ವೃದ್ದೆಯೊಬ್ಬಳಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿಯನ್ನು ಹಿಡಿಯಲೆಂದು ಬೆನ್ನಟ್ಟಿ ಹೋದ ವ್ಯಕ್ತಿಯು ಸಾವಿಗೀಡಾಗಿದ್ದು,ಆತನನ್ನು ಲಾರಿಯವರೇ ಕೊಂದು ಬಿಸಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆ ಶನಿವಾರ ರಾತ್ರಿ ಬೈಲಪ್ಪನ ಮಠ ಹಾಗೂ ದೊಡ್ಡಬಿದರೆಯಲ್ಲಿ ಘಟಿಸಿದೆ.
ಸಾವಿಗೀಡಾದ ವ್ಯಕ್ತಿಯನ್ನು ಹೊಸಕೆರೆಯ ರವಿರಾಜ್ (೨೩) ಎನ್ನಲಾಗಿದ್ದು, ಈತ ಚಿ.ನಾ.ಹಳ್ಳಿ ಎಪಿಎಂಸಿಯಲ್ಲಿ ದಿನಸಿ ವ್ಯವಹಾರ ನಡೆಸುತ್ತಿದ್ದ.ರಾತ್ರಿ ೯.೩೦ರ ಸಮಯದಲ್ಲಿ ಚಿಕ್ಕನಾಯಕನಹಳ್ಳಿಯಿಂದ ವಾಪಸ್ಸ್ ಊರಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಈತನ ಮುಖ,ತಲೆಭಾಗಕ್ಕೆ ಬಲವಾಗಿ ಹೊಡೆದು ಸಾಯಿಸಿ ರಸ್ತೆ ಬದಿಗೆ ಎಸೆದು ಲಾರಿಯವರು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಮೃತನ ಕಡೆ ಸಂಬಂಧಿಕರು ಎಂದು ದೂರು ನೀಡಿದ್ದಾರೆ.
ಘಟನೆ ವಿವರ:ಚಿ.ನಾ.ಹಳ್ಳಿ-ಹುಳಿಯಾರು ಮಾರ್ಗವಾಗಿ ಮುಂಬೈಗೆ ತೆರಳುತ್ತಿದ್ದ ಲಾರಿಯೊಂದು(ಸಿಬಿ೪೬ ಕೆ ೭೭೯) ಬೈಲಪ್ಪಮಠದ ಬಳಿ ವೃದ್ದೆ ಸಣ್ಣಜ್ಜಿ ಎಂಬಾಕೆಗೆ ಗುದ್ದಿ , ಲಾರಿಯನ್ನು ನಿಲ್ಲಿಸದೆ ಚಾಲಕ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅದೇ ಸಮಯದಲ್ಲಿ ಸ್ಥಳದಲ್ಲಿದ್ದ ರವಿರಾಜ್ ಹಾಗೂ ಮಂಜು ಎಂಬಿಬ್ಬರು ದ್ವಿಚಕ್ರವಾಹನದಲ್ಲಿ ಲಾರಿಯನ್ನು ಬೆನ್ನಟಿದ್ದಾರೆ.ಹಂಪ್ಸ್ ಬಳಿ ನಿಧಾನವಾದ ಲಾರಿಯನ್ನು ಚಾಲಕನ ಬದಿಯಿಂದ ಏರಿದ ರವಿರಾಜ್ ಚಾಲಕನೊಂದಿಗೆ ತಗಾದೆ ತೆಗೆದಿದ್ದಾನೆ. ಲಾರಿಯನ್ನು ನಿಲ್ಲಿಸದ ಚಾಲಕ ರವಿಯೊಂದಿಗೆ ವಾಹನಚಲಾಯಿಸಿದ್ದು ಆ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಆತನನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ.
ಇವಿಷ್ಟು ಕೇವಲ ಹದಿನೈದಿಪ್ಪತ್ತು ನಿಮಿಷದಲ್ಲಿ ನಡೆದಿದ್ದು ಊರಿನವರೆಲ್ಲಾ ಬರುವಷ್ಟರಲ್ಲಿ ಲಾರಿಯು ದೊಡ್ಡಬಿದರೆ ಬಳಿ ಗುಂಡಿಯಲ್ಲಿ ಇಳಿದು ನಿಂತಿದ್ದು, ಚಾಲಕ ಹಾಗೂ ಕ್ಲಿನರ್ ನಾಪತ್ತೆಯಾಗಿ ರವಿಯ ಮೃತ ದೇಹಮಾತ್ರ ಕಂಡುಬಂದಿದೆ.
ವೃದ್ದೆ ಸಣ್ಣಜ್ಜಿಯನ್ನು ನಿಮಾನ್ಸ್ ಗೆ ದಾಖಲಿಸಲಾಗಿದೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಪಿ.ರಮಣಗುಪ್ತ ಅವರ ಮಾರ್ಗದರ್ಶನದಂತೆ ಸಿಪಿಐ ಜಯಕುಮಾರ್,ಪಿಎಸೈ ಬಿ.ಪ್ರವೀಣ್ ಕುಮಾರ್ ಅವರುಗಳ ನೇತೃತ್ವದಲ್ಲಿ ತನಿಖೆ ನಡೆದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ