ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ಖಾತ್ರಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ಆಹೋರಾತ್ರಿ ಧರಣಿ ಇಓ ಅವರ ಭರವಸೆಯೊಂದಿಗೆ ಶನಿವಾರ ರಾತ್ರಿ ಮುಕ್ತಾಯವಾಯಿತು.
ಶುಕ್ರವಾರದಂದು ಗ್ರಾ.ಪಂ. ಎದುರು ಧರಣಿ ಪ್ರಾರಂಭಿಸಿದ್ದ ಫಲಾನುಭವಿಗಳು ಬಿಗಿಪಟ್ಟು ಹಿಡಿದು ಅಧಿಕಾರಿಗಳೇ ಇಲ್ಲಿಗೆ ಬಂದು ತಮ್ಮ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಆಹೋರಾತ್ರಿ ಧರಣಿ ಕೈಗೊಂಡಿದ್ದರು. ಆದರೆ ಯಾವ ಅಧಿಕಾರಿಯೂ ಇಲ್ಲಿಗೆ ಬಾರದ ಹಿನ್ನಲೆಯಲ್ಲಿ ಶನಿವಾರದಂದು ಪಿಡಿಓ ಹಾಗೂ ಕಾರ್ಯದರ್ಶಿಯವರಿಗೆ ದಿಗ್ಬಂಧನ ಹಾಕಿ ಹಿಡಿದಿಟ್ಟುಕೊಂಡಿದ್ದರು. ಈ ವಿಷಯ ತಿಳಿದ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಶನಿವಾರ ರಾತ್ರಿ ೮.೩೦ರ ವೇಳೆಗೆ ಧರಣಿನಿರತ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲು ಸ್ವೀಕರಿಸಿದರು.
ತಮ್ಮ ಸಮಸ್ಯೆಗಳನ್ನು ಆಲಿಸದ ಅಧಿಕಾರಿಗಳ ವಿರುದ್ದ ಆಕ್ರೋಶಿತರಾಗಿದ್ದ ಧರಣಿನಿರತರು ಸ್ಥಳಕ್ಕೆ ಬಂದ ಇಓ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರಲ್ಲದೆ, ಬಾಕಿ ಇರುವ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ರೈತರ ಸಂಕಷ್ಟವನ್ನು ತಿಳಿಯದೆ ಈ ರೀತಿ ಚಲ್ಲಾಟವಾಡುವುದು ಸರಿಯೇ , ತಾವು ಮಾಡಿರುವ ಕಾಮಗಾರಿಗಳಲ್ಲಿ ಲೋಪವೇನಾದರೂ ಇದೆಯೇ, ಸರ್ಕಾರದಿಂದ ಹಣ ಬರುತ್ತದೆಂಬ ನಂಬಿಕೆಯಿಂದ ಸಾಲ ಮಾಡಿ ದನದಕೊಟ್ಟಿಗೆ,ಶೌಚಾಲಯ,ಪಿಕಪ್ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಮಾಡಿದ್ದೆವು. ಈಗ ಈರೀತಿ ಹಣ ಕೊಡಲು ಸತಾಯಿಸುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯಾರೂ ಈ ಕಾರ್ಯಗಳನ್ನು ಮಾಡಲು ಸಾರ್ವಜನಿಕರು ಮುಂದಾಗುವುದಿಲ್ಲ .
ಧರಣಿ ನಿರತರ ಬೇಡಿಕೆಗಳನ್ನು ಆಲಿಸಿದ ಇಓ ಅವರು ತಮ್ಮೆಲ್ಲ ಸಮಸ್ಯೆಗಳ ಬಗ್ಗೆ ಅರಿವಿದೆ. ಕೆಲವೆಡೆ ಕಾಮಗಾರಿಗಳು ಸೂಕ್ತರೀತಿಯಲ್ಲಿ ಆಗಿಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ. ಕೂಡಲೇ ಖಾತ್ರಿ ಯೋಜನೆಯಡಿ ಬಾಕಿ ಇರುವ ಹಣವನ್ನು ಮಂಜೂರು ಮಾಡುವ ಭರವಸೆಯಿತ್ತು ಧರಣಿ ನಿರತ ಮನವೊಲಿಸಿ ಧರಣಿ ಕೈಬಿಡುವಂತೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ