ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿರುವ ಒತ್ತುವರಿ ಜಾಗದಲ್ಲಿರುವ ಅಂಗಡಿಗಳ ಸರ್ವೆ ಕಾರ್ಯ ಮಂಗಳವಾರ ಉಪತಹಸೀಲ್ದಾರ್ ಸತ್ಯನಾರಾಯಣ್ ಹಾಗೂ ಆರ್.ಐ ಹನುಮಂತನಾಯ್ಕ್ ಅವರ ಸಮಕ್ಷಮದಲ್ಲಿ ನಡೆಯಿತು. ಒತ್ತುವರಿ ಮಾಡಿಕೊಂಡವರಿಗೆ ತಹಸೀಲ್ದಾರ್ ಅವರ ಆದೇಶದಂತೆ ಇಪ್ಪತ್ನಾಲ್ಕು ಘಂಟೆಯೊಳಗೆ ಅಂದರೆ ಬುಧವಾರ ಮಧ್ಯಾಹ್ನದೊಳಗಾಗಿ ತಮ್ಮ ಅಂಗಡಿಗಳನ್ನು ತೆಗೆಯುವಂತೆ ನೋಟಿಸ್ ಜಾರಿ ಮಾಡಲಾಯಿತು.
ಸಚಿವರು ಸಣ್ಣ ನಿರಾವರಿ ಇಲಾಖೆಗೆ ನೀಡಿರುವ ಟಿಪ್ಪಣಿ ಪತ್ರ. |
ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿರುವ ನೋಟಿಸ್ ಪತ್ರ. |
ತುಂಬಾ ಕುತೂಹಲ ಮೂಡಿಸಿದ್ದ ಸರ್ವೆ ಕಾರ್ಯ ಬೆಳಿಗ್ಗೆ ೧೦ ರಿಂದ ಪ್ರಾರಂಭವಾಗಿ ಮಧ್ಯಾಹ್ನದವರೆಗೂ ನಡೆಯಿತು. ಪಟ್ಟಣದ ಯೂಸೂಪ್ ಖಾನ್ ಪೆಟ್ರೋಲ್ ಬಂಕ್ ಹಾಗೂ ಒಣಕಾಲುವೆ ಕಡೆಯಿಂದ ಆಳತೆ ಪ್ರಾರಂಭಿಸಿ ಬಸ್ ನಿಲ್ದಾಣದ ಮೂಲಕ ಕೆರೆ ಏರಿಯ ತೂಬಿನವರೆಗೆ ಆಳತೆ ನಡೆಸಿ ಕೆರೆಯ ಗಡಿ ಗುರ್ತಿಸಲಾಯಿತು. ಅಲ್ಲದೆ ಶಂಕರಪುರ ಬಡಾವಣೆ ಭಾಗದಲ್ಲಿನ ಕೆರೆ ಅಂಗಳವನ್ನು ಸಹ ಸರ್ವೆ ಮಾಡಿ ಗಡಿ ಗುರ್ತಿಸಲಾಯಿತು. ಹುಳಿಯಾರು ಕೆರೆಯು ಸದ್ಯದ ಸರ್ವೆಯಂತೆ ಸರಿಸುಮಾರು ೩೮ ರಿಂದ ೪೦ ಎಕರೆಯಷ್ಟು ಒತ್ತುವರಿಯಾಗಿದ್ದು ಕೋಟ್ಯಾಂತರ ರೂಪಾಯಿ ಬೆಲೆ ಬಾಳಲಿದೆ ಎನ್ನಲಾಗಿದೆ.ಸಂಪೂರ್ಣ ಸರ್ವೆ ಹಾಗೂ ತೆರವು ಮುಗಿದ ಬಳಿಕವಷ್ಟೆ ನಿಖರ ಮಾಹಿತಿ ದೊರೆಯಲಿದೆ ಎಂದು ಸರ್ವೆಯರ್ ಬಸವರಾಜ್ ತಿಳಿಸಿದರು.
ಸಚಿವರ ಪತ್ರ: ಕೆರೆಅಂಗಳದ ಅಂಗಡಿಯವರು ಅಂಗಡಿ ತೆರವಿನ ವಿಚಾರವಾಗಿ ಕಾನೂನು ಸಚಿವರನ್ನು ಭೇಟಿ ಮಾಡಿ ಕಾಲಾವಕಾಶ ಕೋರಿದ್ದು, ಈ ಬಗ್ಗೆ ಸಚಿವರು ಸಣ್ಣ ನೀರಾವರಿ ಅಧಿಕಾರಿಯವರಿಗೆ ತೆರವಿನ ಬಗ್ಗೆ ತಮ್ಮೊಂದಿಗೆ ಚರ್ಚಿಸಿ ನಂತರವಷ್ಟೆ ಮುಂದುವರೆಯಿರಿ ಎಂದು ಸೂಚಿಸಿ ಪತ್ರ ನೀಡಿದ್ದು ಸದ್ಯ ಅಂಗಡಿದಾರರಿಗೆ ನೀರಾಳವಾಯಿತೆನ್ನುವಷ್ಟರಲ್ಲಿ ಕಂದಾಯ ಇಲಾಖೆಯಿಂದ ನೋಟೀಸ್ ನೀಡಿರುವುದು ಗೊಂದಲಕ್ಕೆಡೆ ಮಾಡಿದೆ.
ನೋಟಿಸ್ ವಿತರಣೆ: ಸರ್ವೆ ಮುಗಿದ ಬಳಿಕ ತಹಸೀಲ್ದಾರ್ ಅವರ ಆದೇಶದಂತೆ ೨೪ ಗಂಟೆಯೊಳಗಾಗಿ ಅಂಗಡಿಗಗಳನ್ನು ತೆರವುಗೊಳಿಸುವಂತೆ ತಿಳುವಳಿಕೆ ನೋಟಿಸ್ ನೀಡಲಾಗಿದೆ. ಕಾನೂನು ಸಚಿವರು ನೀಡಿರುವ ಪತ್ರವನ್ನು ತಹಸೀಲ್ದಾರಿಗೆ ನೀಡಲಾಗಿದ್ದರೂ ಸಹ ನೋಟೀಸ್ ನೀಡಿರುವುದು ಸರಿಯಲ್ಲ ಎಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ೨೪ಗಂಟೆ ಒಳಗಾಗಿ ತೆರವು ಮಾಡಿ ಎಂದರೆ ನಾವು ಎಲ್ಲಿಗೆ ಹೋಗೋದು ಮೂರ್ನಾಲ್ಕು ದಿನಗಳ ಕಾಲಾವಾಶ ಕೊಟ್ಟರೆ ಅಂಗಡಿಗಳನ್ನು ತೆಗೆಯುತ್ತೇವೆ ಎಂದಿದ್ದಾರೆ. ಮತ್ತೆ ಕೆಲ ಅಂಗಡಿಯವರು ಕೆರೆಅಂಗಳದಲ್ಲಿರುವ ಮನೆಗಳನ್ನು ಸಹ ತೆರವು ಮಾಡಿಸಿದಲ್ಲಿ ಮಾತ್ರವೇ ಅಂಗಡಿ ತೆಗೆಯಲು ಮುಂದಾಗಿ ಎಂದು ತಗಾದೆ ತೆಗೆದಿದ್ದಾರೆ.
ಒಟ್ಟಾರೆ ನೋಟೀಸ್ ಪಡೆದವರೆಲ್ಲಾ ಪ್ರಮುಖರ ಮೂಲಕ ತಹಸೀಲ್ದಾರ್ ಅವರಿಗೆ ಒತ್ತಡ ತಂದು ಕಾಲಾವಕಾಶ ಕೋರಿದ್ದಲ್ಲದೆ ಮನವಿ ಸಹ ಸಲ್ಲಿಸಿದ್ದಾರೆ. ತಹಸೀಲ್ದಾರ್ ಅವರು ಮಾತ್ರ ಮೇಲಾಧಿಕಾರಿಗಳ ಆದೇಶದಂತೆ ತಾವು ಕಾರ್ಯಪ್ರವೃತ್ತರಾಗಿದ್ದು, ನಿಗಧಿತ ಅವಧಿಯೊಳಗೆ ತೆರವು ಮಾಡಲೇ ಬೇಕಾದ ಪರಿಸ್ಥಿತಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.ಒಟ್ಟಾರೆ ತೆರವು ಕಾರ್ಯಾಚರಣೆ ನಡೆಯುತ್ತದೆಯೀ ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.
ಸರ್ವೆ ವೇಳೆಯಲ್ಲಿ ಕಂದಾಯ ಇಲಾಖೆಯ ಗ್ರಾಮಲೆಖ್ಖಿಗರಾದ ಶ್ರೀನಿವಾಸ್, ಸುಬ್ಬರಾಯಪ್ಪ,ನೀಲಕಂಠಯ್ಯ,ಸುರೇಶ್,ಮಂಜುನಾಥ್ ಸಿಬ್ಬಂದಿವರ್ಗದ ರಘುನಂದನ್,ಮೂರ್ತಿ,ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ