ಹುಳಿಯಾರು ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ಸಾರ್ವಜನಿಕರು ನಿತ್ಯ ಪರಿತಪಿಸುತ್ತಿದ್ದು, ವೈದ್ಯರನ್ನು ಖಾಯಂ ಆಗಿ ನೇಮಿಸುವಂತೆ ಒತ್ತಾಯಿಸಿ ರೈತ ಸಂಘದವರು ಆಸ್ಪತ್ರೆ ಮುಂಭಾಗದಲ್ಲಿ ಬುಧವಾರದಂದು ಠಿಕಾಣಿ ಹಾಕಿ ಧರಣಿ ನಡೆಸಿದರು.
![]() |
ಹುಳಿಯಾರು ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಿರತರಾಗಿರುವ ರೈತ ಸಂಘದವರು. |
ಬುಧವಾರ ಬೆಳಿಗ್ಗೆ ನಡೆದ ಅಪಘಾತದಲ್ಲಿ ಸುಮಾರು ೧೪ ಮಕ್ಕಳಿಗೆ ಪೆಟ್ಟಾಗಿ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಗಾಯಾಳುಗಳು ಪರಿತಪಿಸುವಂತಾಗಿತ್ತು. ಈ ಸಮಸ್ಯೆ ಇಂದು ನೆನ್ನೆಯದಾಗಿರದೆ ಯಾವುದೇ ಅಪಘಾತಗಳು ಸಂಭವಿಸದರೂ ಸಹ ಇಲ್ಲಿ ಚಿಕಿತ್ಸೆ ನೀಡಲು ವೈದ್ಯರಾಗಲಿ, ನರ್ಸ್ ಗಳಾಗಲಿ ಇಲ್ಲದೆ , ಇಲ್ಲಿಗೆ ಬಂದ ಅನೇಕ ರೋಗಿಗಳು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ ಘಟನೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಆಸ್ಪತೆಗೆ ಖಾಯಂ ವೈದ್ಯರನ್ನು ಶೀಘ್ರವೇ ನೇಮಿಸುವಂತೆ ಸರ್ಕಾವನ್ನು ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ ಕಳೆದ ಕೆಲ ವರ್ಷದಿಂದ ಖಾಯಂ ವೈದ್ಯರಿಲ್ಲ ಎಂಬುದು ಇಲ್ಲಿನ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಸಹ ಅವರು ಯಾವುದೇ ಕ್ರಮಕೈಗೊಂಡಿಲ್ಲ ಹಾಗೂ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದವರಾಗಿದ್ದು, ಕ್ಷೇತ್ರದಲ್ಲಿನ ಸಮಸ್ಯೆಯನ್ನು ಅರಿತವರಾಗಿದ್ದರೂ ಇದುವರೆಗೂ ಈ ಸಮಸ್ಯೆಗೆ ಸ್ಪಂದಿಸಿಲ್ಲವೆಂದು ಪ್ರತಿಭಟನಾ ನಿರತರು ದೂರಿದ್ದಾರೆ.
ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ ಎಂದು ಹಲವಾರು ಬಾರಿ ಪ್ರತಿಭಟನೆ ಮಾಡಿ, ಟಿ.ಎಚ್,ಓ , ಡಿ,ಎಚ್,ಓ ಹಾಗೂ ಆರೋಗ್ಯ ಸಚಿವರಿಗೂ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ಇದುವರೆಗೂ ಖಾಯಂ ವೈದ್ಯರನ್ನು ನೇಮಿಸಿಲ್ಲ. ಇದರಿಂದ ಆಸ್ಪತ್ರೆಗೆ ನಿತ್ಯ ಬರುವ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಿದೆ. ಈಗ ಸದ್ಯ ಗುತ್ತಿಗೆ ಆಧಾರದ ಮೇಲೆ ವೈದ್ಯರಿದ್ದು ಅವರನ್ನು ಸಹ ಮತ್ತೊಂದು ಆಸ್ಪತ್ರೆಗೆ ಹಾಕಿದ್ದು ಎರಡು ದಿನ ಇಲ್ಲಿ ಮತ್ತೆರಡು ದಿನ ಬೇರೊಂದು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ಯಾವುದಾದರೂ ಅಪಘಾತ ಸಂಭವಿಸಿ ಆಸ್ಪತ್ರೆಗೆ ಬಂದರೆ ಪ್ರಥಮ ಚಿಕಿತ್ಸೆ ನೀಡಲು ಯಾರೂ ಇಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ.
ಬೆಳಗಿನನಿಂದ ಧರಣಿ ಕೂತು ಸಂಜೆಯಾಗುತ್ತಾ ಬಂದರೂ ಸಹ ಆರೋಗ್ಯ ಇಲಾಖೆಯ ಯಾರೊಬ್ಬ ಅಧಿಕಾರಿಯೂ ಸಹ ಬಂದು ಈ ಬಗ್ಗೆ ವಿಚಾರಿಸಿಲ್ಲ , ಟಿ.ಎಚ್.ಓ ಹಾಗೂ ಡಿ.ಎಚ್.ಓ ಅವರುಗಳು ಬಂದು ಏನೇ ಸಬೂಬು ಹೇಳಿದರು ತಾವು ಕೇಳುವುದಿಲ್ಲ, ಅವರು ಇದುವರೆಗೂ ಹೇಳಿರುವುದನ್ನು ಕೇಳಿದ್ದು ಸಾಕಾಗಿದೆ. ಆರೋಗ್ಯ ಸಚಿವರೇ ಖುದ್ದು ಇಲ್ಲಿಗೆ ಬಂದು ಖಾಯಂ ವೈದ್ಯರನ್ನು ಹಾಕುವುದಾಗಿ ಹೇಳಲಿ ಅಥವಾ ತಮ್ಮಿಂದ ಆಗುವುದಿಲ್ಲ ತಮ್ಮ ಸರ್ಕಾರ ಸತ್ತು ಹೋಗಿದೆ ಎಂದು ಹೇಳಲ್ಲಿ ಆಗ ತಮ್ಮ ಧರಣಿಯನ್ನು ಹಿಂಪಡೆಯುವುದಾಗಿ ರೈತ ಸಂಘದ ಕೆಂಕೆರೆ ಸತೀಶ್ ತಿಳಿಸಿದ್ದಾರೆ.
ಟಿ.ಎಚ್.ಒ ಭೇಟಿ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಟಿ.ಎಚ್.ಓ ಅವರು ಧರಣಿ ನಿರತರ ಮನವೊಲಿಸಲು ಮುಂದಾದರು. ಆದರೆ ಧರಣಿನಿರತರು ಆಸ್ಪತ್ರೆಯಲ್ಲಿನ ಸಂಪೂರ್ಣ ಸಮಸ್ಯೆಗಳನ್ನು ಅವರ ಮುಂದೆ ಬಿಚ್ಚಿಟ್ಟು ಈ ಎಲ್ಲಾ ಸಮಸ್ಯೆಗಳನ್ನು ನಿಮ್ಮಿಂದ ಪರಿಹರಿಸಲು ಸಾಧ್ಯವೇ ಎಂದು ಪಟ್ಟು ಹಿಡಿದರು.
ಒಟ್ಟಾರೆ ಪಟ್ಟಣದ ಆಸ್ಪತೆಗೆ ಖಾಯಾಂ ವೈದ್ಯರನ್ನು ನೇಮಿಸುವವರೆಗೂ ಈ ಧರಣಿ ಮುಂದುವರೆಯಲಿದ್ದು , ಅದೆಷ್ಟು ದಿನಗಳಾದರೂ ಆಗಲಿ ಎಂಬ ಬಿಗಿಪಟ್ಟು ಹಿಡಿದಿರುವ ರೈತಸಂಘದವರು ಆರೋಗ್ಯ ಸಚಿವರೇ ಸ್ಥಳಕ್ಕಾಗಮಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಲ್ಲಿಕಣ್ಣ,ಕೆ.ಪಿ.ಮಲ್ಲೇಶ್,ಪಾತ್ರೆ ಸತೀಶ್, ಹೂವಿನ ರಘು,ಇಮ್ರಾಜ್, ಶಿವಕುಮಾರ್, ಡಿ.ಕೆ.ರಮೇಶ್ ಸೇರಿ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ