ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ಮಿತಿಮೀರಿದ್ದು ಇದಕ್ಕೆ ಕಾರ್ಯದರ್ಶಿಯೇ ನೇರಹೊಣೆ ಎಂದು ಅಪಾದಿಸಿರುವ ಫಲಾನುಭವಿಗಳು ಹಾಗೂ ಗ್ರಾ.ಪಂ. ನೌಕರರು ಹಾಲಿ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ತಾ.೧೨ ರ ಸೋಮವಾರ ಪಂಚಾಯ್ತಿ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಆರೋಪ ಏನು: ಹಂಗಾಮಿ ಗ್ರಾ.ಪಂ.ನೌಕರರನ್ನು ಖಾಯಂಗೊಳಿಸುವುದಾಗಿ ನೌಕರರಿಂದ ೫ ಸಾವಿರದಿಂದ ೫೦ ಸಾವಿರದವರೆಗೆ ಲಂಚದ ಬೇಡಿಕೆಯಿಟ್ಟಿದ್ದು, ವಿಷಯ ಬಹಿರಂಗಪಡಿಸಿದಲ್ಲಿ ನೌಕರಿಯಿಂದ ವಜಾಗೊಳಿಸುತ್ತೇನೆಂದು ಬೆದರಿಕೆ ಸಹ ಹಾಕಿರುತ್ತಾರೆ. ಎನ್.ಆರ್.ಇ.ಜಿ ಯಿಂದ ೭೮ ಶೌಚಾಲಯಗಳಿಗೆ ಹಣ ಬಿಡುಗಡೆ ಆಗಬೇಕಾಗಿದ್ದು ಕಾರ್ಯದರ್ಶಿಗೆ ಹಣ ಕೊಡದ ಪ್ರಯುಕ್ತ ಎನ್.ಎಂ.ಆರ್. ಕೊಡಲು ಒಂದು ವರ್ಷದಿಂದ ಫಲಾನುಭವಿಗಳನ್ನು ಸತಾಯಿಸುತ್ತಿದ್ದಾರೆ.
ಈ -ಸ್ವತ್ತುವಿನಲ್ಲಿ ದಾಖಲೆ ನೀಡಲು ೩ಸಾವಿರದವಗೆಗೂ ಬೇಡಿಕೆಯಿಟ್ಟಿದ್ದು ಹಣ ನೀಡದಿದ್ದವರಿಗೆ ಕಳೆದ ಮೂರು ತಿಂಗಳಿನಿಂದಲೂ ಅಲೆದಾಡಿಸುತ್ತಿದ್ದಾರೆ. ಎನ್.ಆರ್.ಇ.ಜಿ ಯ ಕೆಲವು ಕಾಮಗಾರಿಗಳಿಗೆ ಶೇ.೩೦ ಹಾಗೂ ಶೇ.೪೦ ರಷ್ಟು ಹಣದ ಬೇಡಿಕೆ ಇಟ್ಟಿದ್ದಾರೆ. ವಾಸಸ್ಥಳ ಧೃಡೀಕರಣಕ್ಕೆ ದಸೂಡಿಯಿಂದ ಚಿ.ನಾ.ಹಳ್ಳಿಗೆ , ಚಿ.ನಾಹಳ್ಳಿಯಿಂದ ದಸೂಡಿಗೆ ಅಲಸುತ್ತಾರೆ. ದಸೂಡಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಅನೇಕ ಸೌಲಭ್ಯಗಳು , ಕಾಮಗಾರಿಗಳು ಉಳ್ಳವರಪಾಲಾಗಿದ್ದು ಅರ್ಹಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಇಲ್ಲಿನ ಕಾರ್ಯದರ್ಶಿ ಹಣ ಬಯಸುತ್ತಿದ್ದಾರೆ ಎಂಬ ಆರೋಪ ಇವರ ಮೇಲಿದೆ.
ಸಮಸ್ಯೆ ಬಗ್ಗೆ ಸಿಇಓ ಅವರನ್ನು ಭೇಟಿ ಮಾಡಿ ಕಾರ್ಯದರ್ಶಿಯ ವಿರುದ್ದ ದೂರು ಸಲ್ಲಿಸಲಾಗಿದ್ದು ಈ ಬಗ್ಗೆ ತನಿಖೆ ಮಾಡಿ ಕ್ರಮತೆಗೆದುಕೊಳ್ಳಿ ಎಂದು ಇಓ ಅವರಿಗೆ ಸೂಚಿಸಿದ್ದರೂ ಸಹ ಕಾರ್ಯನಿರ್ವಹಣಾಧಿಕಾರಿಗಳು ಸಹ ಕಾರ್ಯದರ್ಶಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಾರೆ ಹೊರತು ಕ್ರಮತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಮಸ್ಯೆ ಬಗೆಹರಿಯದ ಕಾರಣದಿಂದ ಬೇಸತ್ತು ಪ್ರತಿಭಟನೆಯ ಹಾದಿ ಹಿಡಿದಿರುವುದಾಗಿ ತಿಳಿಸಿರುವ ರವಿಕುಮಾರ್ , ಪ್ರತಿಭಟನೆಗೆ ಸ್ತ್ರೀಶಕ್ತಿಸಂಘ ,ಸ್ವಸಹಾಯ ಸಂಘ,ರೈತಸಂಘ, ಎಸ್.ಸಿ. ಎಸ್.ಟಿ ದಲಿತ ಸಂಘ ಹಾಗೂ ನೊಂದವರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ