ಸಚಿವರೇ , ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಕೊಡಿಸಿ : ಪೋಷಕರ ಅಳಲು - ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಆಟೋ ಸಿಲಿಂಡರ್ ಸ್ಪೋಟದಿಂದ ಗಂಭೀರ ಗಾಯಗೊಂಡಿದ್ದ ಮಕ್ಕಳ ಚಿಕಿತ್ಸೆಗೆ ಹಣ, ಸೂಕ್ತ ಚಿಕಿತ್ಸೆಗೆ ಸೂಚನೆ,ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅನುದಾನ ಹೀಗೆ ಹತ್ತುಹಲವಾರು ಸೂಚನೆಗಳನ್ನು ನೀಡಿ ಹೋಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಉಮಾಶ್ರೀ ಮಾತಿಗೆ ಕಿಂಚಿತ್ತು ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಕೇಳಿಬಂದಿದೆ.
ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ವಾಪಸ್ ಹುಳಿಯಾರಿಗೆ ಬಂದ ಪೋಷಕರು ತಮ್ಮ ಮಕ್ಕಳೊಂದಿಗೆ ಅಂಗನವಾಡಿ ಮುಂದೆ ಪ್ರತಿಭಟನೆ ನಡೆಸಿದರು. |
ಗುರುವಾರದಂದು ಹುಳಿಯಾರಿನ ಇಂದಿರಾನಗರದ ಅಂಗನವಾಡಿ ಮುಂದೆ ಆಟೋ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅಂಗನವಾಡಿಯ ಸಹಾಯಕಿ ಸೇರಿದಂತೆ ೧೨ಮಕ್ಕಳಿಗೆ ತೀವ್ರಗಾಯಗಳಾಗಿ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು ಘಟನಾ ವಿವರ ತಿಳಿದ ಸಚಿವೆ ಉಮಾಶ್ರೀ ಗಾಯಗೊಂಡ ಮಕ್ಕಳನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಲ್ಲದೆ , ಮಕ್ಕಳ ಆಕ್ರಂದನಕ್ಕೆ ಕಣ್ಣೀರಿಟ್ಟು ಸಾಧ್ಯವಾದಷ್ಟು ಬೇಗಗುಣಮುಖವಾಗುವಂತೆ ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಾಕೀತು ಮಾಡಿದ್ದರು.
ಅರ್ಧಂಬರ್ಧ ಗುಣಮುಖವಾಗಿ ವಾಪಸ್ಸ್ ಹುಳಿಯಾರಿಗೆ ಬಂದಿರುವ ಮಗು. |
ಸಚಿವರು , ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರು ಇದೀಗ ಕಣ್ಣೆತ್ತಿಯೂ ನೋಡದಿದ್ದರಿಂದ ಸುಟ್ಟಗಾಯಗಳಿಂದ ಬೊಬ್ಬಿಡುತ್ತಿದ್ದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಕಂಗಾಲಾದ ಪೋಷಕರು ಸದ್ಯ ಮಕ್ಕಳ ಜೀವ ಉಳಿದರೆ ಸಾಕೆಂದು ಧಾವಂತದಲ್ಲಿ ವಾಪಸ್ಸ್ ತಮ್ಮ ಊರಿಗೆ ಕರೆತಂದು ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ಶನಿವಾರದಂದು ಮಧ್ಯಾಹ್ನ ವಿಚಾರಣೆಗೆ ಪೋಲೀಸರು ಆಗಮಿಸಿದಾಗ ಆಕ್ರೋಶಗೊಂಡಿದ್ದ ಪೋಷಕರು ಅಂಗನವಾಡಿ ಮುಂದೆ ಪ್ರತಿಭಟನೆ ಸಹ ನಡೆಸಿದ್ದಾರೆ.
ದೂರೇನು: ಜಿಲ್ಲಾಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪರಿಯನ್ನು ನೋಡಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ಶುಕ್ರವಾರದಂದೇ ವಾಪಸ್ಸು ಹುಳಿಯಾರಿಗೆ ಬಂದಿದ್ದ ಮಕ್ಕಳು ಹಾಗೂ ಪೋಷಕರನ್ನು ಪುನ: ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಅಲ್ಲಿ ಮತ್ತೆ ಅಡ್ಮಿಟ್ ಮಾಡಿಕೊಳ್ಳುವಾಗಲೂ ಸಹ ಕಿರಿಕಿರಿ ಮಾಡಿದರು. ಸಿಲಿಂಡರ್ ಸ್ಫೋಟದಿಂದ ಗಾಯಗೊಂಡ ಮಕ್ಕಳು ಎಂದು ಹೇಳಿದರೂ ಸಹ ನಮ್ಮನ್ನು ಕೆಲ ಕಾಲ ಕಾಯಿಸಿ ನಂತರ ಆಡ್ಮಿಟ್ ಮಾಡಿಕೊಂಡರು. ಅಲ್ಲದೆ ವಾರ್ಡ್ ಗಳಿಗೆ ಬರುವ ವೈದ್ಯರು ಸಹ ಬೇಕೋ ಬೇಡವೋ ಎಂಬಂತೆ ಮಕ್ಕಳನ್ನು ನೋಡುತ್ತಿದ್ದಾರೆ. ಜೌಷಧಿ, ಮಾತ್ರೆಗಳನ್ನು ಮೆಡಿಕಲ್ ಸ್ಟೋರ್ ನಲ್ಲಿ ತರುವಂತೆ ಚೀಟಿ ಬರೆದುಕೊಡುತ್ತಿದ್ದಾರೆ. ನಮ್ಮ ಹತ್ತಿರ ಹಣವಿಲ್ಲ ಆಸ್ಪತ್ರೆಯಲ್ಲಿನ ಮೆಡಿಕಲ್ ಸ್ಟೋರ್ ನಲ್ಲೇ ಕೊಡಿ ಎಂದರೆ ನಮ್ಮ ಮೇಳೆ ದಬಾಯಿಸುತ್ತಿದ್ದರು ಎಂದು ಮಕ್ಕಳ ಪೋಷಕರು ತಮ್ಮ ಅಳಲನ್ನು ತೋಡಿಕೊಂಡರು.
ಹುಳಿಯಾರಿನಲ್ಲೇ ಚಿಕಿತ್ಸೆ ಕೊಡಿಸಿ : ನಮ್ಮ ಮಕ್ಕಳಿಗೆ ದೊಡ್ಡಆಸ್ಪತ್ರೆಯ ಚಿಕಿತ್ಸೆ ಬೇಡ ಹುಳಿಯಾರಿನಲ್ಲೇ ಇರುವ ಆಸ್ಪತ್ರೆಗಳಲ್ಲಿ ಉತ್ತಮಚಿಕಿತ್ಸೆ ಕೊಡಿಸಿ , ನಾವು ಒಬ್ಬಂಟಿಗರು ಗಂಡಹೆಂಡತಿ ಇಬ್ಬರೂ ತುಮಕೂರಿನ ಆಸ್ಪತ್ರೆಗೆ ಹೋದರೆ ಊಟ,ಬಟ್ಟೆಗೆ ಏನು ಮಾಡುವುದು ನಮ್ಮ ಮಕ್ಕಳಿಗೆ ಇಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿಕೊಡಲಿ ಎಂಬುದು ಎಲ್ಲರ ಬೇಡಿಕೆಯಾಗಿತ್ತು.
---------------------
ಸಚಿವರು,ಶಾಸಕರು,ಜಿಲ್ಲಾಧಿಕಾರಿಗಳು ಬಂದಾಗ ಮಾತ್ರ ಡಾಕ್ಟರ್, ನರ್ಸ್ ಎಲ್ಲರೂ ಮಕ್ಕಳ ಬಳಿ ಹಾಜರಿದ್ದು ನೋಡಿಕೊಳ್ಳುತ್ತಾರೆ ಆದರೆ ಅವರು ಆಸ್ಪತ್ರೆಯಿಂದ ಹೋದ ಬಳಿಕ ಇತ್ತ ಬರುವುದೆ ಕಡಿಮೆ. ನಾವೇ ಹೋಗಿ ಕರೆದು ಬರಬೇಕು ಆಗಲೂ ಸಹ ಅವರಿಗಿಷ್ಟವಾದಾಗ ಬಂದು ಸ್ವಲ್ಪ ಸಮಯ ನೋಡಿ ಹೋಗುತ್ತಾರೆ . ಸಚಿವರ ಮೊಬೈಲ್ ನಂ ಕೊಡಿ. ನಾವೇ ಖುದ್ದಾಗಿ ಸಚಿವರೊಂದಿಗೆ ಮಾತನಾಡಿ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತೇವೆ
----------------
ವಿಷಯ ತಿಳಿದು ಟಿ.ಎಚ್.ಓ ಶಿವಕುಮಾರ್ ಹಾಗೂ ಸಿಡಿಪಿಓ ಅನಿಲ್ ಕೈಸರ್ ಅವರನ್ನು ಕರೆತಂದ ತಹಸೀಲ್ದಾರ್ ಕಾಮಾಕ್ಷಮ್ಮ ಪ್ರತಿಭಟನಾ ಪೋಷಕರೊಂದಿಗೆ ಮಾತನಾಡಿ ಚಿ.ನಾ.ಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿ, ಅಂಬುಲೆನ್ಸ್ ತರಿಸಿ ಮಕ್ಕಳನ್ನು ಚಿ.ನಾ.ಹಳ್ಳಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ.
ಒಟ್ಟಾರೆ ಸುಟ್ಟಗಾಯಗಳಿಂದ ನರಳುತ್ತಿರುವ ಮಕ್ಕಳಿಗೆ ತತ್ ಕ್ಷಣದ ಚಿಕಿತ್ಸೆ ಅಗತ್ಯವಿದ್ದು ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅಗತ್ಯ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಬೇಕಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ