ಹುಳಿಯಾರು ಪಟ್ಟಣ ಇಂದಿರಾನಗರದಲ್ಲಿ ಆಟೋಸಿಲಿಂಡರ್ ಸ್ಫೋಟದಿಂದ ತೀವ್ರಗಾಯಗೊಂಡು ಸಾವನಪ್ಪಿದ ಪುಟ್ಟಶಾಮಾಚಾರ್ ಸಾವಿನಿಂದಾಗಿ ಆತನ ಕುಟುಂಬ ಸಂಕಷ್ಟದಲ್ಲಿ ಸಿಲುಕಿದ್ದು ಆ ಕುಟುಂಬಕ್ಕೆ ಸೂಕ್ತಪರಿಹಾರ ನೀಡುವಂತೆ ಹಾಗೂ ಈ ಸ್ಫೋಟಕ್ಕೆ ಆಟೋ ಚಾಲಕನೇ ಕಾರಣವಾಗಿದ್ದು ತನಿಖೆಯಾಗಬೇಕೆಂದು ಒತ್ತಾಯಿಸಿ ಸೋಮವಾರ ರಾಟ್ರಿಯಿಂದ ಪ್ರಾರಂಭವಾಗಿದ್ದ ಪ್ರತಿಭಟನೆ ಮಂಗಳವಾರ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಮಧ್ಯಸ್ತಿಕೆಯಲ್ಲಿ ಕೊನೆಗೊಂಡಿತ್ತು.
ಸೋಮವಾರ ರಾತ್ರಿ ಠಾಣೆ ಮುಂದೆ ಮೃತ ಪುಟ್ಟಶಾಮಾಚಾರ್ ಶವ ಇಟ್ಟು ಪ್ರತಿಭಟನೆಗೆ ಮುಂದಾದ ಸಾರ್ವಜನಿಕರು. |
ಕಳೆದ ಗುರುವಾರದಂದು ಆಟೋ ಸಿಲಿಂಡರ್ ಸ್ಪೋಟಗೊಂಡು ಅಂಗನವಾಡಿ ಮಕ್ಕಳು ಸೇರಿದಂತೆ ಪುಟ್ಟಸ್ವಾಮಾಚಾರ ಹಾಗೂ ಆತನ ಪತ್ನಿ ಸುಲೋಚನ ಅವರಿಗೂ ತೀವ್ರ ಸುಟ್ಟಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚು ಗಾಯಗೊಂಡಿದ್ದ ಪುಟ್ಟಶಾಮಾಚಾರ್ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಅಸುನೀಗಿ ಇವರ ಕುಟುಂಬ ಬೀದಿಗೆ ಬಿದ್ದಿದೆ.
ಮೃತ ಕುಟುಂಬದವರ ಸಮಸ್ಯೆ ಆಳಿಸಿ ಪರಿಹಾರ ಘೋಷಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು. |
ಇದುವರೆಗೂ ಸಿಲಿಂಡರ್ ಸ್ಪೋಟ ಆಕಸ್ಮಿಕವಾಗಿ ಆಗಿರಬಹುದೆಂದು ಜನ ನಂಬಿದ್ದರು.ಆದರೆ ಆಸ್ಪತ್ರೆಯಿಂದ ಚೇತರಿಸಿಕೊಂಡೂ ಬಂದ ಸುಲೋಚನ ಘಟನೆ ನಡೆದ ಸಂಪೂರ್ಣವಿವರವನ್ನು ತಿಳಿಸಿದ್ದು, ಆಟೋ ಸಿಲಿಂಡರ್ ಗೆ ಅಡುಗೆ ಅನಿಲದ ಸಿಲಿಂಡರ್ ನಿಂದ ಡಂಪಿಂಗ್ ಮಾಡುವ ವೇಳೆ ಆಟೋಚಾಲಕ ಶಬ್ಬಿರ್ ನ ಅಜಾಗರೂಕತೆಯಿಂದ ಸ್ಫೋಟವಾಗಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಆಕ್ರಮವಾಗಿ ಅನಿಲ ರೀಫಿಲ್ಲಿಂಗ್ ಮಾಡಿದ ವ್ಯಕ್ತಿಗೆ ಪರಿಹಾರ ನೀಡಿದ್ದಲ್ಲದೆ ಆತನನ್ನು ರಕ್ಷಿಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಿದ್ದು ಸಾವಿನಪ್ಪಿದ ಇವರ ಕುಟುಂಬಕ್ಕೆ ಕೇಳುವವರೇ ಗತಿಯಿಲ್ಲವೆಂದು
ಪಟ್ಟಣದ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಹಾಗೂ ಈಗ ಸಾವನಪ್ಪಿರುವ ಪುಟ್ಟಶಾಮಾಚಾರ್ ಕುಟುಂಬಕ್ಕೆ ಸೂಕ್ತಪರಿಹಾರ ನೀಡುವಂತೆ ಒತ್ತಾಯಿಸಿ ಪೋಲೀಸ್ ಠಾಣೆಯ ಪಕ್ಕ ಮೃತದೇಹವನ್ನಿಟ್ಟು ಸೋಮವಾರ ರಾತ್ರಿಯಿಂದ ಪ್ರತಿಭಟನೆಗೆ ಮುಂದಾಗಿದ್ದರು.
ಹುಳಿಯಾರಿನಲ್ಲಿ ಸಂಭವಿಸಿದ ಸಿಲಿಂಡರ್ ಸ್ಪೋಟದಿಂದ ಸಾವನಪ್ಪಿದ ಪುಟ್ಟಶಾಮಾಚಾರ್ ಅವರ ಅಂತ್ಯಕ್ರಿಯೆಗೆ ತಹಸೀಲ್ದಾರ್ ಕಾಮಾಕ್ಷಮ್ಮ ಒಂದುಸಾವಿರ ರೂಪಾಯಿ ಚೆಕ್ಕನ್ನು ಮೃತನ ಪತ್ನಿಗೆ ನೀಡಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಇತರರಿದ್ದಾರೆ. |
ಮಂಗಳವಾರ ಬೆಳಿಗ್ಗೆ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮೊಂದಿಗೆ ತಹಸೀಲ್ದಾರ್ ಕಾಮಾಕ್ಷಮ್ಮ ಹಾಗೂ ಇಓ ಕೃಷ್ಣಮೂರ್ತಿ ಅವರೊಂದಿಗೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಈತ ಆಸ್ಪತ್ರೆಯಲ್ಲಿದ್ದಾಗ ತಾವು ಅವರ ಬಳಿ ಹೋಗಿ ಯೋಗ ಕ್ಷೇಮ ವಿಚಾರಿಸಿದ್ದಾಗಿ ತಿಳಿಸಿದರು. ಈತನ ಕುಟುಂಬಕ್ಕೆ ಜಿಲ್ಲಾಡಳಿತದದಿಂದ ಯಾವುದೇ ರೀತಿಯ ಪರಿಹಾರ ನೀಡಲು ಬರುವುದಿಲ್ಲ ಮುಖ್ಯಮಂತ್ರಿ ನಿಧಿಯಿಂದ ಈತನ ಕುಟುಂಬಕ್ಕೆ ಪರಿಹಾರ ಕೊಡಬಹುದಾಗಿದ್ದು ಶೀಘ್ರವೇ ಪರಿಹಾರವನ್ನು ತರಿಸಿಕೊಡುವ ಭರವಸೆ ನೀಡಿದರು. ಈತನ ಮಗನಿಗೆ ಸ್ವ ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಬಿಸಿಎಂ ಲೋನ್ ಹಾಕಿಸಿ ಕೊಡುವುದಾಗಿ ತಿಳಿಸಿದ್ದಲ್ಲದೆ ಹತ್ತು ಸಾವಿರ ನಗದನ್ನು ಮೃತನ ಪತ್ನಿ ಸುಲೋಚನಮ್ಮನವರಿಗೆ ನೀಡುವ ಮೂಲಕ ಸಾಂತ್ವಾನ ಹೇಳಿದರು. ಮೃತರ ಕುಟುಂಬದವರಿಗೆ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ತಾ.ಪಂ.ಇಓ ಅವರಿಗೆ ತಿಳಿಸಿರುವುದಾಗಿ ಹಾಗೂ ಈ ಎಲ್ಲಾ ಕಾರ್ಯಗಳು ಶೀಘ್ರವೇ ನಡೆಯುವ ಭರವಸೆ ನೀಡಿದರು.
ತನಿಖೆ : ಸಿಲಿಂಡರ್ ಸ್ಫೋಟಕ್ಕೆ ಕಾರಣನಾದ ಆಟೋ ಚಾಲಕನ ಮೇಲೆ ಕೇಸು ದಾಖಲಿಸಿ, ಸೂಕ್ತ ಕಾರಣವೇನೆಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಆಟೋದಲ್ಲಿ ಸಿಲಿಂಡರ್ ಅಳವಡಿಸಲು ಪರವಾನಿಗೆ ಇತ್ತೆ,ಇಲ್ಲವೇ ಎಂಬುದನ್ನು ಪರಿಶೀಲಿಸಿ, ಒಂದು ವೇಳೆ ಲೈಸೆನ್ಸ್ ಇದ್ದರೆ ಸಿಲಿಂಡರ್ ಕಂಪನಿಯಿಂದ ಬರುವ ಮೊತ್ತವನ್ನು ಮೃತ ಕುಟುಂಬದವರಿಗೆ ಕೊಡಿಸುವ ವ್ಯವಸ್ಥೆ ಮಾಡುವಂತೆ ಪೊಲೀಸರಿಗೆ ತಿಳಿಸಿದರು.
ತಹಸೀಲ್ದಾರ್ ಕಾಮಾಕ್ಷಮ್ಮ ತಮ್ಮ ಇಲಾಖೆವತಿಯಿಂದ ಶವಸಂಸ್ಕಾರಕ್ಕೆಂದು ಒಂದು ಸಾವಿರ ರೂನ ಚೆಕ್ಕನ್ನು ಸ್ಥಳದಲ್ಲೇ ವಿತರಿಸಿದು ಹಾಗೂ ತಮ್ಮ ಇಲಾಖೆವತಿಯಿಂದ ಹೆಚ್ಚುವರಿಯಾಗಿ ಬರಬಹುದಾದ ಪರಿಹಾರವನ್ನು ನೀಡುವ ಭರವಸೆಯಿತ್ತರು.
ಪ್ರತಿಭಟನೆಯಲ್ಲಿ ಮೃತನ ಸಂಬಂಧಿಕರು ಸೇರಿದಂತೆ ವಿಶ್ವಕರ್ಮ ಸಮಾಜದವರು, ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು, ರೈತಸಂಘದವರು, ಕರ್ನಾಟಕ ರಕ್ಷಣಾವೇದಿಕೆಯವರು, ದಲಿತ ಸಹಾಯವಾಣಿಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ