ಹುಳಿಯಾರು : ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿನ ಅಂಗಡಿದಾರರಿಗೆ ಅಂಗಡಿ ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು ಒಂದೆಡೆಯಾದರೆ , ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಶ್ರೀಅನಂತಶಯನ ರಂಗನಾಥಸ್ವಾಮಿ ದೇವಾಲಯದ ಹತ್ತಿರದ ಅಂಗಡಿಗಳಿಗೂ ಸಹ ನೋಟೀಸ್ ನೀಡಿ ಫೆ.೧ರ ಒಳಗಾಗಿ ತೆರವುಗೊಳಿಸುವಂತೆ ತಿಳಿಸಿರುವುದು ಗೊಂದಲಕ್ಕೆಡೆ ಮಾಡಿದೆ.
ರಂಗನಾಥಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಅಂಗಡಿಗಳು. |
ಕಳೆದೆರಡು ಮೂರು ತಿಂಗಳಿನಿಂದ ಕೆರೆ ಒತ್ತುವರಿ ಸಂಬಂಧಿಸಿದಂತೆ ಮನೆಗಳು ಹಾಗೂ ಅಂಗಡಿಗಳ ಪಟ್ಟಿ ಮಾಡಿ ತೆರವುಗೊಳಿಸಲು ಸೂಚಿಸಲಾಗಿತ್ತು. ನಿವಾಸಿಗಳು ಹಾಗೂ ಅಂಗಡಿದಾರರು ಸಂಸದರು ಹಾಗೂ ಸಚಿವರ ಮೂಲಕ ಒತ್ತಡ ತಂದ ಪರಿಣಾಮ ಜನವರಿ ೩೧ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಕೆರೆಗೆ ಹೊಂದಿಕೊಂಡಂತೆ ಇರುವ ಅಂಗಡಿದಾರರ ಪಟ್ಟಿ ಮಾಡಿದಂತೆ ಅವರುಗಳಿಗೆ ನೋಟೀಸ್ ನೀಡುವ ಕಾರ್ಯ ಗುರುವಾರ ಜರುಗಿತು.
ಕೆರೆ ಒತ್ತುವರಿ ಮಾಡಿರುವ ಅಂಗಡಿಯವರಿಗೆ ಮಾತ್ರ ನೋಟೀಸ್ ಜಾರಿ ಮಾಡಬೇಕಾಗಿದ್ದ ಅಧಿಕಾರಿಗಳು ಇದೀಗ ಹೊಸ ನೆಪವೊಡ್ಡಿ ಇದರೊಂದಿಗೆ ಪಟ್ಟಣದ ಮುಜುರಾಯಿ ಇಲಾಖೆಗೆ ಸೇರಿದ ರಂಗನಾಥಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಅಂಗಡಿದಾರರಿಗೂ ನೋಟೀಸ್ ಜಾರಿ ಮಾಡಿದ್ದಾರೆ. ದೇವಾಲಯದ ಬಳಿ ಇರುವ ಪೆಟ್ಟಿಗೆ ಅಂಗಡಿದಾರರಿಗೆ ಫೆ.೧ರ ಒಳಗಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು ಈ ಅಂಗಡಿದಾರರಲ್ಲಿ ಆತಂಕ ಉಂಟುಮಾಡಿದೆಯಲ್ಲದೆ ಗೊಂದಲಕ್ಕೆ ಕಾರಣವಾಗಿದೆ.
ಸಮಸ್ಯೆ ಏನು: ಕೆರೆ ಅಂಗಳದ ಅಂಗಡಿಗಳನ್ನು ಸರ್ವೆ ಮಾಡಿ ನಂತರ ಪಟ್ಟಿಮಾಡಿರುವ ಇಲಾಖೆಯವರು ಈ ದೇವಾಲಯದ ಆವರಣದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲು ಯಾವುದೇ ರೀತಿಯ ಸರ್ವೆ ಮಾಡಿಲ್ಲ, ಅಂಗಡಿದಾರರ ಪಟ್ಟಿ ಸಿದ್ದಮಾಡಿಲ್ಲ ಹಾಗೂ ಯಾವ ಉದ್ದೇಶಕ್ಕಾಗಿ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದಾಗಿ ಇಲ್ಲಿನ ಅಂಗಡಿದಾರರಿಗೆ ಮಾಹಿತಿ ನೀಡಿ ಕಾಲಾವಾಕಾಶ ಸಹ ನೀಡಿಲ್ಲ.
ಬಸ್ ನಿಲ್ದಾಣದ ಅಂಗಡಿಗಳು ಕೆರೆಯ ಜಾಗದಲ್ಲಿದ್ದು ಅವುಗಳನ್ನು ತೆಗೆಯುವಂತೆ ನೋಟೀಸ್ ನೀಡಿದ್ದಲ್ಲದೆ ಸಾಕಷ್ಟು ತಿಂಗಳಗಳ ಕಾಲಾವಾಕಾಶ ನೀಡಿದ್ದಾರೆ ಆದರೆ ನಮ್ಮ ಅಂಗಡಿಗಳು ಯಾವುದೇ ಒತ್ತುವರಿ ಜಾಗದಲ್ಲಿಲ್ಲ ಪಂಚಾಯ್ತಿಗೆ ಸೇರಿದ ಜಾಗದಲ್ಲಿವೆ ಅದರೂ ಸಹ ಈರೀತಿ ನೋಟೀಸ್ ನೀಡಿದ್ದಾರೆ ನಮಗೆ ಅನ್ಯಾಯವಾಗುತ್ತಿದೆ. ಅವರಿಗೊಂದು ನ್ಯಾಯವಾದರೆ ನಮಗೊಂದುನ್ಯಾಯವೇ ಎಂಬುದು ಅಂಗಡಿದಾರರ ಅಳಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ