ಹುಳಿಯಾರು ಹೋಬಳಿ ನಂದಿಹಳ್ಳಿಯ ಬಸವೇಶ್ವರ ಸ್ವಾಮಿ ದೇವಾಲಯದ ಮುಂದೆ ಗುರುವಾರದಂದು ಗೊರಪ್ಪಗಳ ದೋಣಿ ತುಂಬುವ ಸೇವೆ ಅಪಾರ ಸಂಖ್ಯೆ ಭಕ್ತಾಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಹುಳಿಯಾರು ಹೋಬಳಿ ನಂದಿಹಳ್ಳಿಯ ಬಸವೇಶ್ವರಸ್ವಾಮಿ ದೇವಾಲಯದ ಮುಂದೆ ನಡೆದ ಗೊರಪ್ಪಗಳ ದೋಣಿ ಸೇವೆ |
ಮುಖಂಡ ಮಲ್ಲೇಶ್ ಹಾಗೂ ಗ್ರಾಮಸ್ಥರ ಸೇವಾರ್ಥದಲ್ಲಿ ಈ ಕಾರ್ಯ ಹಮ್ಮಿಕೊಂಡಿದ್ದು, ಗ್ರಾಮದ ಬಸವೇಶ್ವರಸ್ವಾಮಿ, ಆಂಜನೇಯಸ್ವಾಮಿ ಹಾಗೂ ಮೈಲಾರಪುರದ ಚೌಡಮ್ಮದೇವಿಯನ್ನು ಕರೆದೊಯಲಾಗಿತ್ತು. ದೇವರುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮೈಲಾರ ದೇವರ ಪ್ರತಿರೂಪವಾಗಿರುವ ಗೊರಪ್ಪಗಳಿಗೆ ಅರಿಶಿನದ ತಿಲಕವಿಟ್ಟು ಪೂಜಿಸಿದರು. ನಂತರ ದೇವಾಲಯದ ಮುಂದೆ ಮಡಿ ಕಂಬಳಿ ಹಾಸಿ ಅದರ ಮೇಲೆ ಬಾಳೆ ಎಲೆ ಹಾಕಿ ಬಾಳೆಹಣ್ಣಿನ ಎಡೆ ಹಾಕಲಾಯಿತು. ಗೋರಪ್ಪಗಳ ದೋಣಿಗಳಿಗೂ ಸಹ ಬಾಳೆಹಣ್ಣಿನ ಎಡೆಯನ್ನು ತುಂಬಿ ಪೂಜಿಸಲಾಯಿತು. ಪೂಜೆಯ ಬಳಿಕ ಮೈಲಾರದೇವರ ಆವಾಹನೆಯಾದ ಗೊರಪ್ಪಗಳು ಎಡೆಹಾಕಿದ್ದ ಸ್ಥಳ ಹಾಗೂ ದೇವಾಲಯದ ಸುತ್ತ ಆರ್ಭಟಿಸುತ್ತಾ ಪ್ರದಕ್ಷಿಣೆ ಹಾಕಿ ಬಂದು ದೋಣಿಗೆ ತುಂಬಿದ್ದ ಎಡೆಯನ್ನು ಅರ್ಪಿಸಿಕೊಂಡರು. ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಅಲ್ಲಿ ಹಾಕಿದ್ದ ಎಡೆಯನ್ನು ಪ್ರಸಾದವಾಗಿ ನೀಡಲಾಯಿತು.
ನೆರದಿದ್ದ ಜನರು ಗೊರಪ್ಪಗಳ ಅರ್ಭಟವನ್ನು ಕಂಡು ಆಶ್ಚರ್ಯ ಪುಳಕಿತರಾಗಿ ಕುತೂಹಲದಿಂದ ದೋಣಿ ಸೇವೆ ವೀಕ್ಷಿಸಿದರು. ಚೌಡಮ್ಮನಿಗೆ ಹಣ್ಣುಕಾಯಿ ಮಾಡಿಸಿ ಮಡಲಕ್ಕಿ ಹಾಕುವ ಮೂಲಕ ಆಶೀರ್ವಾದ ಪಡೆದು ಮನೆಗಳಿಗೆ ಹಿಂತಿರುಗಿದರು. ಈ ವೇಳೆ ದೇವಾಲಯ ಸಮಿತಿಯವರು, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ