ವರದಿ:ಡಿ.ಆರ್.ನರೇಂದ್ರಬಾಬು
ಹುಳಿಯಾರು : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ರಾಗಿ ಖರೀದಿಸಲು ಜನವರಿ ೮ ರಿಂದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿದ್ದರೂ ಸಹ ರೈತರು ಖರೀದಿ ಕೇಂದ್ರದತ್ತ ಮುಖಮಾಡದಿರುವುದು ರೈತರ ಹಿತಕಾಯುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆ ಉದ್ಘವವಾಗಿದೆ.ಪಟ್ಟಣದ ಎಪಿಎಂಸಿ ಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರ ರೈತರಿಲ್ಲದೆ ಬಣಗುಡುತ್ತಿದ್ದು, ಇಲ್ಲಿನ ಅಧಿಕಾರಿಗಳು ರಾಗಿ ಮಾರಲು ಬರುವ ರೈತರನ್ನು ಎದುರು ನೋಡುತ್ತಾ ಕುಳಿತಿದ್ದಾರೆ.
ಹುಳಿಯಾರು ಎಪಿಎಂಸಿಯಲ್ಲಿ ಪ್ರಾರಂಭವಾಗಿರುವ ರಾಗಿ ಖರೀದಿ ಕೇಂದ್ರದ ಮುಂದೆ ಕಾಣದಿರುವ ರೈತರು. |
ರಾಗಿ ಖರೀದಿ ಕೇಂದ್ರವನ್ನು ಹುಳಿಯಾರು ಮತ್ತು ಚಿ.ನಾ.ಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿದ್ದು, ಖರೀದಿಗೆ ಗೋದಾಮು ಸೇರಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಸದ್ಯ ರಾಗಿಗೆ ಮಾರುಕಟ್ಟೆ ದರ ಕ್ವಿಂಟಾಲ್ ೧೨೦೦ ರಿಂದ ೧೪೦೦ರೂ ಇದ್ದು ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್ ಗೆ ಬೆಂಬಲ ಬೆಲೆ ಸೇರಿ ೨೦೦೦ರೂ ನೀಡಲಾಗುವುದಿದ್ದು, ಕ್ವಿಂಟಾಲ್ ಗೆ ೫೦೦ರಿಂದ ೬೦೦ರೂ ವ್ಯತ್ಯಾಸವಿದ್ದರೂ ಸಹ ಅದೇಕೋ ರೈತರು ಮಾತ್ರ ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಿಲ್ಲ.
ಕೇಂದ್ರ ಪ್ರಾರಂಭಿಸಲು ಪ್ರತಿಭಟನೆ ಹಾದಿ ಹಿಡಿದಿದ್ದ ರೈತಸಂಘದವರು ಕೇಂದ್ರ ಪ್ರಾರಂಭದ ನಂತರ ಇತ್ತ ಅಡ್ಡ ಸುಳಿದಿಲ್ಲ , ಆಹಾರ ನಿಗಮದ ಅಧಿಕಾರಿಗಳು ಹಾಗೂ ಗ್ರೇಡ್ ನಿಗದಿ ಮಾಡುವ ಪರೀಕ್ಷಕರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ದಿನಂಪ್ರತಿ ಹಾಜರಾಗುತ್ತಿದ್ದು, ಖರೀದಿ ಕೇಂದ್ರದಲ್ಲಿ ವ್ಯವಹಾರ ಮಾತ್ರ ನಡೆಯುತ್ತಿಲ್ಲ.
ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು ೮೫೦೦ ಹೆಕ್ಟೇರ್ ಪ್ರದೇಶದಲ್ಲಿ ಹುಳಿಯಾರು, ದೊಡ್ಡಬಿದರೆ,ತಿಮ್ಲಾಪುರ,ಯಳನಡು,ಕೆಂಕೆರೆ,ಗಾಣಧಾಳು,ದಸೂಡಿ,ಬರಕನಹಾಲ್,ಕೋರಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುರಿ ಮೀರಿ ಬೆಳೆ ಬಂದಿದೆ. ಎಕರೆಗೆ ಮೂರು ಕ್ವಿಂಟಾಲ್ ಬೆಳೆಯುತ್ತಿದ್ದವರು ಈಬಾರಿ ನಾಲ್ಕರಿಂದ ಐದು ಕ್ವಿಂಟಾಲ್ ರಾಗಿ ಬೆಳೆದಿದ್ದಾರೆ. ಈ ಲೆಕ್ಕಾಚಾರದಲ್ಲಿ ಖರೀದಿ ಕೇಂದ್ರಕ್ಕೆ ಭರ್ತಿ ರೈತರು ಆಗಮಿಸಿ ರಾಗಿ ಮಾರಬೇಕಿದ್ದರೂ ಖರೀದಿ ಕೇಂದ್ರದತ್ತ ಸುಳಿಯದಿರುವುದು ನಿಗೂಢವಾಗಿದೆ.
ಸಮಸ್ಯೆ ಏನು : ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದಲ್ಲಿ ಪ್ರಸಕ್ತ ವರ್ಷದ ಬೆಳೆ ದಾಖಲಾಗಿರುವ ಪಹಣಿ,ಕೃಷಿ ಇಲಾಖೆಯಿಂದ ಪಡೆದ ರಾಗಿ ಇಳುವರಿ ದೃಢೀಕರಣಪತ್ರ ಹಾಜರು ಪಡಿಸಬೇಕು ರಾಗಿ ಮಾದರಿಯನ್ನು ಕೊಂಡೊಯ್ದು ದೃಢೀಕರಿಸಿಕೊಳ್ಳಬೇಕು, ಮಾರುವ ರಾಗಿ ಸದೃಢವಾಗಿದ್ದು ಸ್ವಚ್ಚವಾಗಿರಬೇಕು. ಸೀಕಲು ಹಾಗೂ ಕಪ್ಪುಕಾಳು ರಹಿತವಾಗಿ ಸರ್ಕಾರದ ನಿಯಮಾವಳಿ ಅನ್ವಯ ಉತ್ತಮಗುಣಮಟ್ಟದಲ್ಲಿರಬೇಕು. ತೇವಾಂಶ ಗರಿಷ್ಠಮಿತಿ ೧೨ರೊಳಗಿದ್ದು ಯೋಗ್ಯವಾಗಿರುವ ಚೀಲದಲ್ಲಿ ರಾಗಿ ತರಬೇಕು. ಇದರೊಂದಿಗೆ ಬ್ಯಾಂಕ್ ಖಾತೆ ಹಾಗೂ ನಂಬರ್ ಸಹ ನೀಡಬೇಕು. ಇಷ್ಟೆಲ್ಲಾ ಆದ ನಂತರ ಖರೀದಿ ಮಾಡಿದ ರಾಗಿಗೆ ಸರ್ಕಾರದಿಂದ ತಿಂಗಳುಗಟ್ಟಳೆ ಕಾದು ಬರುವ ಹಣ ಪಡೆಯಬೇಕು. ಅಲ್ಲದೆ ರೈತರೇನಾದರೂ ಬ್ಯಾಂಕ್ ನಲ್ಲಿ ಸಾಲಸೋಲ ಮಾಡಿದ್ದರೆ ಬರುವ ಹಣವೂ ಸಹ ಸಾಲಕ್ಕೆ ಜಮೆ ಆಗಿ ಖಾಲಿ ಕೈಯಲ್ಲಿ ವಾಪಸ್ಸಾಗಬೇಕು ಎಂಬುದೇ ರೈತರ ಚಿಂತೆಗೆ ಕಾರಣವಾಗಿದೆ.
ಇದರ ಗೋಜೆ ಬೇಡವೆನ್ನುವ ರೈತರು ವರ್ತಕರ ಬಳಿಯೇ ಇಂದಿಗೂ ಮಾರಾಟ ಮಾಡುತ್ತಿದ್ದು ಕ್ವಿಂಟಾಲ್ ಗೆ ೫೦೦ರೂ ಕಮ್ಮಿಯಾದರೂ ಪರವಾಗಿಲ್ಲ, ನಾವುತಂದ ರಾಗಿಯೆಲ್ಲಾ ತಿರಸ್ಕರಿಸದೆ ಕೊಳ್ಳುತ್ತಾರೆ.ಹಾಗಾಗಿ ವರ್ತಕರ ಬಳಿ ಮಾರುವುದೆ ಕ್ಷೇಮ ಎನ್ನುತ್ತಾರೆ ರೈತರು.
ಉತ್ತಮ ಗುಣಮಟ್ಟ: ಈ ಬಗ್ಗೆ ಖರೀದಿ ಕೇಂದ್ರದ ವ್ಯವಸ್ಥಾಪಕರನ್ನು ಮಾತನಾಡಿಸಿದಾಗ ಜಿಲ್ಲೆಯ ಇತರೆ ರಾಗಿ ಖರೀದಿ ಕೇಂದ್ರಗಳಿಗೆ ಹೋಲಿಸಿದರೆ ಹುಳಿಯಾರು ಸುತ್ತಮುತ್ತಲ ಭಾಗದ ರೈತರು ಬೆಳೆದಿರುವ ರಾಗಿ ಅಕಾಲಿಕ ಮಳೆಗೆ ಸಿಕ್ಕದೆ ಉತ್ತಮವಾಗಿದೆ. ಈ ಭಾಗದಲ್ಲಿ ಹೆಚ್ಚು ರೈತರು ಇದೀಗ ಕಣಗಳನ್ನು ಮಾಡಿಕೊಂಡು ರಾಗಿ ಒಕ್ಕಣೆ ಮಾಡುತ್ತಿದ್ದಾರೆ, ಮುಂಚಿತವಾಗಿ ಮಾಡಿದಂತಹ ಅಲ್ಪ ಸಂಖ್ಯೆಯ ರೈತರು ಮಾತ್ರ ರಾಗಿ ಮಾದರಿ ತಂದು ಹೆಸರು ನೋಂದಣಿ ಮಾಡಿಸುತ್ತಿದ್ದಾರೆ. ಬರುವ ಮಾರ್ಚ್ ವರೆಗೆ ಕೇಂದ್ರ ಖರೀದಿ ನಡೆಸುವುದರಿಂದ ರೈತರು ಕೇಂದ್ರದಲ್ಲಿಗೆ ರಾಗಿಯನ್ನು ತಂದು ಮಾರಾಟ ಮಾಡುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸುತ್ತಾರೆ.
ಕೇಂದ್ರವು ರಾಗಿ ಖರೀದಿಸಿದ ಒಂದು ವಾರದ ತರುವಾಯ ರೈತರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ನೇರ ವರ್ಗಾವಣೆಯಾಗುತ್ತದೆ ಆದರೂ ಸಹ ಕೇಂದ್ರಕ್ಕೆ ಬರುತ್ತಿರುವ ರೈತರ ಸಂಖ್ಯೆ ವಿರಳವಾಗಿದೆ ಎನ್ನುತ್ತಾರೆ.
ಒಟ್ಟಾರೆ ಮಾರುಕಟ್ಟೆದರಕ್ಕಿಂತ ೫೦೦ರೂ ಹೆಚ್ಚಿನ ದರ ನೀಡಿದ್ದರೂ ಸಹ ಖರೀದಿ ಕೇಂದ್ರದತ್ತ ಒಲವು ತೋರದ ರೈತರು ತಾವು ಬೆಳೆದ ಪದಾರ್ಥ ಹೇಗೇ ಇದ್ದರೂ ಪರವಾಗಿಲ್ಲ ಸ್ವಲ್ಪ ಬೆಲೆ ಕಡಿಮೆಮಾಡಿಕೊಂಡು ತಕ್ಷಣ ಹಣ ನೀಡುವ ವರ್ತಕರ ಬಳಿಯೇ ತೆರಳುತ್ತಿರುವುದು ವಿಪರ್ಯಾಸವೇ ಆಗಿದೆ.
----------
೪೭ ಜನ ರಾಗಿ ಮಾದರಿ ತಂದಿದ್ದು ಉತ್ತಮ ಗುಣಮಟ್ಟದಲ್ಲಿರುವ ೩೫ ಜನರ ರಾಗಿಯನ್ನು ಖರೀದಿಸಲು ಟೋಕನ್ ನೀಡಲಾಗಿದೆ. ನಾಳೆಯಿಂದ ಅವರ ಬಳಿ ಖರೀದಿ ಪ್ರಾರಂಭಿಸಲಾಗುವುದು: ಬಸವರಾಜು ಕರ್ನಾಟಕ ರಾಜ್ಯ ಆಹಾರ ಮತ್ತು ಸರಬರಾಜು ನಿಗಮ ನಿಯಮಿತದ ಅಧಿಕಾರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ