ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟುಹಬ್ಬದ ಅಂಗವಾಗಿ ನ್ಯಾಷನಲ್ ಮ್ಯಾಥಮಿಟಿಕ್ಸ್ ಡೇ ಆಚರಣೆಯನ್ನು ನಡೆಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರು ಒಬ್ಬ ಉತ್ತಮ ಗಣಿತಜ್ಞರಾಗಿದ್ದು ತಮ್ಮದೇ ಆದ ಕೊಡುಗೆ ನೀಡಿ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಇಂತಹ ವ್ಯಕ್ತಿಗಳ ಆದರ್ಶವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲಿಸಬೇಕು ಎಂದರು. ರಾಮಾನುಜನ್ ಅವರ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.
ಗಣಿತ ಶಿಕ್ಷಕಿ ಪುಷ್ಟ ಮಾತನಾಡಿ ರಾಮಾನುಜನ್ ಅವರು ಗಣಿತವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರ ಪರಿಣಾಮವಾಗಿ ಅವರು ಗಣಿತದಲ್ಲಿ ಸಾಧನೆ ಮಾಡಲು ಸಹಕಾರಿಯಾಯಿತು ಎಂದರಲ್ಲದೆ, ಅವರ ಜೀವನದ ಬಗ್ಗೆ ವಿವರವಾಗಿ ತಿಳಿಸಿದರು. ಗಣಿತ ವಿಷಯದಲ್ಲಿ ಬರುವ ಲೆಖ್ಖ, ಸೂತ್ರಗಳನ್ನು ಕಂಡು ಮಕ್ಕಳು ಮೂಗುಮುರಿಯುತ್ತಾರೆ, ಇಂತಹ ಭಯವನ್ನು ಬಿಡಬೇಕು, ಗಣಿತಕ್ಕಿಂತ ಸುಲಭವಾಗಿ ಕಲಿಯಬಹುದಾದ ವಿಷಯ ಮತ್ತೊಂದಿಲ್ಲ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆವಹಿಸಿದ್ದು ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪಮಾಲಿಕೆ ಹಾಕಿ ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ವಿತರಿಸಿದರು. ಪ್ರಾಂಶುಪಾಲ ರವಿ, ಹುಳಿಯಾರು-ಕೆಂಕೆರೆ ಕಾಲೇಜಿನ ಗೋಪಿ,ಕನಕದಾಸ ಶಾಲೆಯ ಧನಂಜಯ್ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮಕ್ಕಳು ರಾಮಾನುಜನ್ ಅವರ ಜೀವನಕ್ಕೆ ಸಂಬಂಧಿಸಿದ ಕಿರುನಾಟಕಗಳನ್ನು ಪ್ರದರ್ಶಿಸಿದರಲ್ಲದೆ ರಾಮಾನುಜನ್ ಅವರ ಬಗ್ಗೆ ಭಾಷಣ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ