ಹುಳಿಯಾರು ಪಟ್ಟಣದಲ್ಲಿ ಪ್ರತಿ ಗುರುವಾರ ಸಂತೆ ನಡೆಯುವ ಜಾಗದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ರೈತಸಂಘದವರು ಹಾಗೂ ಸಾರ್ವಜನಿಕರು ಪಂಚಾಯ್ತಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಹುಳಿಯಾರು ಗ್ರಾ.ಪಂ. ಎದುರು ನಡೆದ ಹರಾಜು ಪ್ರಕ್ರಿಯಲ್ಲಿ ರೈತ ಸಂಘದವರು, ಸಾರ್ವಜನಿಕರು ಹಾಗೂ ಗ್ರಾ.ಪಂ. ಅಧಿಕಾರಿಗಳೊಂದಿಗೆ ನಡೆದ ಮಾತಿನ ಚಕಮುಕಿ. |
೨೦೧೫-೧೬ ನೇ ಸಾಲಿನ ಸಂಜೆ ಸುಂಕ, ಬಸ್ ಸುಂಕ,ಪುಟ್ ಬಾತ್ ಅಂಗಡಿಗಳ ಸುಂಕ ವಸೂಲಾತಿ ಬಗ್ಗೆ ಬಹಿರಂಗ ಹರಾಜು ಮಾಡಲು ಮಂಗಳವಾರ ಸಭೆ ಕರೆಯಲಾಗಿತ್ತು. ಸಭೆಗೆ ಆಗಮಿಸಿದ್ದ ರೈತಸಂಘದವರು, ಸಾರ್ವಜನಿಕರು ಪ್ರತಿ ವರ್ಷ ಪಂಚಾಯ್ತಿವರು ಲಕ್ಷಾಂತರ ರೂಪಾಯಿಗೆ ಹರಾಜು ಮಾಡಿ ಸುಂಕ ಕಟ್ಟಿಸಿಕೊಳ್ಳುತ್ತೀರಾ ಆದರೆ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸಂತೆ ಮುಗಿದು ಎರಡು ಮೂರು ದಿನಗಳಾದರೂ ಸಂತೆ ಮೈದಾನದಲ್ಲಿ ಬಿದ್ದಿರುವ ತ್ಯಾಜ್ಯವನ್ನು ವಿಲೇ ಮಾಡದೆ ಅನೈರ್ಮಲ್ಯ ಹೆಚ್ಚುವಂತೆ ಮಾಡುತ್ತಾರೆ. ಈ ಬಗ್ಗೆ ಪಂಚಾಯ್ತಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.
ಸಂತೆ ಜಾಗ ಹಾಗೂ ಬಸ್ ನಿಲ್ದಾಣದಲ್ಲಿ ಸೂಕ್ತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟನಂತರ ತಮ್ಮ ಹರಾಜು ಪ್ರಕ್ರಿಯೆ ಮುಂದುವರಿಸುವಂತೆ ರೈತ ಸಂಘದವರು ಪಟ್ಟು ಹಿಡಿದರಲ್ಲದೆ, ಒಂದು ವೇಳೆ ಹರಾಜು ನಡೆಸಿದರೆ ರೈತರು ಹಾಗೂ ವ್ಯಾಪಾರಸ್ಥರು ಯಾರೊಬ್ಬರು ಸುಂಕವನ್ನು ಕಟ್ಟುವುದಿಲ್ಲ ಎಂದು ಎಚ್ಚರಿಸಿದರು.
ಈ ವಿಚಾರವಾಗಿ ಪಿಡಿಓ, ಗ್ರಾ.ಪಂಸದಸ್ಯರು ಹಾಗೂ ರೈತ ಸಂಘದ ಪದಾಧಿಕಾರಿಗಳ ನಡುವೆ ಕೆಲಕಾಲ ಮಾತಿನಚಕಮುಕಿ ನಡೆಯಿತಾದರೂ ಸಹ ಪಿಡಿಓ ಹರಾಜು ಪ್ರಕ್ರಿಯೆಯನ್ನು ನಡೆಸಿದರು. ಇದರಿಂದ ಅಸಮಾಧಾನಗೊಂಡ ರೈತಸಂಘದವರು ರೈತರು ತಾವು ತಂದು ಮಾರುವ ಬೆಳೆಗೆ ಯಾವುದೇ ಕಾರಣಕ್ಕೂ ಸುಂಕ ಕಟ್ಟುವುದಿಲ್ಲ ಎಂದು ಸಭೆಯಿಂದ ನಿರ್ಗಮಿಸಿದರು.
ಹರಾಜು ಪ್ರಕ್ರಿಯೆ ಬಗ್ಗೆ ಪ್ರಚಾರವಿಲ್ಲ : ಸಂತೆ ಸುಂಕ, ಬಸ್ ಸುಂಕ, ಪುಟ್ ಬಾತ್ ಸುಂಕ ವಸೂಲಿ ಬಗ್ಗೆ ಹರಾಜು ನಡೆಸುವುದಾಗಿ ಹೆಚ್ಚಿನ ಪ್ರಚಾರ ಮಾಡದೆ ತಮ್ಮಿಷ್ಟದಂತೆ ಹರಾಜು ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕೆಲ ಸಾರ್ವಜನಿಕರು ದೂರಿದರಲ್ಲದೆ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಪಟ್ಟುಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಅವರು ನಾವು ಎಅರ್ಡು ದಿನ ಮುಂಚಿತವಾಗಿ ಆಟೋದಲ್ಲಿ ಮೈಕ್ ಮೂಲಕ ಪ್ರಚಾರ ನಡೆಸಿರುವುದಲ್ಲದೆ ಕರಪತ್ರಗಳನ್ನು ಹಂಚಿರುವುದಾಗಿ ತಿಳಿಸಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಉಪಾಧ್ಯಕ್ಷೆ ಅಬಿದುನ್ನಿಸಾ, ಸದಸ್ಯರಾದ ಅಶೋಕ್ ಬಾಬು,ಅನ್ಸರ್ ಅಲಿ, ಜಹೀರ್ ಸಾಬ್,ಧನುಷ್ ರಂಗನಾಥ್,ರಾಘವೇಂದ್ರ, ಗೀತಾಬಾಬು,ವೆಂಕಟಮ್ಮ, ಪುಟ್ಟಮ್ಮ ಸೇರಿದಂತೆ ಇತರ ಸದಸ್ಯರು ಹಾಗೂ ರೈತಸಂಘದ ತಮ್ಮಡಿಹಳ್ಳಿ ಮಲ್ಲಿಕಣ್ಣ, ಹೊಸಳ್ಳಿ ಚಂದ್ರಪ್ಪ, ಗೊಲ್ಲರಹಟ್ಟಿ ಕೊಟ್ರೇಶ್, ನಾಗಣ್ಣ, ಮೋಹನ್ ಕುಮಾರ್ ರೈ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ