿಂದ ಚಿಕ್ಕನಾಯಕನಹಳ್ಳಿಯಲ್ಲಿ ಪಂಚ ಮಹಾಪುರುಷರಾದ ಶಿವಯೋಗಿ ಸಿದ್ದರಾಮೇಶ್ವರ, ಛತ್ರಪತಿ ಶಿವಾಜಿ, ಅಂಬಿಗರ ಚೌಡಯ್ಯ, ಭಗೀರಥ ಹಾಗೂ ಸರ್ವಜ್ಞ ಜಯಂತಿ ಮಾತ್ರ ಅದ್ದೂರಿಯಾಗಿ ಆಚರಿಸಿ ಶಂಕರರ ಜಯಂತಿ ಆಚರಿಸದಿರುವುದು ಅಲ್ಪಸಂಖ್ಯಾತರಾದ ಬ್ರಾಹ್ಮಣರನ್ನು ಅಪಮಾನಿಸಿದಂತಾಗಿದೆ ಎಂದು ಖಂಡಿಸಿದ್ದಾರೆ.ಇನ್ನಾದರೂ ತಾಲ್ಲೂಕ್ ಆಡಳಿತ ಎಚ್ಚೆತ್ತು ಶಂಕರ ಜಯಂತಿ ಆಚರಿಸಲು ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ