ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಯೋಜನೆ ಕೈಗೊಂಡಿರುವುದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ಕೊಟ್ಟಿದ್ದ ಕರ್ನಾಟಕ ಬಂದ್‌ಗೆ ಹುಳಿಯಾರಿನಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಪಟ್ಟಣದಲ್ಲಿ ಬಸ್ ಸಂಚಾರವಿಲ್ಲದೆ, ಅಂಗಡಿ ಮುಂಗಟ್ಟು ಮುಚ್ಚಿದ್ದವು.
ಹುಳಿಯಾರಿನ ಕನ್ನಡಪರ ಸಂಘಟನೆಯವರು, ರೈತಸಂಘದವರು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿ ಕಂದಾಯ ಇಲಾಖೆ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. |
ಬಂದ್ ಹಿನ್ನಲೆಯಲ್ಲಿ ಅಂಚೆಕಚೇರಿ,ನಾಡಕಛೇರಿ ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಿದ್ದು ಬಿಟ್ಟರೆ, ಇನ್ನುಳಿದ ಖಾಸಗಿ ಕಛೇರಿಗಳು, ಬ್ಯಾಂಕ್, ಸಹಕಾರ ಸಂಘದವರು ಹಾಗೂ ಅಂಗಡಿಯವರು ತಮ್ಮ ಅಂಗಡಿಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದರು. ಕೆಲ ಟೀ ಅಂಗಡಿಗಳು,ಬೇಕರಿಗಳು ಮಾತ್ರ ತೆರೆದಿದ್ದು, ಪ್ರತಿ ನಿತ್ಯ ಜನರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ, ಹುಳಿಯಾರಮ್ಮ ದೇವಾಲಯ ರಸ್ತೆ, ಕರವೇ ವೃತ್ತ, ರಾಮ್ ಗೋಪಾಲ್ ಸರ್ಕಲ್, ಎಪಿಎಂಸಿಯಲ್ಲಿ ಸಾರ್ವಜನಿಕರ ಸಂಚಾರ ವಿರಳವಾಗಿದ್ದು ಬಿಕೋ ಎನ್ನುತ್ತಿತ್ತು. ಸಂಜೆಯ ನಂತರ ಅಂಗಡಿದಾರರು ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿಕೊಂಡರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಪೋಲಿಸ್ ನಿಯೋಜಿಸಿದ್ದು ವೃತ್ತ ನಿರೀಕ್ಷಕ ಜಯಕುಮಾರ್ ಹಾಗೂ ಪಿಎಸೈ ಪ್ರವೀಣ್ ಕುಮಾರ್ ಪಟ್ಟಣದಲ್ಲಿ ಸಂಚಾರ ನಡೆಸಿದ್ದರು.
ಹುಳಿಯಾರಿನ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಅಮವಾಸ್ಯೆ ಅಂಗವಾಗಿ ಆಂಜನೇಯಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಿರುವುದು. |
ಹೋಬಳಿಯ ರೈತಸಂಘ,ಹಸಿರುಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸಂಘ,ಕನ್ನಡ ಸೇನೆ,ಕಾಮನಬಿಲ್ಲು ಪೌಂಡೇಶನ್, ಟಿಪ್ಪು ಸುಲ್ತಾನ್ ಸಂಘ, ಮುಸ್ಲಿಂಯುವಕ ಸಂಘ ಸೇರಿದಂತೆ ಇತರ ಕನ್ನಡಪರ ಸಂಘಟನೆಯವರು ಸೇರಿ ಪಟ್ಟಣ ಪರಿವೀಕ್ಷಣಾ ಮಂದಿರದಿಂದ ಬೈಕ್ ರ್ಯಾಲಿ ನಡೆಸಿದರು. ಬೈಕ್ ನಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ತಮಿಳುನಾಡು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ನಂತರ ನಾಡಕಚೇರಿಯಲ್ಲಿಗೆ ಆಗಮಿಸಿ ಗ್ರಾಮಲೆಖ್ಖಿಗ ಶ್ರೀನಿವಾಸ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ತಮಿಳುನಾಡು ಸರ್ಕಾರ ಹಿಂದಿನಿಂದಲೂ ಕಾವೇರಿ ವಿವಾದವನ್ನು ನಡೆಸಿಕೊಂಡು ಬರುತ್ತಿದೆ. ಇದೀಗ ರೈತರಿಗೆ ಹಾಗೂ ಬೆಂಗಳೂರು, ಮೈಸೂರು,ರಾಮನಗರ ಸೇರಿದಂತೆ ಇತರ ಜಿಲ್ಲೆಗಳಿಗೆ ಅನುಕೂಲವಾಗಲೆಂದು ಕಾವೇರಿ ನದಿಯಿಂದ ಹೆಚ್ಚುವರಿಯಾಗಿ ಮೇಕೆದಾಟು ಮೂಲಕ ತಮಿಳುನಾಡಿಗೆ ಹರಿದು ಹೋಗುವ ನೀರಿಗೆ ಅಣೆಕಟ್ಟೆ ಕಟ್ಟಲು ಮುಂದಾಗಿರುವುದಕ್ಕೆ ವಿರೋಧವೊಡ್ಡುತ್ತಿರುವುದು ಸರಿಯಲ್ಲ ಎಂದರು. ತಮಿಳುನಾಡು ಸರ್ಕಾರದ ಯಾವುದೇ ವಿರೋಧಿ ಧೋರಣೆಗಳಿಗೆ ನಮ್ಮ ಸರ್ಕಾರ ಕಿವಿಗೊಡದೆ ಮೇಕೆದಾಟು ಅಣೆಕಟ್ಟನ್ನು ಕಟ್ಟುವ ಮೂಲಕ ಲಕ್ಷಾಂತರ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ರೈತಸಂಘದ ತಮ್ಮಡಿಹಳ್ಳಿ ಮಲ್ಲಿಕಣ್ಣ,ಕೆಂಕೆರೆ ಮಲ್ಲೇಶ್, ಶಿವಣ್ಣ,ಪಾತ್ರೆಸತೀಶ್,ಕರವೇ ಸಿದ್ದೇಶ್,ಕೋಳಿಶ್ರೀನಿವಾಸ್,ಚಂಬಣ್ಣ, ಜಯಕರ್ನಾಟಕ ಸಂಘದ ಮೋಹನ್ ಕುಮಾರ್ ರೈ,ಚಂದ್ರು, ಕಾಮನಬಿಲ್ಲು ಪೌಂಡೇಶನ್ ನ ಕೇಶವ, ಮುಸ್ಲಿಂ ಯುವಕ ಸಂಘದ ಇಮ್ರಾಜ್,ಟಿಪ್ಪು ಸಂಘದ ಅಪ್ಸರ್ ಸೇರಿದಂತೆ ಏಜೆಂಟ್ ಕುಮಾರ್,ಪ್ರಸನ್ನ ಮುಂತಾದವರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ