ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಹೋಬಳಿ ಸಮೀಪದ ಹಂದನಕೆರೆ ಪೊಲೀಸ್ ಠಾಣೆ ವತಿಯಿಂದ ಮತಿಘಟ್ಟದ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿ "ಅಪರಾಧ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ" ಕುರಿತು ಪ್ರಬಂಧ ಸ್ಪರ್ಧೆ ನಡೆಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಹಂದನಕೆರೆ ಪೋಲೀಸ್ ಠಾಣೆವತಿಯಿಂದ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಾರ್ತೀಕ್ ಕೆಡ್ಡಿ ಹಾಗೂ ಜಯಕುಮಾರ್ ಬಹುಮಾನ ವಿತರಿಸಲಾಯಿತು. |
ಬಹುಮಾನ ವಿತರಿಸಿದ ತಿಪಟೂರು ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಕಾರ್ತೀಕ್ ರೆಡ್ಡಿ ಮಾತನಾಡಿ, ಅಪರಾಧ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು, ಪ್ರತಿಯೊಬ್ಬರು ಕಾನೂನು ಪಾಲಸುವುದಲ್ಲದೆ, ನಮ್ಮ ಸುತ್ತಮುತ್ತಲಿನವರೂ ಸಹ ಕಾನೂನು ಉಲ್ಲಂಘನೆ ಮಾಡದಂತೆ ಅವರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಕಾಲಾಹರಣ ಮಾಡದೆ ಎಪಿಜೆ ಅಬ್ದುಲ್ ಕಲಾಂ ಅವರ ಆಶಯದಂತೆ ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಅಪರಾಧವನ್ನು ತಡೆಗಟ್ಟುವುದು ಎಷ್ಟು ಮುಖ್ಯವೋ ಅದರಂತೆ ಅಪರಾಧಿಗಳ ಬಗ್ಗೆ ಯಾರಿಗೂ ಹೆದರದೆ, ಯಾವುದೇ ಆಮೀಷಕ್ಕೂ ಒಳಗಾಗದೆ ತಮಗೆ ತಿಳಿದ ಸತ್ಯವನ್ನು ತಿಳಿಸಬೇಕು ಎಂದು ಕಿವಿಮಾತು ಹೇಳಿದರು.
ವೃತ್ತ ನಿರೀಕ್ಷಕ ಜಯಕುಮಾರ್ ಮಾತನಾಡಿ ದಿನದಿಂದ ದಿನಕ್ಕೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು , ಸಮಾಜದ ಸ್ವಾಸ್ಥ್ಯ ಹದಗೆಡುತ್ತಾ, ಶಾಂತಿ ಕದಡುತ್ತಿದೆ ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಶಾಲಾ ಹಂತದಲ್ಲಿ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದರಿಂದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುವಂತೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆ ಹಂದನಕೆರೆ ಠಾಣೆಯ ಪಿಎಸೈ ಸುನಿಲ್, ತಿಪಟೂರು ಗ್ರಾಮಾಂತರ ಠಾಣೆಯ ಪಿಎಸೈ ಅಶೋಕ್ ಕುಮಾರ್, ಪ್ರಾಂಶುಪಾಲ ಷಣ್ಮುಖಸ್ವಾಮಿ ಸೇರಿದಂತೆ ಪೊಲೀಸ್ ಸಿಬ್ಬಂದಿಯವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ