ಹುಳಿಯಾರು ಹೋಬಳಿಯ ಗಡಿಭಾಗದಲ್ಲಿನ ಅನೇಕ ಹಳ್ಳಿಯ ಕಕ್ಷಿದಾರರು ತಾಲ್ಲೂಕು ಕೇಂದ್ರವಾದ ಚಿ.ನಾ.ಹಳ್ಳಿಯ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯುವುದು ತ್ರಾಸದಾಯಕವಾಗಿದ್ದು ಹೋಬಳಿ ಕೇಂದ್ರವಾಗಿರುವ ಹುಳಿಯಾರಿನಲ್ಲಿ ಹೆಚ್ಚುವರಿ ನ್ಯಾಯಾಲಯವನ್ನು ಪ್ರಾರಂಭಿಸುವಂತೆ ಹುಳಿಯಾರು ಹೋಬಳಿ ವ್ಯಾಪ್ತಿಯ ವಕೀಲರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹುಳಿಯಾರಿನಲ್ಲಿ ಹೆಚ್ಚುವರಿ ನ್ಯಾಯಾಲಯ ಪ್ರಾರಂಭಿಸುವಂತೆ ಹೋಬಳಿಯ ವಕೀಲರೆಲ್ಲಾ ಸೇರಿ ಪತ್ರಿಕಾಗೋಷ್ಠಿ ನಡೆಸಿದರು. |
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆಗುಹೋಗುಗಳು ಹಾಗೂ ರೂಪುರೇಷೆ ಬಗ್ಗೆ ಹೋಬಳಿಯ ವಕೀಲರೆಲ್ಲಾ ಸೇರಿ ಚರ್ಚೆ ನಡೆಸಿದರು.
ಹುಳಿಯಾರು ಹೋಬಳಿ ೬೦ ರಿಂದ ೭೦ ಸಾವಿರ ಜನಸಂಖ್ಯೆಯಿಂದ ಕೂಡಿದ್ದು ನಿತ್ಯ ಹತ್ತುಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರುವವರ ಸಂಖ್ಯೆ ಸಾಕಷ್ಟಿದೆ. ಸದ್ಯ ಚಿ.ನಾ.ಹಳ್ಳಿಗೆ ಪ್ರಧಾನ (ಕಿರಿಯ) ಸಿವಿಲ್ ನ್ಯಾಯಾಲಯಕ್ಕೆ ಈ ಭಾಗದಿಂದ ನ್ಯಾಯ ಕೋರಿ ಹೋಗುವವರ ಪ್ರಕರಣ ಹೆಚ್ಚಿವೆ.
ಹುಳಿಯಾರು ಹೋಬಳಿಯ ಗಡಿಭಾಗದ ದಸೂಡಿ,ದಬ್ಬಗುಂಟೆ,ಮರೆನಡುಪಾಳ್ಯ ಮುಂತಾದ ಗ್ರಾಮಗಳಿಂದ ಜನ ಚಿ.ನಾ.ಹಳ್ಳಿಯ ಕೊರ್ಟ್ ಗೆ ಬರಬೇಕೆಂದರೆ ಸುಮಾರು ೪೦ ರಿಂದ ೫೦ ಕಿಮೀ ದೂರವಿದ್ದು ಬೆಳಿಗ್ಗೆ ಬಂದರೆ ವಾಪಸ್ಸ್ ಹೋಗುವುದಕ್ಕೆ ಸಂಜೆಯಾಗುತ್ತದೆ.ಅಲ್ಲದೆ ಗಡಿಭಾಗದ ಅನೇಕ ಹಳ್ಳಿಗಳಿಗೆ ಸಂಜೆಯ ನಂತರ ಬಸ್ ಸೌಕರ್ಯವಿಲ್ಲದೆ ಜನ ನಿತ್ಯ ಪರದಾಡುವಂತಾಗಿದೆ. ತಾಲ್ಲೂಕಿನ ನ್ಯಾಯಾಲಯದಲ್ಲಿರುವ ಒಟ್ಟು ೧೫೦೦ ಕೇಸ್ ಗಳಲ್ಲಿ ಹುಳಿಯಾರು ಹೋಬಳಿಗೆ ಸೇರಿದ ೭೫೦ಕ್ಕೂ ಹೆಚ್ಚು ಕೇಸ್ ಗಳಿವೆ ಹಾಗೂ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಕೀಲರಲ್ಲಿ ೩೦ಕ್ಕೂ ಹೆಚ್ಚು ಮಂದಿ ಹುಳಿಯಾರು ಭಾಗದವರೆ ಆಗಿದ್ದು ನಿತ್ಯ ಇಲ್ಲಿಂದಲ್ಲೆ ಹೋಗಿ ಬರುತ್ತಿದ್ದಾರೆ.
ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯದೊರೆಯುವಂತಾಗಬೇಕು. ಹುಳಿಯಾರು ಹಾಗೂ ಪಕ್ಕದ ಹಂದನಕೆರೆ ಎರಡು ಹೋಬಳಿಗೂ ಸೇರಿಕೊಂಡಂತೆ ಹುಳಿಯಾರಿನಲ್ಲಿ ಹೆಚ್ಚುವರಿ ನ್ಯಾಯಾಲಯವನ್ನು ಪ್ರಾರಂಭಿಸುವುದರಿಂದ ಈಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈನಿಟ್ಟಿನಲ್ಲಿ ಇದೇ ಭಾಗದವರೆ ಆದ ಕಾನೂನುಮಂತ್ರಿಗಳು ಗಮನಹರಿಸಿ ಶೀಘ್ರದಲ್ಲೇ ಹೆಚ್ಚುವರಿ ಕೋರ್ಟ್ ಪ್ರಾರಂಭಿಸಲು ಅನುಮೋದನೆ ನೀಡುವಂತೆ ಹಿರಿಯ ವಕೀಲ ಜಿ.ಎಸ್.ಚನ್ನಬಸಪ್ಪ ಮನವಿ ಮಾಡಿದರು.
ಹಳಿಯಾಲ ತಾಲ್ಲೂಕು ಕೇಂದ್ರವಾಗಿದ್ದರೂ ಸಹ ಹೋಬಳಿ ಕೇಂದ್ರವಾದ ದಾಂಡೇಲಿಯಲ್ಲಿ ಹೆಚ್ಚುವರಿ ನ್ಯಾಯಾಲಯವಿದೆ .ಅದೇ ರೀತಿ ಎಲ್ಲಾ ಸೌಲಭ್ಯಗಳಿರುವ ಹಾಗೂ ಯಾವುದೇ ತಾಲ್ಲೂಕು ಕೇಂದ್ರಕ್ಕೆ ಕಡಿಮೆ ಇಲ್ಲದಂತಿರುವ ಹುಳಿಯಾರಿನಲ್ಲಿ ಹೆಚ್ಚುವರಿ ಕೋರ್ಟ್ ಪ್ರಾರಂಭಿಸುವುದರಿಂದ ಕಕ್ಷಿದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೋರ್ಟ್ ಪ್ರಾರಂಭಿಸಲು ಬೇಕಾದ ಕಟ್ಟಡದ ವ್ಯವಸ್ಥೆಯನ್ನು ಹೋಬಳಿಯ ವಕೀಲರೆಲ್ಲ ಸೇರಿ ಮಾಡಿಕೊಡುವುದಾಗಿ ವಕೀಲ ಹೆಚ್.ಆರ್.ರಮೇಶ್ ಬಾಬು ತಿಳಿಸಿದರು.
ಈ ವೇಳೆ ವಕೀಲರಾದ ಬಿ.ಕೆ.ಸದಾಶಿವು,ಕೆ.ಆರ್.ಚನ್ನಬಸವಯ್ಯ,ಕೆ.ಎಂ.ರಾಜಶೇಖರ್,ಕೆ.ಸಿ.ವಿಶ್ವನಾಥ್,ಗುರುಮೂರ್ತಿ,ಹೆಚ್.ಟಿ.ಹನುಮಂತಪ್ಪ,ಸತೀಶಪ್ಪ,ಷಡಕ್ಷರಿ,ಮಧುಸೂದನ್,ಮೋಹನ್ ಮೂರ್ತಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ