ಗ್ರಾ.ಪಂ. ಕಾರ್ಯದರ್ಶಿಯ ಕಾರ್ಯವೈಖರಿ ಹಾಗೂ ಭ್ರಷ್ಟಾಚಾರ ವಿರೋಧಿಸಿ ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
ಹುಳಿಯಾರು ಹೋಬಳಿ ದಸೂಡಿ ಗ್ರಾ.ಪಂ.ಕಛೇರಿಮುಂದೆ ಕಾರ್ಯದರ್ಶಿ ವಿರುದ್ದ ಪ್ರತಿಭಟನೆ ನಡೆಸಿದ ಸಾರ್ವಜನಿಕರು. |
ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಗ್ರಾ.ಪಂ.ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಗ್ರಾ.ಪಂ.ಕಚೇರಿ ಮುಂದೆ ಧರಣಿ ನಡೆಸಿದರು.ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ಮಿತಿಮೀರಿದ್ದು ಇದಕ್ಕೆ ಕಾರ್ಯದರ್ಶಿಯೇ ನೇರಹೊಣೆಗಾರರಾಗಿದ್ದಾರೆ. ಹಂಗಾಮಿ ಗ್ರಾ.ಪಂ.ನೌಕರರನ್ನು ಖಾಯಂಗೊಳಿಸುವುದಾಗಿ ನೌಕರರಿಂದ ೫ ಸಾವಿರದಿಂದ ೫೦ ಸಾವಿರದವರೆಗೆ ಲಂಚದ ಬೇಡಿಕೆಯಿಟ್ಟಿದ್ದಾರೆ, ಎನ್.ಆರ್.ಇ.ಜಿ ಯಿಂದ ಶೌಚಾಲಯಗಳಿಗೆ ಹಣ ಬಿಡುಗಡೆ ಮಾಡಲು ಲಂಚ ಕೇಳುತ್ತಿದ್ದಾರೆ. ಈ -ಸ್ವತ್ತುವಿನಲ್ಲಿ ದಾಖಲೆ ನೀಡಲು ೩ ಸಾವಿರದವಗೆಗೂ ಬೇಡಿಕೆಯಿಟ್ಟಿರುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಮಸ್ಯೆ ಬಗ್ಗೆ ಸಿಇಓ ಅವರನ್ನು ಭೇಟಿ ಮಾಡಿ ಕಾರ್ಯದರ್ಶಿಯ ವಿರುದ್ದ ದೂರು ಸಲ್ಲಿಸಲಾಗಿದ್ದರೂ ಗಮನಕೊಡದ ಇಓ ಬಗ್ಗೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಪಟ್ಟುಹಿಡಿದರು. ಸ್ಥಳಕ್ಕಾಗಮಿಸಿದ ಇಓ ಕೃಷ್ಣಮೂರ್ತಿಗೆ ಪ್ರತಿಭಟನೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದಿದ್ದರಿಂದ ಬೇರೊಂದು ಪಂಚಾಯ್ತಿಯ ಪಿಡಿಓ ಹಾಗೂ ಇತರ ಸಿಬ್ಬಂದಿಯನ್ನು ಜೊತೆಯಲ್ಲೇ ಕರೆತಂದು ಕಾರ್ಯದರ್ಶಿಯಿಂದ ಬಾಕಿಯಿದ್ದ ಕೆಲಸವನ್ನು ಮಾಡಿಸಲು ಮುಂದಾದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿರುದ್ದ ಸಾಕಷ್ಟು ದೂರು ಕೇಳಿಬಂತು. ಎಲ್ಲರ ಸಮಸ್ಯೆಯನ್ನು ಸಾವದಾನವಾಗಿ ಆಲಿಸಿದ ಇಓ ಬಾಕಿ ಇರುವ ಎಲ್ಲಾ ಕಡತಗಳನ್ನು ನಾಳೆಯೊಳಗಾಗಿ ವಿಲೆವಾರಿ ಮಾಡುವಂತೆಯೂ , ಬಾಕಿ ಇರುವ ಶೌಚಾಲಯಗಳ ಹಾಗೂ ಮನೆ ಗ್ರ್ಯಾಂಟ್ ಬಿಲನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಿಡಿಓಗೆ ತಾಕೀತು ಮಾಡಿದರು. ಈ ಹಿಂದೆ ಎನ್.ಆರ್.ಇ.ಜಿ ಯೋಜನೆಯಡಿ ಮಾಡಿರುವ ಕಾಮಗಾರಿಗಳ ತಪಾಸಣೆ ನಡೆಸಿ ಹೊಸದಾಗಿ ಎನ್.ಎಂ.ಆರ್ ತೆಗೆಯುವಂತೆಯೂ ಆದೇಶಿಸಿದರು.
ಇಷ್ಟೆಲ್ಲ ಆದರೂ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯದರ್ಶಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಾರೆ ಹೊರತು ಕ್ರಮತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸಂಜೆವರೆಗೂ ಕಾದು ಈಗ ಬಂದಿರುವ ಅಧಿಕಾರಿಗಳು ತಮ್ಮ ಸಮಸ್ಯೆ ಬಗೆಹರಿಸಿದಲ್ಲಿ ಮಾತ್ರವೇ ಪ್ರತಿಭಟನೆ ಹಿಂಪಡಿಯುವುದಾಗಿ ತಿಳಿಸಿದರು .
ಪ್ರತಿಭಟನೆಯಲ್ಲಿ ಮುಖಂಡರಾದ ಸುಂದರಮೂರ್ತಿ, ಜಯಣ್ಣ,ಕುಮಾರ್,ಗೋವಿಂದಪ್ಪ,ಕಾಂತರಾಜ್,ಆನಂದ್ ಸೇರಿದಂತೆ ಸ್ತ್ರೀಶಕ್ತಿಸಂಘ ,ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ