ಹುಳಿಯಾರು ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಗಳೆಲ್ಲಾ ಹದಗೆಟ್ಟು ಗುಂಡಿಗಳಿಂದ ತುಂಬಿದ್ದು ಸ್ವಲ್ಪ ಹೆಚ್ಚುಕಮ್ಮಿಯಾದರೂ ಯಮಲೋಕಕ್ಕೆ ರಹದಾರಿಯಾಗಲಿದೆ.
ಹುಳಿಯಾರಿನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿನ ಗುಂಡಿ ಕಾರಣದಿಂದ ರಸ್ತೆಮಧ್ಯೆಯೇ ಪಲ್ಟಿಯಾಗಿ ಬಿದ್ದಿರುವ ಗೊಬ್ಬರದ ಟ್ರ್ಯಾಕ್ಟರ್. |
ಗುಂಡಿಗಳಿಂದ ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿದೆಯಲ್ಲದೆ ಗುಂಡಿ ಹಾದುಹೋಗುವಾಗ ವಾಹನದ ಬಿಡಿಭಾಗಗಳು ತುಂಡಾಗಿ ರಸ್ತೆಯಲ್ಲೇ ಠಿಕಾಣಿ ಹಾಕುತ್ತಿವೆ ಅಲ್ಲದೆ ಅಪಘಾತಕ್ಕೆ ಕಾರಣಾವಾಗುತ್ತಿದೆ. ಗುರುವಾರ ಮಧ್ಯಾಹ್ನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಬಳಿ ಗೊಬ್ಬರ ತುಂಬಿದ ಟ್ರ್ಯಾಕ್ಟರ್ ನ ಹಿಂಬದಿ ಚಕ್ರದ ಆಕ್ಸಲ್ ತುಂಡಾಗಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಬಿದ್ದಿರುವುದು ಇದಕ್ಕೊಂದು ತಾಜಾ ಉದಾಹರಣೆಯಾಗಿದೆ.
ಮೇಲನಹಳ್ಳಿಯ ಪರಮೇಶ್ ಎಂಬುವ ಟ್ಯ್ರಾಕ್ಟರ್ ಗೊಬ್ಬರ ತುಂಬಿಕೊಂಡು ಮೇಲನಹಳ್ಳಿಗೆ ಹುಳಿಯಾರು ಮಾರ್ಗವಾಗಿ ಹೋಗುತ್ತಿದ್ದ ವೇಳೆ ಯೂಸೂಖಾನ್ ಬಂಕ್ ಬಳಿಯ ರಸ್ತೆಯಲ್ಲಿನ ಗುಂಡಿಗಿಳಿದ ಮರುಕ್ಷಣವೇ ಹಿಂಬದಿಯ ಬಲಭಾಗದ ಚಕ್ರದ ಆಕ್ಸಲ್ ಮುರಿದು ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದೆ. ಗೊಬ್ಬರವೆಲ್ಲಾ ರಸ್ತೆ ತುಂಬಹರಡಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು.
ಗುಂಡಿಗಳೇ ಕಾರಣ : ಈ ರೀತಿ ವಾಹನಗಳು ಬೀಳುತ್ತಿರುವುದು ಇಂದು ನಿನ್ನೆಯದಾಗಿರದೇ ನಿತ್ಯ ಇಂತಹ ಅವಘಡಗಳು ಪಟ್ಟಣದಲ್ಲಿ ಸಂಭವಿಸುತ್ತಿದ್ದು ಇದಕ್ಕೆ ರಸ್ತೆಯಲ್ಲಿನ ಆಳುದ್ದ ಗುಂಡಿಗಳೆ ಕಾರಣಾವಾಗಿದೆ. ಗುಂಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಬಿಡಿಭಾಗಗಳು ಸವೆದು ಅಪಘಾತಗಳು ಸರ್ವೆಸಾಮಾನ್ಯವಾಗಿದೆ. ಕಳೆದ ತಿಂಗಳಷ್ಟೆ ಇದೇ ಕಾರಣಕ್ಕಾಗಿ ಬಸ್ ನ ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ನಿಯಂತ್ರಣಾ ತಪ್ಪಿದ ಬಸ್ ರಸ್ತೆ ಬದಿಯ ಮರಕ್ಕೆ ಹೊಡೆದು ನಿಂತಿದ್ದು ಹಸಿಯಾಗಿದೆ.
ದ್ವಿಚಕ್ರ ವಾಹನದವರೂ ಸಹ ನಿತ್ಯ ಒಬ್ಬರಲ್ಲಒಬ್ಬರೂ ಅಯತಪ್ಪಿ ಬೀಳುವುದು ನಡೆದೇ ಇರುತ್ತದೆ.ಈ ರಸ್ತೆಗಳಲ್ಲಿ ಅಪಘಾತಗಳು ಸರ್ವೇಸಾಮಾನ್ಯ ಎನ್ನುವಂತಾಗಿದ್ದು ಪ್ರಾಣಾಪಾಯ ಸಂಭವಿಸದಿರುವುದರಿಂದ ಏನೋ ಇಲಾಖೆಯವರು ಗಮನಹರಿಸುತ್ತಿಲ್ಲ.ಲೋಕೋಪಯೋಗಿ ಇಲಾಖೆಯವರು ಹಾಗೂ ಹೆದ್ದಾರಿ ಪ್ರಾಧಿಕಾರದವರು ಒಬ್ಬರ ಮೇಲೆ ಮತ್ತೊಬ್ಬರು ಹೇಳುತ್ತಾ, ಗುಂಡಿಗಳನ್ನು ಮುಚ್ಚಲು ನಿರ್ಲಕ್ಷಿಸುತ್ತಿದ್ದಾರೆ. ಈಗ ಸದ್ಯ ಈ ಗುಂಡಿಗಳನ್ನು ಯಾರು ಮುಚ್ಚುತ್ತಾರೇ, ಯಾರನ್ನು ಕೇಳಬೇಕೆಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.
ಗುಂಡಿಗಳು ಬಿದ್ದು ಹಲವು ತಿಂಗಳುಗಳು ಕಳೆಯುತ್ತಿದ್ದರೂ ಸಹ ಅವುಗಳಿಗೆ ಡಾಂಬಾರ್ ಹಾಕಿ ಮುಚ್ಚುವುದಾಗಲಿ, ಕನಿಷ್ಠ ಪಕ್ಷ ಮಣ್ಣು ,ಜೆಲ್ಲಿ ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಇಲಾಖೆಯವರು ವಿಫಲವಾಗಿರುವುದು ಪ್ರಯಾಣಿಕರ ಹಿಡಿಶಾಪಕ್ಕೆ ಕಾರಣಾವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ