ಮತದಾನದ ವೇಳೆ ಮನೆ ಬಾಗಿಲಿಗೆ ಬರುವ ರಾಜಕಾರಣಿಗಳು ಗೆದ್ದ ಬಳಿಕ ಇತ್ತ ಸುಳಿಯುವುದಿಲ್ಲ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳ ಮಾತಿಗೆ ಎಂದಿಗೂ ಮರುಳಾಗಬೇಡಿ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರೈತರಿಗೆ ಕರೆ ನೀಡಿದರು.
ಹುಳಿಯಾರು ಹೋಬಳಿ ದಸೂಡಿಯಲ್ಲಿ ನೂತನ ರೈತ ಸಂಘದ ಘಟಕವನ್ನು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. |
ಹುಳಿಯಾರು ಹೋಬಳಿ ದಸೂಡಿಯಲ್ಲಿ ನೂತನ ರೈತ ಸಂಘದ ಉದ್ಘಾಟನೆ ನೆರವೇರಿಸಿದ ಅವರು ಮಾತನಡಿದರು.
ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಯಾವುದೇ ಪಕ್ಷಗಳು ರೈತರ ಹಿತ ಕಾಯುವುದಾಗಿ ತಿಳಿಸುತ್ತವೇ ಹೊರತು, ರೈತರಿಗೆ ನೆರವಾಗುವಂತೆ ಉತ್ತಮ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ವಿಫಲವಾಗಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ಹಗರಣಗಳನ್ನು ಮಾಡಿಕೊಂಡು ಅದರಲ್ಲೇ ಅಡಳಿತ ನಡೆಸುತ್ತಿದ್ದಾರೆ. ಅಲ್ಲದೆ ಇದೀಗ ಪಂಪ್ ಸೆಟ್ ಗಳಿಗೆ ಮೀಟರ್ ಹಾಕುವ ಮೂಲಕ ರೈತರ ಮೇಲೆ ಹೊರೆಹಾಕುತ್ತಿದ್ದಾರೆ. ಅಲ್ಲದೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.
ದೇಶದಲ್ಲಿ ಶೇ.65 ರಷ್ಟು ರೈತರಿದ್ದು ಶೇ.70 ರಷ್ಟು ಕಂದಾಯ ಕಟ್ಟುತ್ತಿದ್ದಾರೆ. ಆದರೆ ಬಜೆಟ್‌ನಲ್ಲಿ ಮಾತ್ರ ರೈತರ ಉದ್ಧಾರಕ್ಕಾಗಿ ಶೇ.5 ರಷ್ಟು ಹಣ ಮೀಸಲಿಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ವೇತನ ಆಯೋಗವಿದೆ. ಕಾಲಕಾಲಕ್ಕೆ ತುಟ್ಟಿಭತ್ಯ ನೀಡುತ್ತಾರೆ. ಜನಪ್ರತಿನಿಧಿಗಳ ಸಂಬಳವನ್ನೂ ಬೇಕಾದಷ್ಟು, ಬೇಕಾದಾಗ ಹೆಚ್ಚಿಸಿಕೊಳ್ಳುತ್ತಾರೆ. ರೈತ ಮಾತ್ರ ಮೂರುಹೊತ್ತು ಊಟಕ್ಕಾಗುವಷ್ಟು ಬೆಲೆ ಸಿಗುವುದು ದುಸ್ತರವಾಗಿದೆ ಎಂದು ವಿಷಾದಿಸಿದರು.
ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಚಿಕ್ಕನಾಯಕನಹಳ್ಳಿ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್, ಕೊಪ್ಪಳ ಹನುಮಂತಪ್ಪ, ಆರ್.ರಂಗಸ್ವಾಮಿ, ದಬ್ಬಗುಂಟೆ ರವಿಕುಮಾರ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ