ಚಳಿಗಾಲದ ಡಿಸೆಂಬರ್ ನಲ್ಲಿ ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಅವರೆಕಾಯಿಯದ್ದೇ ಸಾಮ್ರಾಜ್ಯವಾಗಿದ್ದು . ಉತ್ತಮ ಮಳೆ ಹಾಗೂ ಇಬ್ಬನಿಯ ವಾತಾವರಣ ಅವರೆಕಾಯಿಗೆ ಬಲುಪೂರಕವಾಗಿ ಬಂಪರ್ ಬೆಳೆ ಬಂದಕಾರಣ ಬೆಲೆ ಸಸ್ತವಾಗಿ ಬೆಳೆಗಾರರು ಕಣ್ ಕಣ್ ಬಿಡುವಂತಾದರೆ ಗ್ರಾಹಕರಲ್ಲಿ ಮಾತ್ರ ಮಂದಹಾಸ ಮೂಡಿಸಿದೆ.
ಹುಳಿಯಾರಿನ ರಾಜ್ ಕುಮಾರ್ ರಸ್ತೆಯ ಅಂಗಡಿಗಳ ಮುಂದೆ ಅವರೆಕಾಯಿ ರಾಶಿಹಾಕಿಕೊಂಡು ಮಾರಾಟದಲ್ಲಿ ನಿರತರಾಗಿರುವ ರೈತರು. |
ಪ್ರಕೃತಿಯಲ್ಲಿ ಒಂದೊಂದು ಕಾಲಕ್ಕೂ ಒಂದೊಂದು ರೀತಿಯ ಹಣ್ಣು,ತರಕಾರಿಗಳ ಸೀಸನ್ ಇದ್ದು ಅಂತೆಯೇ ಚಳಿಗಾಲದ ವೇಳೆ ಅಂದರೆ ಡಿಸೆಂಬರ್ ನಿಂದ ಶುರುವಾಗಿ ಜನವರಿ ಅಂತ್ಯದವರೆಗೂ ಅವರೆಕಾಯಿಯದ್ದೇ ಕಾರುಬಾರಾಗಿರುತ್ತದೆ.
ಊರಿನ ಎಲ್ಲೆಲ್ಲೂ ಅವರೆಕಾಯಿಯದ್ದೇ ಕಲರವವಾಗಿದ್ದು ಬೀದಿಬೀದಿಯಲ್ಲೂ ಅವರೆಕಾಯಿಜ್ವರ ವ್ಯಾಪಿಸಿದೆ.ಸಗಟುದರ ೧೦ರೂಗೆ ಮಾರಾಟವಾಗುವ ಅವರೆ ಚಿಲ್ಲರೆಯಾಗಿ ತಳ್ಳುಗಾಡಿ ಹಾಗೂ ಅಂಗಡಿಗಳಲ್ಲಿ ೧೫ ರಿಂದ ೨೦ರೂಗೆ ಮಾರಾಟವಾಗುತ್ತಿದೆ. ಸೊಗಡವರೆಗೆ ಇನ್ನಿಲ್ಲದ ಬೇಡಿಕೆಯಿದ್ದು ಪಟ್ಟಣದ ಬೀದಿ ಬೀದಿಗಳಲ್ಲಿ ಅವರೆಕಾಯ್ ಅವರೆಕಾಯ್ ಕೆಜಿ ೧೫-೨೦ ಎಂದು ಕೂಗುತ್ತಾ ಮಾರಾಟ ಮಾಡುವವರು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಮಾಗಿ ಸಮಯದಲ್ಲಿ ಸಿಗುವ ಅವರೆ ತುಂಬ ರುಚಿಯಾಗಿದ್ದು ಬಾಯಿಗೆ ಹಿತವಾಗಿರುವ ಕಾರಣದಿಂದ ಎಲ್ಲರೂ ಅವರೆ ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಪ್ರಾರಂಭದಲ್ಲಿ ಕೆ.ಜಿಗೆ ೪೦ರಂತೆ ವಾರಗಳ ಕಾಲ ಮಾರಾಟವಾದ ಅವರೆಕಾಯಿ ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಸಸ್ತಾ ಆಗಿದ್ದು ಕೆಜಿಗೆ ೧೫ ರಿಂದ ೨೦ ರೂಗಳ ಅಸುಪಾಸಿನಲ್ಲಿದೆ. ಈಗ ಎಲ್ಲೆಡೆ ಅವರೆಕಾಯಿ ಬಂದಿರುವುದರಿಂದ ಬೆಲೆ ಕಡಿಮೆ ಎನ್ನಬಹುದು ಆದರೆ ಅವರೆಕಾಯಿ ಸಿಸನ್ ಮುಗಿಯುವ ಹಂತ ಸಮೀಪಿಸುತ್ತಿದ್ದಂತೆ ಬೆಲೆಯಲ್ಲಿಯೂ ಸಹ ಹೆಚ್ಚಳವಾಗಲಿದೆ.
ಅವರೆಕಾಯಿ ಸಾಮಾನ್ಯವಾಗಿ ಹಿಂಗಾರು ಬೆಳೆಯಾಗಿದ್ದು ರಾಗಿ ,ಸಾವೆ ಸೇರಿದಂತೆ ಇನ್ನಿತ ಪ್ರಮುಖ ಬೆಳೆಗಳ ಅಕ್ಕಡಿ ಸಾಲಿನಲ್ಲಿ ಅವರೆಯನ್ನು ಬಿತ್ತುತ್ತಾರೆ. ೪೫ ದಿನನದಲ್ಲಿ ಹೂಬಿಟ್ಟು ಇಬ್ಬನಿಗೆ ಕಾಯಿಕಚ್ಚುವ ಇದಕ್ಕೆ ವರ್ಷವಿಡಿ ಬೇಡಿಕೆ ಹೆಚ್ಚಿರುವುದರಿಂದ ಇತ್ತೀಚೆಗೆ ಇದನ್ನು ಸಂಪೂರ್ಣ ಹೊಲ,ತೋಟಗಳಲ್ಲಿ ಹಾಕಿ ಮಳೆಯಾಶ್ರಿತ ಹಾಗೂ ನೀರಾವರಿ ಮೂಲಕವೂ ಸಹ ಹೆಚ್ಚೆಚ್ಚು ಬೆಳೆಯುತ್ತಾರೆ. ಆದರೆ ಹೊಲದಲ್ಲಿ ಮಳೆಯಾಶ್ರಯದಲ್ಲಿ ಬೆಳೆದ ಅವರೆಕಾಳು ಮಾತ್ರ ಹೆಚ್ಚು ಸೊಗಡಿನಿಂದ ಕೂಡಿರುವುದರಿಂದ ಜನ ಮಳೆಯಾಧರಿತ ಕಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ.
ಏನೇನು ಮಾಡುತ್ತಾರೆ : ಅವರೆಕಾಳು ಸೀಸನ್ ಶುರುವಾಯಿತೆಂದರೆ ಅವರೆಕಾಯಿಯ ಉಪ್ಪಿಟ್ಟು,ರೊಟ್ಟಿ ಹಾಗೂ ಕರಿದಕಾಳಿಗೆ ಹೆಚ್ಚಿನ ಆದ್ಯತೆ. ನಿತ್ಯದ ಅಡುಗೆಯಲ್ಲಿ ಬೇಳೆಬದಲು ಅವರೆಕಾಳಿನ ಸಾರು ಹೆಚ್ಚೆಚ್ಚು ಮಾಡುತ್ತಾರೆ. ಅಲ್ಲದೆ ಅವರೆಕಾಯಿಯನ್ನು ಸಿಪ್ಪೆ ಸಮೇತ ಬಿಸಿನೀರಲ್ಲಿ ಬೇಯಿಸಿ ತಿನ್ನುವುದಲ್ಲದೆ, ಅವರೆಕಾಯಿಯ ಸಿಪ್ಪೆ ತೆಗೆದು ಅದನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಹಿಸುಗವರೆಕಾಯಿ ಪದಾತ ಮಾಡುತ್ತಾರೆ. ಇಂತಹ ಅನೇಕ ಖಾದ್ಯಗಳನ್ನು ಅವರೆಕಾಯಿಯಿಂದ ತಯಾರಿಸಿ ಬಾಯಿಚಪ್ಪರಿಸಿ ತಿನ್ನುತ್ತಾರೆ.ಇದು ಅವರೆಕಾಯಿ ಸಿಸನ್ ನಲ್ಲಿ ಮಾತ್ರ. ಉಳಿದಂತೆ ಅವರೆಕಾಯಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರೆಕಾಳನ್ನು ಒಣಗಿಸಿ ಶೇಖರಿಸಿಟ್ಟುಕೊಂಡು ನಿತ್ಯದ ಅಡುಗೆಯಲ್ಲಿ ಸಾಂಬಾರ್ ಮಾಡಲು ಬಳಸುತ್ತಾರೆ.
ಬೆಳೆಯೋದೆಲ್ಲಲ್ಲಿ: ಹೋಬಳಿಯ ಸುತ್ತಮುತ್ತಲ ಹಳ್ಳಿಗಳಾದ ತಮ್ಮಡಿಹಳ್ಳಿ,ಕೆಂಕೆರೆ,ಯಳನಡು,ಸೂರಗೊಂಡನಹಳ್ಳಿ,ಕೋರಗೆರೆ,ಉಪ್ಪಾರಹಳ್ಳಿ ಎಣ್ಣೆಗೆರೆ,ಬರಕನಹಾಲ್, ದಸೂಡಿ,ದಬ್ಬಗುಂಟೆ,ಹೊಯ್ಸಳಕಟ್ಟೆ,ಗಾಣಧಾಳು ಸೇರಿದಂತೆ ಇನ್ನಿತರ ಹಳ್ಳಿಯಲ್ಲಿ ಹೆಚ್ಚಾಗಿ ಅವರೆಕಾಯಿ ಬೆಳೆಯಲಿದ್ದು ರೈತರು ಹುಳಿಯಾರಿಗೆ ತಂದು ಮಾರಾಟ ಮಾಡುತ್ತಾರೆ.
ಎಲ್ಲೆಲ್ಲೂ ಹೆಚ್ಚಿದ ಮಾರಾಟ: ಈ ಬಾರಿ ಅವರೆಗಿಡ ಕಾಯಿಕಟ್ಟುವ ಸಮಯದಲ್ಲಿ ಹದಮಳೆ ಹಾಗೂ ಹೆಚ್ಚು ಇಬ್ಬನಿ ಸುರಿದ ಕಾರಣ ಕೀಟಬಾಧೆಯಿಂದ ಮುಕ್ತವಾಗಿ ಬಂಪರ್ ಬೆಳೆ ಬಂದಿದು ಅವರೆಕಾಯಿ ಬೆಲೆಯನ್ನು ಇಳಿಯುವಂತೆ ಮಾಡಿದೆ. ಹೆಚ್ಚು ಬೆಳೆ ಬಂದಿರುವುದರಿಂದ ಕೊಳ್ಳಲು ವ್ಯಾಪಾರಸ್ಥರು ಮುಂದಾಗದೆ,ಬಾಯಿಗೆಬಂದಷ್ಟು ಬೆಲೆ ಕೇಳುವ ಹಿನ್ನಲೆಯಲ್ಲಿ ಎಲ್ಲಿ ಮಾರೋದು ಎಂಬ ಚಿಂತೆಯಿಂದ ರೈತರೇ ಸ್ವತ; ತಾವೇ ಮಾರಾಟ ಮಾಡಲು ಮುಂದಾಗಿ ಪಟ್ಟಣದೆಲ್ಲೆಡೆ ತಿರುಗುತ್ತಾ,ರಸ್ತೆಬದಿಯಲ್ಲಿ ಚೀಲಗಳನ್ನು ಇಟ್ಟುಕೊಂಡು ಮಾರುವ ದೃಶ್ಯ ಸಾಮಾನ್ಯವಾಗಿದೆ.
ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆಯಲ್ಲಿ ಅವರೆಕಾಯಿ ಮಾರಾಟ ಹೆಚ್ಚಾಗಿದ್ದು ನಾಮೇಲೂ, ತಾಮೇಲೂ ಎಂಬಂತೆ ಬಿಸಿಲನ್ನು ಲೆಖ್ಖಿಸದೇ ಕೆಜಿ ೧೫-೨೦ ಎಂದು ಕೂಗುತ್ತಾ ರೈತರೇ ಮಾರಾಟದಲ್ಲಿ ತೊಡಗಿರುವ ದೃಶ್ಯ ಕಂಡುಬರುತ್ತಿದೆ.
ಉತ್ತಮ ಬೆಳೆಯಿದ್ದಾಗ ಬೆಲೆ ಸಿಗಲ್ಲ, ಉತ್ತಮ ಬೆಲೆ ಬಂದಾಗ ನಮ್ಮ ಹತ್ತಿರ ಬೆಳೆ ಇರಲ್ಲ ಈ ಬಾರಿ ಅವರೆ ಚೆನ್ನಾಗಿ ಬಂದಿದ್ದರೂ ಸಹ ಅದಕ್ಕೆ ಹಾಕಿದ ಗೊಬ್ಬರ,ಬಳಸಿದ ಕೀಟನಾಶಕಕ್ಕೆ ಖರ್ಚು ಮಾಡಿದ ಹಣ ತೆಗೆಯುವುದೆ ಕಷ್ಟವಾಗಿದೆ. ಪ್ರಾರಂಭದಲ್ಲಿ ಕೆಜಿಗೆ ೩೦ರೂ ಇತ್ತು, ಈಗ ಕಡಿಮೆಯಾಗಿರುವುದು ನಮ್ಮನ್ನ ಸಂಕಷ್ಟಕ್ಕೆ ತಳ್ಳಿದೆ ಈಗಾದರೆ ನಾವೇನು ಮಾಡುವುದು, ಕೆಜಿಗೆ ೧೫ರೂ ಎಂದರೂ ಸಹ ಕೊಳ್ಳುವವರು ಅದರಲ್ಲೂ ಚೌಕಾಸಿ ಮಾಡುತ್ತಾರೆಂದು ರೈತ ಪುರದಮಠದ ಬಸಜ್ಜ ನಿರಾಸಕ್ತಿಯಿಂದ ನುಡಿಯುತ್ತಾರೆ.
ಒಟ್ಟಾರೆ ಈಬಾರಿ ಅವರೆ ಬಂಪರ್ ಬೆಳೆಯಾಗಿದ್ದರೂ ಸಹ ಉತ್ತಮ ಬೆಲೆಯಿಲ್ಲದೆ ರೈತರಿಗೆ ಶಾಪವಾಗಿದ್ದರೆ ಕೊಳ್ಳುವವರಿಗೆ ವರವಾಗಿದ್ದು ಕೆಜಿಗಟ್ಟಲೇ ಅವರೆ ಕೊಂಡು ಅವರೆಕಾಳಿನ ಸವಿಸವಿಯುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ