ಹುಳಿಯಾರು ಹೋಬಳಿ ದಸೂಡಿ ಗ್ರಾಮಪಂಚಾಯ್ತಿ ಮುಂದೆ ಕಾರ್ಯದರ್ಶಿ ವೈಖರಿ ಖಂಡಿಸಿ ಹಾಗೂ ವಿವಿಧ ಯೋಜನೆಗಳ ಕಾಮಗಾರಿಗಳ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಕಳೆದ ಸೋಮವಾರದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಶುಕ್ರವಾರದಂದು ಮುಕ್ತಾಯವಾಯಿತು.
ಹುಳಿಯಾರು ಹೋಬಳಿ ದಸೂಡಿಯಲ್ಲಿನಧರಣಿ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಧರಣಿ ನಿರತರನ್ನು ಸಮಾಧಾನ ಪಡಿಸಿದರು. |
ಗ್ರಾ.ಪಂ.ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಧರಣಿ ನಡೆದಿದ್ದು, ಸಮಸ್ಯೆಗೆ ಸ್ಪಂದಿಸಿದ ಇಓ ಸ್ಥಳಕ್ಕೆ ಆಗಮಿಸಿ ಹೆಚ್ಚುವರಿಯಾಗಿ ಬೇರೊಬ್ಬ ಪಿಡಿಓ ಅವರನ್ನು ನೇಮಿಸಿದ್ದರೂ ಸಹ ತೃಪ್ತರಾಗದ ಧರಣಿನಿರತರು ತಮ್ಮ ಧರಣಿಯನ್ನು ಮುಂದುವರಿಸಿದ್ದರು.ಪಿಡಿಓ ಅವರು ನಿತ್ಯ ಕಛೇರಿಗೆ ಬಂದು ಬಾಕಿ ಇದ್ದ ಕೆಲಸಗಳನ್ನು ಪೂರ್ತಿ ಮಾಡುತ್ತಿದ್ದರೂ ಸಹ ಅನೇಕ ಕೆಲಸಗಳು ಪೆಂಡಿಂಗ್ ಉಳಿಯುತ್ತಿದ್ದವು. ಇದನ್ನ ಗಮನಿಸಿದ ಧರಣಿನಿರತರು ಬಾಕಿ ಇರುವ ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮಾಡಿ ಮುಗಿಸುವವರೆಗೆ ತಮ್ಮ ಧರಣಿ ನಡೆಯುವುದಾಗಿ ಪಟ್ಟು ಹಿಡಿದಿದ್ದರು.
೫ ದಿನಗಳು ಕಳೆಯುತ್ತಾ ಬಂದರೂ ಕೆಲಸ ಪೂರೈಸದ ಅಧಿಕಾರಿಗಳ ವಿರುದ್ದ ಪ್ರತಿಭಟನೆಯನ್ನು ಮತಷ್ಟು ಉಗ್ರರೂಪಕ್ಕೆ ಕೊಂಡೊಯ್ಯುವುದಾಗಿ ಧರಣಿ ನಿರತರು ನಿರ್ಧಾರ ಮಾಡಿದ್ದನ್ನು ಅರಿತ ಇಓ ಅವರು ಪಂಚಾಯ್ತಿಯಲ್ಲಿ ಬಾಕಿ ಇರುವ ಎಲ್ಲಾ ಸಂಪೂರ್ಣ ಕೆಲಸಗಳನ್ನು ಇಂದೇ ಮಾಡಿ ಮುಗಿಸುವ ನಿಟ್ಟಿನಲ್ಲಿ ೮ ಜನ ಪಿಡಿಓ ಹಾಗೂ ೯ ಮಂದಿ ಕಾರ್ಯದರ್ಶಿ ಅವರುಗಳನ್ನು ದಸೂಡಿಗೆ ಕಳುಹಿಸಿಕೊಟ್ಟರು.
ಶುಕ್ರವಾರ ಗ್ರಾ.ಪಂ.ಗೆ ಬಂದ ಪಿಡಿಓ ಹಾಗೂ ಕಾರ್ಯದರ್ಶಿಗಳು ಕಾರ್ಯಪ್ರವೃತ್ತರಾಗಿ ತಮ್ಮಲ್ಲೇ ತಂಡಗಳನ್ನು ಮಾಡಿಕೊಂಡು ಇದುವರೆಗೂ ಆಗಿರುವ ಕಾಮಗಾರಿಗಳ ಪರಿಶೀಲನೆಯಲ್ಲಿ ನಿರತರಾದರು. ಕೆಲವರು ಪಂಚಾಯ್ತಿಯಲ್ಲಿ ಕಡತಗಳನ್ನು ಪರಿಶೀಲಿಸಿ ಈ ಹಿಂದೆ ಮಂಜೂರಾಗಿರುವ ಕಾಮಗಾರಿಗಳು ಅರ್ಹಫಲಾನುಭವಿಗೆ ಆಗಿವೆ ಇಲ್ಲವೆ ಎಂಬುದನ್ನು ಪತ್ತೆ ಮಾಡುತ್ತಿದ್ದರು. ಒಟ್ಟಾರೆ ಧರಣಿ ನಿರತರ ಕೂಗಿನಿಂದಾಗಿ ದೌಡಾಯಿಸಿದ ಅಧಿಕಾರಿಗಳ ದಂಡು ಪಂಚಾಯ್ತಿಯಲ್ಲಿ ಬಾಕಿ ಇದ್ದ ಅನೇಕ ಕಾರ್ಯಗಳನ್ನು ಒಂದೇ ದಿನದಲ್ಲಿ ಬಹುಪಾಲು ಮುಗಿಸಿದ್ದು, ಪ್ರತಿಭಟನಾಕಾರರ ಸಮಾಧಾನಕ್ಕೆ ಕಾರಣಾವಾಯಿತು. ತಮ್ಮ ಬೇಡಿಕೆಗಳು ಈಡೇರಿದ ಹಿನ್ನಲೆಯಲ್ಲಿ ತಮ್ಮ ಧರಣಿಯನ್ನು ಹಿಂಪಡೆದು ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಎಚ್ಚರಿಸಿದರು. ದಸೂಡಿ ಗ್ರಾಮ ಪಂಚಾಯ್ತಿಗೆ ಉತ್ತಮ ಹಾಗೂ ದಕ್ಷ ಅಧಿಕಾರಿಯನ್ನು ಕಾಯಂ ಆಗಿ ನಿಯೋಜಿಸುವಂತೆ ಮನವಿ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ