ವರದಿ:ಡಿ.ಆರ್.ನರೇಂದ್ರಬಾಬು
--------
ಹುಳಿಯಾರು : ರಾಗಿ ಬೆಲೆಯ ಕುಸಿತದ ಹಿನ್ನಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರಾರಂಭವಾಗಿದ್ದ ರಾಗಿ ಖರೀದಿ ಕೇಂದ್ರದ ಅವಧಿ ಮಾರ್ಚ್ ೩೧ಕ್ಕೆ ಮುಗಿಯುತ್ತಿದ್ದಂತೆ ಎಪಿಎಂಸಿ ಮಾರುಕಟ್ಟೆಯ ವರ್ತಕರು ರಾಗಿ ಬೆಲೆಯನ್ನು ಒಂದೇದಿನದಲ್ಲಿ ಸುಮಾರು ೮೦೦ರೂ ದಿಢೀರ್ ಇಳಿಕೆ ಮಾಡಿದ್ದಾರೆ.
ರೂಪಾಯಿ ಎರಡುಸಾವಿರಕ್ಕೆ ಖರೀದಿ ಕೇಂದ್ರಗಳಲ್ಲಿ ಕೊಳ್ಳಲಾಗುತ್ತಿದ್ದ ರಾಗಿಗೆ ಮಾರ್ಚ್ ೩೧ ರಂದು ಅಂತಿಮ ಖರೀದಿ ನಡೆದು ಕೇಂದ್ರ ಬಾಗಿಲು ಮುಚ್ಚಿದ ಬೆನ್ನಲ್ಲೆ ಒಂದೇ ದಿನದಲ್ಲಿ ರಾಗಿ ಬೆಲೆ ಕುಸಿತಕಂಡು ಕ್ವಿಂಟಲ್ ೧೩೦೦-೧೪೦೦ರ ಅಸುಪಾಸಿನಲ್ಲಿದೆ. ದಿಢೀರ್ ಕುಸಿತದಿಂದ ಕಂಗಾಲಾಗಿರುವ ರೈತ ಮತ್ತೆ ಖರೀದಿ ಕೇಂದ್ರದ ಅವಧಿ ವಿಸ್ತರಣೆಯ ನಿರೀಕ್ಷೆಯಲ್ಲಿದ್ದಾನೆ.
ಹಿನ್ನಲೆ : ರಾಗಿ ಬೆಲೆ ತೀವ್ರ ಕುಸಿತಕಂಡ ಹಿನ್ನಲೆಯಲ್ಲಿ ಸರ್ಕಾರ ಕಳೆದ ಡಿಸೆಂಬರ್ ೧೫ ರಂದೇ ಜಿಲ್ಲೆಯ ೧೦ ಎಪಿಎಂಸಿಗಳಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರ ಬೆಂಬಲಕ್ಕೆ ಮುಂದಾಗಿತ್ತು. ಉತ್ತಮ ಗುಣಮಟ್ಟದ ರಾಗಿಗೆ ಪ್ರತಿ ಕ್ವಿಂಟಲ್ ಗೆ ರೂ.೧೫೫೦ ಹಾಗೂ ಪ್ರೋತ್ಸಾಹ ಧನ ರೂ.೪೫೦ ನೀಡಿ ಪ್ರತಿ ಕ್ವಿಂಟಾಲ್ ಗೆ ರೂ.೨೦೦೦ ದಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಮೂಲಕ ಖರೀದಿ ಪ್ರಾರಂಭಿಸಿತು.
ಮಾರುಕಟ್ಟೆ ದರ ೧೨೦೦ ರಿಂದ ೧೪೦೦ರ ಆಸುಪಾಸಿನಲ್ಲಿದ್ದಾಗ ಕೇಂದ್ರದಲ್ಲಿ ೨೦೦೦ ರೂಪಾಯಿನಂತೆ ಕೊಳ್ಳಲು ಆರಂಭಿಸಿದ್ದರಿಂದ ರೈತರು ಖರೀದಿ ಕೇಂದ್ರದತ್ತ ಮುಖಮಾಡಿದರು. ಪ್ರಾರಂಭದಲ್ಲಿ ಬೆಳೆ ಪಹಣಿ, ರಾಗಿ ಇಳುವರಿ ದೃಢೀಕರಣ ಪತ್ರ, ರಾಗಿ ಮಾದರಿ ದೃಢೀಕರಣ, ಬ್ಯಾಂಕ್ ಖಾತೆ ಸಂಖ್ಯೆ ಮುಂತಾದ ಸಮಸ್ಯೆಗಳಿಂದಾಗಿ ಪ್ರಾರಂಭದ ಕೆಲ ದಿನಗಳು ಖರೀದಿ ಕುಂಟುತ್ತಾ ಸಾಗಿತ್ತು.
![]() |
ರಾಗಿ ಖರೀದಿ ಕೇಂದ್ರ ಮುಚ್ಚಿದ್ದು ಕಡಿಮೆ ಬೆಲೆಗೆ ಮಾರಾಟ ಮಾಡಲು ರೈತರು ಮುಂದಾಗದೆ ಹಿನ್ನಲೆಯಲ್ಲಿ ಎಪಿಎಂಸಿ ಬಣಗುಟ್ಟುತ್ತಿರುವುದು. |
ನಂತರದ ದಿನದಲ್ಲಿ ಖರೀದಿ ಹೆಚ್ಚಾಗುತ್ತಾ ಕಡೆದಿನಗಳಲ್ಲಿ ಸಂಜೆವರೆಗೂ ಕೊಂಡರೂ ಕುಗಿಯದಷ್ಟು ರಾಗಿ ಕೇಂದ್ರಕ್ಕೆ ಬಂದಿತ್ತು. ಸಮಯ ಮುಗಿದಿದ್ದರಿಂದ ಹೆಚ್ಚಿನ ರೈತರು ವಾಪಸ್ಸಾದ ಘಟನೆ ಕೂಡ ನಡೆಯಿತು.
ಸಾಮಾನ್ಯವಾಗಿ ಬೆಲೆ ಕುಸಿತಕಂಡಾಗ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಮುಂದಾಗುವ ಸರ್ಕಾರ ಸೀಮಿತ ಅವಧಿಯವರೆಗೆ ಖರೀದಿ ಕೇಂದ್ರ ತೆರೆದಿರುತ್ತದೆ.ಅಷ್ಟರೊಳಗೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗುವುದರಿಂದ ಖರೀದಿ ಕೇಂದ್ರ ಮುಚ್ಚಲ್ಪಟ್ಟರು ರೈತರಿಗೆ ಸಮಸ್ಯೆ ಎದುರಾಗುವುದಿಲ್ಲ. ಇದೀಗ ಖರೀದಿ ಕೇಂದ್ರ ನಿಂತ ಒಂದೇ ದಿನದಲ್ಲಿ ಬೆಲೆ ಸ್ಥಿರವಾಗುವ ಬದಲು ತೀವ್ರ ಇಳಿಕೆಯಾಗಿರುವುದು ರೈತರ ಆತಂಕಕ್ಕೀಡು ಮಾಡಿದೆ. ಇನ್ನೂ ಕೆಲ ದಿನ ವಿಸ್ತರಣೆ ಮಾಡಲಿ ಎಂಬ ಒತ್ತಾಯಕ್ಕೆ ಕಾರಣವಾಗಿದೆ.
ಮಧ್ಯವರ್ತಿಗಳ ಹಾವಳಿ : ಖರೀದಿ ಕೇಂದ್ರದಲ್ಲಿ ಗುಣಮಟ್ಟ ಹಾಗೂ ದಾಖಲೆಗಳ ನೀಡುವಿಕೆಯಲ್ಲಿ ಹೈರಾಣಾಗುವ ರೈತರು ಮಧ್ಯವರ್ತಿಗಳನ್ನು ಅವಲಂಭಿಸುವುದು ಸಹಜವಾಗಿದ್ದು ಇದನ್ನೇ ಮಧ್ಯವರ್ತಿಗಳು ಬಂಡವಾಳ ಮಾಡಿಕ್ಕೊಂಡಿದ್ದು, ರೈತರ ದಾಖಲೆಗಳನ್ನು ಪಡೆಯುವ ಇವರು ಇದರೊಂದಿಗೆ ತಮ್ಮ ರಾಗಿಯನ್ನು ಮಾರಾಟಮಾಡಿಕೊಂಡಿರುವುದು ಇಲ್ಲಿ ಗುಟ್ಟಾಗಿಯೇನು ಉಳಿದಿಲ್ಲ.
ಒತ್ತಾಯ : ಈ ಬಾರಿ ಉತ್ತಮ ಮಳೆಯಾಗಿ ರಾಗಿ ಹುಲುಸಾಗಿ ಬೆಳೆದ ಹಿನ್ನಲೆಯಲ್ಲಿ ಸಾಕಷ್ಟು ರೈತರಲ್ಲಿ ರಾಗಿ ಯತೇಚ್ಚವಾಗಿದೆ ಇದೆ.ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಮಿರಿಮಿರಿ ಮಿಂಚುವ ಉತ್ತಮ ರಾಗಿಗೆ ೧೪೦೦ ರೂ ಬೆಲೆಯಿದ್ದು ಸಾಮಾನ್ಯರಾಗಿಗೆ ೧೨೦೦ರೂ ನಂತೆ ಮಾರಾಟವಾಗುತ್ತಿದೆ. ಸಾಗಾಣಿಕವೆಚ್ಚ ,ಕೂಲಿ ಲೆಖ್ಖಹಾಕಿದಲ್ಲಿ ರೈತರಿಗೆ ಚಿಕ್ಕಾಸು ಉಳಿಯುವುದು ಕಷ್ಟವಾಗಿದೆ. ವರ್ತಕರ ಕಪಿಮುಷ್ಟಿಯಲ್ಲಿರುವ ಹುಳಿಯಾರು ಎಪಿಎಂಸಿಯಲ್ಲಿ ರೈತರಿಗೆ ಬಾರಿ ಅನ್ಯಾಯವಾಗುತ್ತಿದ್ದು ಸರ್ಕಾರ ಕನಿಷ್ಠ ಹದಿನೈದು ದಿನಗಳವರೆಗಾದರೂ ಖರೀದಿ ಕೇಂದ್ರದ ಅವಧಿ ವಿಸ್ತರಣೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ.
------------------------
ಮಾರುಕಟ್ಟೆಯಲ್ಲಿ ವಸ್ತುಗಳು ದಿನೇದಿನೇ ಏರು ಮುಖವಾಗುತ್ತಿದ್ದರೆ ರೈತರು ಬೆಳೆಯುವ ರಾಗಿಗೆ ಮಾತ್ರ ಉತ್ತಮ ಬೆಲೆ ಸಿಗುತ್ತಿಲ್ಲ. ಸರ್ಕಾರ ಎಷ್ಟೇ ಬಿಗಿ ಮಾಡಿದರೂ ಖರೀದಿ ಕೇಂದ್ರಗಳಲ್ಲಿ ರೈತರಿಗಿಂತ ವರ್ತಕರಿಗೆ ಹೆಚ್ಚು ಅನುಕೂಲ. ವರ್ತಕರು ರೈತರ ಹೆಸರಿನಲ್ಲಿ ತರುವ ರಾಗಿಯನ್ನು ಸಬೂಬಿಲ್ಲದೆ ಕೊಳ್ಳುವ ಅಧಿಕಾರಿಗಳು, ಖುದ್ದು ರೈತರೇ ಮಾರಾಟ ಮಾಡಲು ಹೋದಾಗ ಗುಣಮಟ್ಟ ಸರಿಯಿಲ್ಲ ಎಂದು ತಿರಸ್ಕರಿಸುವುದು ಸರಿಯಲ್ಲ : ಶಿವಣ್ಣ ರೈತ.
---------------
ಖರೀದಿ ಕೇಂದ್ರದಲ್ಲಿ ಜನವರಿ ೨೨ರಿಂದ ಮಾರ್ಚ್ ೩೧ರವರೆಗೂ ನಡೆದ ಖರೀದಿಯಲ್ಲಿ ೧೨,೫೪೨ ಕ್ವಿಂಟಾಲ್ ರಾಗಿ ಖರೀದಿ ನಡೆದಿದೆ. ೫೬೯ ರೈತರು ಇದರ ಪ್ರಯೋಜನ ಪಡೆದಿದ್ದಾರೆ : ಕೇಂದ್ರದ ಮೇಲ್ವಿಚಾರಕ ಬಸವರಾಜು.
----------------------------
ಹೋಬಳಿಯ ಹುಳಿಯಾರು,ದೊಡ್ಡಬಿದರೆ,ತಿರುಮಲಾಪುರ,ಯಳನಡು,ಕೆಂಕೆರೆ, ಗಾಣಧಾಳು, ದಸೂಡಿ, ದಬ್ಬಗುಂಟೆ, ಬರಕನಾಹಾಲ್,ಕೋರಗೆರೆ,ಸೀಗೆಬಾಗಿ ಮುಂತಾದ ಭಾಗದಲ್ಲಿ ಬಂಪರ್ ಬೆಳೆಯಾಗಿದೆ. ಕೃಷಿ ಇಲಾಖೆ ಮೂಲದ ಪ್ರಕಾರ ೮೫೦೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಬಂದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ