ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನು ಸೋತಿದ್ದರೂ ಸಹ ಕ್ಷೇತ್ರದ ಕಾರ್ಯಕರ್ತರ ಬೆಂಬಲ ತನ್ನೊಂದಿಗಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಬಲವರ್ಧನೆಗೆ ಶ್ರಮಿಸುವೆ. ಅದರ ಫಲ ಮುಂದಿನ ಚುನಾವಣೆಯಲ್ಲಿ ವ್ಯಕ್ತವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ತಿಳಿಸಿದರು.
ಹುಳಿಯಾರಿನ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಂದಿಗನಡುವಿನ ಸಣ್ಣಕರಿಯಪ್ಪ ಹಾಗೂ ರುದ್ರೇಶ್ ಅವರನ್ನು ಮುಖಂಡ ಸಾಸಲು ಸತೀಶ್ ಕಾಂಗ್ರೆಸ್ ನ ಶಾಲು ಹಾಕಿ ಸೇರ್ಪಡೆ ಮಾಡಿಕೊಂಡರು. |
ಹುಳಿಯಾರಿನ ಕಾಂಗ್ರೆಸ್ ಮುಖಂಡ ವೈ.ಸಿ.ಸಿದ್ರಾಮಣ್ಣ ಅವರ ಮನೆಯ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಸೋತ ಕೆಲನಾಯಕರು ತಮಗೂ ಕ್ಷೇತ್ರಕ್ಕೂ ಸಂಬಂಧವಿಲ್ಲವೇನೋ ಎಂಬಂತೆ ತಮ್ಮಪಾಡಿಗಿರುತ್ತಾರೆ.ಆದರೆ ನಾನು ಪಕ್ಷದ ಜೊತೆಗೆ ಕ್ಷೇತ್ರದ ಅಭಿವೃದ್ಧಿಯನ್ನೂ ಮುಖ್ಯವಾಗಿಟ್ಟುಕೊಂಡು ರಾಜಕೀಯಕ್ಕೆ ಬಂದಿರುವುದಾಗಿ ತಿಳಿಸಿದರು. ಸಂಸದರ ಕಾರ್ಯವೈಖರಿಯಿಂದಾಗಿ ಈ ಕ್ಷೇತ್ರದ ಹೆಚ್ಚಿನ ಮಂದಿ ಕಾಂಗ್ರೆಸ್ ನತ್ತ ಮುಖಮಾಡಿದ್ದಾರಲ್ಲದೆ ಬೇರೆ ಪಕ್ಷದ ಮುಖಂಡರು ಸಹ ತಮ್ಮ ಪಕ್ಷಕ್ಕೆ ಬರುವ ತವಕದಲ್ಲಿದ್ದಾರೆ ಎಂದರು.
ತಾವು ಈ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಬೇಕಾದ ಸವಲತ್ತುಗಳನ್ನು ಮಂಜೂರು ಮಾಡಿಸುವ ನಿಟ್ಟಿನಲ್ಲಿ ಈಗಾಗಲೇ ಸಂಸದರಿಗೆ ಹಾಗೂ ಹಾಲಿ ಸಚಿವರಿಗೂ ತಿಳಿಸಿ ಚರ್ಚಿಸಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅನೇಕ ಜನಪರ ಯೋಜನೆಗಳನ್ನು ಮತದಾರರಿಗೆ ನೀಡಿದ್ದು ಇಂದು ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ ಹಾಗೂ ಕಾಂಗ್ರೆಸ್ ನ ಕೈ ಬಲ ಪಡಿಸಲು ಮುಂದಾಗಿದ್ದಾರೆ ಎಂದರು.
ಕಾಂಗ್ರೆಸ್ ಗೆ ಸೇರ್ಪಡೆಯಾದ ಬಿಜೆಪಿಯ ಹಂದಿಗನಡುವಿನ ಸಣ್ಣಕರಿಯಪ್ಪ ಹಾಗೂ ಜೆಡಿಎಸ್ ನ ದಬ್ಬಗುಂಟೆ ರುದ್ರೇಶ್ ಮಾತನಾಡಿ ತಾವು ಮೊದಲು ಕಾಂಗ್ರೆಸ್ ನ ಕಾರ್ಯಕರ್ತರಾಗಿ ದುಡಿದವರಾಗಿದ್ದು, ಕ್ಷೇತ್ರ ವಿಂಗಡಣೆಯಿಂದಾಗಿ ಈ ಭಾಗದಲ್ಲಿ ಕಾಂಗ್ರೆಸ್ ಬಲ ಕುಗ್ಗುವಂತೆ ಮಾಡಿತ್ತು. ಇದೀಗ ಯುವನಾಯಕರು ಕಾಂಗ್ರೆಸ್ ನಲ್ಲಿದ್ದು ,ಅವರ ಕಾರ್ಯವೈಖರಿಗೆ ಮೆಚ್ಚಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗಿರುವುದಾಗಿ ತಿಳಿಸಿದರು. ಈ ವೇಳೆ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಹೊಸಹಳ್ಳಿ ಹೆಚ್.ಅಶೋಕ್, ಹುಳಿಯಾರು ಎಪಿಎಂಸಿಯ ಸದಸ್ಯರಾದ ವೈ.ಸಿ.ಸಿದ್ರಾಮಯ್ಯ, ಕೆಂಕೆರೆ ಶಿವಕುಮಾರ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ