ವರದಿ:ಡಿ.ಆರ್.ನರೇಂದ್ರಬಾಬು
--------
ಹುಳಿಯಾರು : ಈ ಬಾರಿ ರಾಗಿ ಬಂಪರ್ ಬೆಳೆಬಂದಿದ್ದು ರೈತರಿಗೆ ಮಾತ್ರ ರಾಗಿಗೆ ಕನಿಷ್ಠ ಬೆಲೆಯೂ ದೊರೆಯದೆ ಬೆಂಬಲ ಬೆಲೆಗೆ ಎದುರು ನೋಡುವಂತೆ ಮಾಡಿದೆ. ಸರ್ಕಾರವೇನೋ ಬೆಂಬಲಬೆಲೆ ಘೋಷಣೆ ಮಾಡಿ ರಾಗಿಕೊಳ್ಳಲು ತಿಳಿಸಿದಾಗ್ಯೂ ರಾಗಿ ಖರೀದಿ ಕೇಂದ್ರ ತೆರಯುವಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಿನಾಮೇಷ ಎಣಿಸುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹುಳಿಯಾರು ಎಪಿಎಂಸಿಗೆ ಎಡೆತಾಕುತ್ತಿರುವ ರೈತರು. |
ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ವರ್ಷಒಂಬ್ಬತ್ತು ಕಾಲವೂ ಬೆಲೆಯಿಲ್ಲದೆ ಕೃಷಿಯ ಸಹವಾಸವೇ ಬೇಡವೆನ್ನುವ ರೈತರು ಹಾಗೂ ಪ್ರತಿಯೊಂದಕ್ಕೂ ಹೋರಾಟದ ಮೂಲಕವೇ ಸರ್ಕಾರವನ್ನು ಎಚ್ಚರಿಸುವ ರೈತಸಂಘದವರು ಇದೀಗ ಜಿಲ್ಲಾಧಿಕಾರಿ ವಿರುದ್ಧ ಗರಂ ಆಗಿದ್ದು ಗುರುವಾರದ ಒಳಗಾಗಿ ಪಟ್ಟಣದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯದೇ ಹೋದರೆ ಗುರುವಾರದಿಂದ ಕೇಂದ್ರ ತೆರಯುವ ತನಕ ಅಹೋರಾತ್ರಿ ಧರಣಿ ಜೊತೆಗೆ ಎಪಿಎಂಸಿ ಮುಂದೆ ರಸ್ತೆಯಲ್ಲಿ ರಾಗಿ ಸುರಿಯುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಲಿದ್ದಾರೆ.
ಡಿಸಿ ಅವರ ಆದೇಶದಂತೆ ಡಿಸೆಂಬರ್ ೧೫ ರಂದೇ ಪ್ರಾರಂಭವಾಗಬೇಕಿದ್ದ ರಾಗಿ ಖರೀದಿ ಕೇಂದ್ರ ಅಧಿಕಾರಿಗಳ ನಿರ್ಲಕ್ಷಕ್ಕೋ ಅಥವಾ ಮತ್ಯಾವೋದೋ ಕಾರಣದಿಂದಾಗಿ ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಪ್ರಾರಂಭವಾಗಿಲ್ಲ. ಎಪಿಎಂಸಿ ಕಛೇರಿಯಲ್ಲಿ ರಾಗಿ ಖರೀದಿ ಬಗ್ಗೆ ಒಂದು ಬ್ಯಾನರ್ ಹಾಕಿರುವುದನ್ನು ಬಿಟ್ಟರೆ ಇದಕ್ಕೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯ ಸುಳಿವಿಲ್ಲ ಇದರಿಂದ ಈ ಭಾಗದ ರೈತರಿಗೆ ಹೆಚ್ಚಿನ ತೊಂದರೆಯಾಗಿ ನಿತ್ಯ ರೈತರು ಅಲೆಯುವಂತಾಗಿ, ಕೇಂದ್ರದ ಬಾಗಿಲು ಯಾವಾಗ ತೆರೆಯುತ್ತದೆ ಎಂದು ಕಣ್ ಕಣ್ ಬಿಡುವಂತ ಸ್ಥಿತಿ ನಿರ್ಮಾಣವಾಗಿದೆ.
ರೈತರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ಉತ್ತಮ ಗುಣಮಟ್ಟದ ರಾಗಿಗೆ ಪ್ರತಿ ಕ್ವಿಂಟಾಲ್ ಗೆ ೧೫೫೦ ಹಾಗೂ ಪ್ರೋತ್ಸಾಹ ಧನ ೪೫೦ರೂ ನೀಡಿ ಒಟ್ಟು ಪ್ರತಿಕ್ವಿಂಟಾಲ್ ಗೆ ೨೦೦೦ರೂಗೆ ಕೊಳ್ಳಲು ಮುಂದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದವರು ರಾಗಿ ಖರೀದಿಸುವ ಜವಬ್ದಾರಿ ಹೊತ್ತಿದ್ದರು. ಆದರೆ ಈ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಧೋರಣೆಯಿಂದ ಇದುವರೆಗೂ ಕೇಂದ್ರಗಳು ಪ್ರಾರಂಭವಾಗಿಲ್ಲ. ಈಗಾಗಲೇ ಕಣಗೆಲಸ ನಡೆಯುತ್ತಿದ್ದು ರೈತರು ರಾಗಿ ಒಕ್ಕಣೆಯಲ್ಲಿ ತೊಡಗಿದ್ದಾರೆ. ಕಣದ ತುಂಬೆಲ್ಲಾ ರಾಗಿಯ ಭರಪೂರ ಸಂಗ್ರಹವೇ ಕಂಡುಬರುತ್ತಿದೆ.
ರಾಗಿ ಬೆಲೆ ಮಾತ್ರ ೧೨೦೦ರೂ ಅಸುಪಾಸಿನಲ್ಲಿದ್ದು ಹೆಚ್ಚಿನ ಬೆಳೆ ಬೆಳೆದರೂ ರೈತರಿಗೆ ಬೇಸಾಯ,ಕೂಲಿ ಖರ್ಚಿಗೆ ಸಮನಾಗುತ್ತಿದ್ದು ೨೦೦೦ದರದಂತೆ ಕೊಂಡಲ್ಲಿ ಅಲ್ಪಸ್ವಲ್ಪ ಹಣ ಉಳಿಯುತ್ತಿತ್ತು. ರೈತರು ಖರೀದಿ ಕೇಂದ್ರ ತೆರೆಯಲು ಕೇಳದಿದ್ದರೂ ಸಹ ಸರ್ಕಾರವೇ ಮುಂದಾಗಿ ತರಾತುರಿಯಲ್ಲಿ ಖರೀದಿ ಕೇಂದ್ರ ತೆರೆಯುವುದಾಗಿ ಘೋಷಿಸಿದ್ದೆ ಸಮಸ್ಯೆಗೆ ಕಾರಣವಾಗಿದೆ. ರಾಗಿಯನ್ನು ಖರೀದಿ ಕೇಂದ್ರಕ್ಕೆ ಮಾರಲು ಅಗತ್ಯ ದಾಖಲೆಗಳನ್ನು ಸಿದ್ದ ಮಾಡಿಕೊಂಡಿರುವ ರೈತರಿಗೆ ನಿತ್ಯ ಕಛೇರಿಯಲ್ಲಿಗೆ ಅಲೆಯುವುದೆ ಕೆಲಸಲಾಗಿದ್ದು, ರಾಗಿ ಖರೀದಿ ಕೇಂದ್ರದ ಬಾಗಿಲು ಯಾವಾಗ ತೆರೆಯುತ್ತದೋ, ಯಾವಾಗ ರಾಗಿ ಮಾರುವುದು ಎಂಬ ಚಿಂತೆ ಮೂಡುವಂತೆ ಮಾಡಿದೆ.
ಬಂಪರ್ ಬೆಳೆಯ ಜೊತೆಗೆ ಹಳೆಯ ಬೆಳೆಯೂ ಸೇರಿ ಹೆಚ್ಚಾಗಿರುವ ರಾಗಿಯನ್ನು ಮಾರಲು ಮುಂದಾಗಿದ್ದು ಬೆಂಬಲಬೆಲೆಗೆ ಹೋಲಿಸಿದಲ್ಲಿ ಕ್ವಿಂಟಾಲ್ ಗೆ ೬೦೦ ರಿಂದ ೮೦೦ರೂ ವರೆಗೆ ಲುಕ್ಸಾನಾಗುತ್ತಿದ್ದು, ವರ್ತಕರಿಗೆ ಮಾತ್ರ ಲಾಭಾದಾಯಕವಾಗಿದೆ. ಕೇಂದ್ರ ತೆರೆಯಲು ಹಿಂದೇಟಾಕುತ್ತಿರುವ ಬಗ್ಗೆ ರೈತರು ಒಗ್ಗಟ್ಟಾಗಿ ಪ್ರತಿಭಟನೆಗೆ ಮುಂದಾಗಿದ್ದು ಪ್ರತಿಭಟನೆ ತೀವ್ರಕಾವು ಪಡೆಯುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
----------
ರಾಗಿ ಖರೀದಿ ಕೇಂದ್ರಗಳನ್ನು ಶೀಘ್ರವೇ ತೆರೆಯುವಂತೆ ಪ್ರತಿ ತಾಲ್ಲೂಕುಗಳ ರೈತರು ಆಗ್ರಹಿಸುತ್ತಿರುವ ಬಗ್ಗೆ ನಿತ್ಯ ಪತ್ರಿಕೆಗಳಲ್ಲಿ ವರದಿ ಬರುತ್ತಿದ್ದರೂ ಸಹ ಅಧಿಕಾರಿಗಳು ಎಚ್ಚರಗೊಳ್ಳದಿರುವುದು ಜಿಲ್ಲಾಡಳಿತ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಾರ್ಯವೈಖರಿ ಎಷ್ಟು ಚುರುಕಾಗಿದೆ ಎಂಬುದು ತಿಳಿಯುತ್ತದೆ : ಕೆ.ಪಿ.ಮಲ್ಲೇಶ್ ರೈತ ಸಂಘದ ತಾಲ್ಲೂಕ್ ಅಧ್ಯಕ್ಷ
---------
ರಾಗಿಗೆ ೨೦೦೦ರೂಗೆ ಕೊಳ್ಳುವುದಾಗಿ ತಿಳಿಸಿದ್ದ ಸರ್ಕಾರ ಅದೆಕೋ ರಾಗಿ ಕೊಳ್ಳಲು ಮಾತ್ರ ಮಿನಾಮೇಷ ಎಣಿಸುತ್ತಿದೆ ಹಾಗಾಗಿ ೧೨೦೦ , ೧೪೦೦ರೂಗೆ ರಾಗಿ ಮಾರುವ ಸ್ಥಿತಿ ಬಂದಿದೆ. ಕೂಡಲೇ ಖರೀದಿ ಕೇಂದ್ರತೆಗೆದು ರಾಗಿಕೊಂಡರೆ ನಮಗೂ ನಾಕ್ ಕಾಸು ಸಿಗುತ್ತದೆ : ದುರ್ಗಪ್ಪ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ