ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ ಹಾಗೂ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ನಿತ್ಯ ಸಾರ್ವಜನಿಕರು ಪರದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಆಸ್ಪತ್ರೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಿಕೊಡುವುದಾಗಿಯೂ , ಇನ್ನೊಂದು ತಿಂಗಳೊಳಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿಯೂ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ ಅವರು ಭರವಸೆ ನೀಡುವ ಮೂಲಕ ರೈತ ಸಂಘದವರು ಬುಧವಾರ ಪ್ರಾರಂಭಿಸಿದ ಧರಣಿಯನ್ನು ಹಿಂಪಡೆಯುವಂತೆ ಮಾಡಿದರು.
![]() |
ಹುಳಿಯಾರು ಆಸ್ಪತ್ರೆ ಸಮಸ್ಯೆ ಬಗ್ಗೆ ಪ್ರತಿಭಟನಾಕಾರರೊಂದಿಗೆ ಚರ್ಚಿಸುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ. |
ಹುಳಿಯಾರು ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕಾತಿ ಹಾಗೂ ಮೇಲ್ದರ್ಜೆಗೆ ಏರಿಸುವ ಕುರಿತಂತೆ ಬುಧವಾರದಿಂದ ರೈತ ಸಂಘಟನೆ ಪ್ರಾರಂಭಿಸಿದ್ದ ಅನಿರ್ದಿಷ್ಟಾವಧಿಯ ಧರಣಿಯ ಸ್ಥಳಕ್ಕೆ ಆಗಮಿಸಿದ ಅವರು ರೈತ ಸಂಘದ ಪದಾಧಿಕಾರಿಗಳ ಸಮಸ್ಯೆ ಆಲಿಸಿ ಆನಂತರ ಮೇಲಿನಂತೆ ಭರವಸೆ ನೀಡಿದರು.
ತಾವಿನ್ನು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನೇಮಕವಾಗಿ ನಾಲ್ಕುದಿನಗಳಷ್ಟೆ ಕಳೆದಿದ್ದು ಹುಳಿಯಾರು ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿನ ಸಮಸ್ಯೆಗಳ ಬಗ್ಗೆ ತಾಲ್ಲೂಕ್ ವೈದ್ಯಾಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದು, ಅಗತ್ಯ ಸೌಕರ್ಯ ಕಲ್ಪಿಸುವ ಬಗ್ಗೆ ಪಟ್ಟಿ ಸಿದ್ದಪಡಿಸಲಾಗುತ್ತಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಪ್ರಸ್ಥಾವನೆ ಸಲ್ಲಿಸುವುದಾಗಿ ತಿಳಿಸಿದರು.
ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಹಾಗೂ ನರ್ಸ್ ಗಳ ನೇಮಕಾತಿಗೆ ಜಿಲ್ಲಾಧಿಕಾರಿಗಳ ಕಛೆರಿಗೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ ಅವರು ಹುಳಿಯಾರು ಆಸ್ಪತ್ರೆಗೆ ಬೇಕಾದ ಅಗತ್ಯ ಔಷಧಗಳನ್ನು ಶೀಘ್ರವೇ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಸದ್ಯ ದಿನದ ೨೪ ಗಂಟೆಯೂ ವೈದ್ಯರು ಲಭ್ಯವಾಗುವ ಹಾಗೆ ಬೇರೆ ಆಸ್ಪತ್ರೆಗಳಿಂದ ತಾತ್ಕಾಲಿಕವಾಗಿ ವೈದ್ಯರನ್ನು ನಿಯೋಜನೆ ಮಾಡುವುದಾಗಿ ತಿಳಿಸುವ ಮುಖಾಂತರ ಧರಣಿ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ಧರಣಿ ಹಿಂಪಡೆದ ರೈತ ಸಂಘ: ಹುಳಿಯಾರು ಆಸ್ಪತ್ರೆ ಸಮಸ್ಯೆ ಸಾಕಷ್ಟು ವರ್ಷದಿಂದ ಬಗೆಹರಿಯದಿದ್ದು ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ವಿವಿಧ ಸಂಘ ಸಂಸ್ಥೆಗಳೊಂದಿಗೆ ಅನಿರ್ದಿಷ್ಟಾವಧಿಯ ಧರಣಿ ಕೈಗೊಂಡ ರೈತ ಸಂಘ ಕಾಯಂ ವೈದ್ಯರ ನೇಮಕಾತಿ ಆಗುವವರೆಗೂ ಹಾಗೂ ಆರೋಗ್ಯ ಸಚಿವರು ಸ್ಥಳಕ್ಕಾಗಮಿಸುವ ವರೆಗೂ ಕದಲುವುದಿಲ್ಲವೆಂದು ಆಸ್ಪತ್ರೆಗೆ ಬೀಗ ಜಡಿದು ಪಟ್ಟುಹಿಡಿದು ಕೂತಿದ್ದರು. ಸದ್ಯ ಜಿಲ್ಲಾವೈದ್ಯಾಧಿಕಾರಿಗಳ ಭರವಸೆಗೆ ಸ್ಪಂದಿಸಿದ ಸಂಘಟನಾಕಾರರು ಡಿಸೆಂಬರ್ ಅಂತ್ಯದವರೆಗೆ ಗಡುವು ನೀಡಿದ್ದು, ಭರವಸೆ ಈಡೇರದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿ ಧರಣಿ ಹಿಂಪಡೆದಿದ್ದಾರೆ.
ತಾ.ಪಂ.ಸದಸ್ಯೆ ಬೀಬೀ ಫಾತೀಮಾ,ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು,ಹೇಮಂತ್, ರಾಘವೇಂದ್ರ, ರೈತ ಸಂಘದ ಕೆಂಕೆರೆಸತೀಶ್, ಮಲ್ಲಿಕಣ್ಣ, ಕೆ.ಪಿ.ಮಲ್ಲೇಶ್, ಪಾತ್ರೆಸತೀಶ್, ರಘು, ತಿಮ್ಮನಹಳ್ಳಿ ಲೋಕಣ್ಣ,ಶಿವಕುಮಾರ್, ಕರವೇ ಅಧ್ಯಕ್ಷ ಸಿದ್ದೇಶ್,ಕೋಳಿ ಶ್ರೀನಿವಾಸ್, ಮುಸ್ಲಿಂಯುವಕ ಸಂಘದ ಇಮ್ರಾಜ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ