ಲೋಕ ಕಲ್ಯಾಣಾರ್ಥವಾಗಿ ಶೂರರಾಜ ಪೌತ್ರನಾದ ವಸುದೇವನ ಪುತ್ರನಾದ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭಾನಾದ, ಭೂವೈಕುಂಠಾಧಿಪತಿ ಶ್ರೀಶ್ರೀನಿವಾಸ ಶರ್ಮ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ತೋತ್ಪನ್ನಳಾದ ಶ್ರೀಪದ್ಮಾವತಿಯ ಕಲ್ಯಾಣೊತ್ಸವ ಗೊಧೋಳಿ ಲಗ್ನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹುಳಿಯಾರಿನ ಎಂಪಿಎಸ್ ಶಾಲಾವರಣ ಭವ್ಯವೇದಿಕೆಯಲ್ಲಿ ನಡೆದ ಶ್ರೀಶ್ರೀನಿವಾಸ-ಪದ್ಮಾವತಿಯ ಕಲ್ಯಾಣೋತ್ಸವ. |
ಪಟ್ಟಣದ ಎಂಪಿಎಸ್ ಶಾಲಾವರಣದಲ್ಲಿ ಶನಿವಾರ ಸಂಜೆ ನಡೆದ ಕಲ್ಯಾಣೊತ್ಸವ ಕಾರ್ಯಕ್ರಮವು ಶ್ರೀಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ಕಲ್ಯಾಣ ಮಹೋತ್ಸವ ಸಮಿತಿ, ತಿರುಪತಿ -ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಪಟ್ಟಣದ ಸಮಸ್ತ ಭಜನಾ ಮಂಡಳಿ ಸಾರ್ವಜನಿಕರ ಸಹಯೋಗದಲ್ಲಿ ಕಲ್ಯಾಣೋತ್ಸವ ಅಯೋಜಿಸಲಾಗಿತ್ತು. ಇದಕ್ಕೆಂದೆ ಟಿಟಿಡಿ ತಿರುಪತಿಯಿಂದ ಶ್ರೀಶ್ರೀನಿವಾಸ ವಿಗ್ರಹವನ್ನು ಕರೆತರಲಾಗಿತ್ತು.ತಿರುಮಲ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಕಲ್ಯಾಣೋತ್ಸವ ನಡೆಯಿತು.
ಹುಳಿಯಾರಿನಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮುಖ್ಯಪ್ರಾಣ ಭಜನಾ ಮಂಡಳಿಯವರು ಗೋವಿಂದ ನಾಮ ಸ್ಮರಣೆ ಮಾಡಿದರು. |
ಕಲ್ಯಾಣೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ವಾಸವಿ ದೇವಾಲಯದಲ್ಲಿ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸಿ ನಂತರ ಅಲಂಕೃತ ಶ್ರೀನಿವಾಸ ವಿಗ್ರಹದ ರಾಜಬೀದಿ ಉತ್ಸವ ನಡೆದು, ಎಂಪಿಎಸ್ ಶಾಲಾವರಣಕ್ಕೆ ಸಂಜೆ ತರಲಾಯಿತು. ಕಲ್ಯಾಣೋತ್ಸವಕ್ಕೆಂದೆ ಭವ್ಯವಾದ ಮಂಟಪ ಸಿದ್ದಗೊಳಿಸಲಾಗಿತ್ತು. ಮುಖ್ಯಪ್ರಾಣ ಭಜನಾ ಮಂಡಳಿ ಸದಸ್ಯರು ಗೋವಿಂದ ಕುರಿತು ಹಾಡನ್ನು ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿಗಳಾದ ಶ್ರೀಆನಂದತೀರ್ಥಾಚಾರ್ಯ ಮತ್ತವರ ತಂಡದವರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ಸಂಕಲ್ಪ ಪುಣ್ಯಾಹ,ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು.ಶುಭಗಳಿಗೆಯಲ್ಲಿ ಸಹಸ್ರಾರು ಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆಎಳೆಯಲಾಯಿತು.
ಈ ವೇಳೆ ಶಾಸಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹುಳಿಯಾರು, ತುರುವೇಕೆರೆ,ನೆಲಮಂಗಲ,ಚನ್ನಗಿರಿ, ಚಿ.ನಾ.ಹಳ್ಳಿ,ಚನ್ನರಾಯಪಟ್ಟಣ ಮುಂತಾದೆಡೆಯಿಂದ ಆಗಮಿಸಿದ ಭಜನಾ ಮಂಡಳಿ ಸದಸ್ಯರುಗಳು ಹಾಗೂ ಸಹಸ್ರಾರು ಭಕ್ತರು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು. ಭಕ್ತಾಧಿಗಳಿಗಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ