ಹುಳಿಯಾರು: ಅಂಗಡಿದಾರರ ಹಾಗೂ ನಿವಾಸಿಗಳಲ್ಲಿ ಹೆಚ್ಚಿದ ದುಗುಡ : ಮಂಗಳವಾರದಿಂದ ಕೆರೆ ಅಂಗಳದಲ್ಲಿನ ಮನೆ,ಅಂಗಡಿ ಸರ್ವೆಕಾರ್ಯ ಶುರು
ಈಗಾಗಲೇ ಹುಳಿಯಾರು ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದ್ದು ತೆರವು ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಕೇಶವಾಪುರ,ವಳಗೆರೆಹಳ್ಳಿ ಭಾಗದಲ್ಲಿ ತೆರವು ಮುಗಿಯುವ ಹಂತದಲ್ಲಿದ್ದು , ಮಂಗಳವಾರದಿಂದ ಶಂಕರಪುರ ಭಾಗದಲ್ಲಿರುವ ಕೆರೆಅಂಗಳದಲ್ಲಿರುವ ಮನೆಗಳು ಹಾಗೂ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಸರ್ವೆಕಾರ್ಯ ನಡೆಯಲಿದೆ.
ಹುಳಿಯಾರು ಬಸ್ ನಿಲ್ದಾಣದಲ್ಲಿ ಕೆರೆ ಒತ್ತುವರಿ ಜಾಗದಲ್ಲಿರುವ ಅಂಗಡಿಗಳು. |
ಕಳೆದ ಎರಡು ತಿಂಗಳಿನಿಂದಲೂ ಕೆರೆ ಒತ್ತುವರಿ ಮಾಡಿ ಕಟ್ಟಿರುವ ಮನೆ ಹಾಗೂ ಅಂಗಡಿಗಳ ತೆರವಿನ ಬಗ್ಗೆ ದಿನಕ್ಕೊಂದು ವದಂತಿಗಳು ಕೇಳಿಬಂದು ಇದೀಗ ಅಂತಿಮ ತೆರೆ ಬೀಳುವ ಲಕ್ಷಣ ಕಂಡುಬರುತ್ತಿದ್ದು ಅಂಗಡಿದಾರರ ಹಾಗೂ ನಿವಾಸಿಗಳ ದುಗುಡ ಹೆಚ್ಚಾಗುವಂತೆ ಮಾಡಿದೆ.
ಹುಳಿಯಾರು ಸರ್ವೆ ನಂ.೧ರಲ್ಲಿ ಹುಳಿಯಾರು ಅಮಾನಿಕೆರೆ ಎಂದು ೪೮೦ ಎಕರೆ ೩೮ ಗುಂಟೆ ಕೆರೆ ಜಾಗ ಗುರ್ತಿಸಲಾಗಿದೆ. ಸಾಕಷ್ಟು ವಿಸ್ತೀರ್ಣವಾಗಿರುವ ಈ ಕೆರೆ ತುಂಬಿ ಹಲವು ದಶಕಗಳೇ ಕಳೆದಿದ್ದು, ನೀರಿನ ಹರಿವು ಇಲ್ಲದಂತಾಗಿ ಒತ್ತುವರಿಗೆ ಆಸ್ಪದವಾಗಿತ್ತು. ಕೇಶವಾಪುರ, ವಳಗೆರೆಹಳ್ಳಿ,ಶಂಕರಪುರ ಹಾಗೂ ಬಸ್ ನಿಲ್ದಾಣದ ಸೇರಿದಂತೆ ಒಟ್ಟು 45 ಎಕರೆ ಪ್ರದೇಶದಷ್ಟು ಜಾಗ ಒತುವರಿಯಾಗಿದ್ದು, ಜಮೀನು , ಇಟ್ಟಿಗೆ ಫ್ಯಾಕ್ಟರಿ,ಮನೆ ಹಾಗೂ ಅಂಗಡಿಗಳಿಗೆ ಬಳಕೆಯಾಗಿದೆ. ಈ ಹಿಂದೆ ನಡೆಸಿದ ಸಮೀಕ್ಷೆಯಂತೆ ಅಂಗಡಿ ಹಾಗೂ ಮನೆ ಸೇರಿ 199 ಮಂದಿಯ ಪಟ್ಟಿ ಮಾಡಲಾಗಿದೆ. ಸದ್ಯ ಸರ್ವೆ ಮಾಡುತ್ತಲೇ ಒತ್ತುವರಿಯನ್ನು ತೆರವು ಮಾಡುತ್ತಾ ಸಾಗುತ್ತಿದ್ದು, ಮೊದಲು ಕೆರೆ ಸುತ್ತಲಲ್ಲಿ ಒತ್ತುವರಿಯಾಗಿರುವ ತೋಟ,ಹೊಲಗಳನ್ನು ತೆರವು ಮಾಡಿ ಟ್ರಂಚ್ ಹೊಡೆದು ಗಡಿ ಗುರ್ತಿಸಲಾಗುತ್ತಿದೆ.
ಸಮಸ್ಯೆ ಏನು: ಬಸ್ ನಿಲ್ದಾಣ ಹಾಗೂ ಶಂಕರಪುರ ಬಡಾವಣೆಯಲ್ಲಿ ಅನೇಕ ವರ್ಷಗಳಿಂದ ಮನೆ ಹಾಗೂ ಅಂಗಡಿಗಳು ನಿರ್ಮಾಣ ಮಾಡಿಕೊಂಡಿದ್ದು ಇದೀಗ ಅದಕ್ಕೆ ಸಂಚಕಾರ ಬರಲಿದೆ ಎಂಬುದು ಆತಂಕದ ವಿಚಾರವಾಗಿದೆ. ಕಳೆದ ಸುಮಾರು ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಪೆಟ್ಟಿಗೆ ಅಂಗಡಿಗಳನ್ನು ಹಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಅನೇಕರಿಗೆ ಈ ಅಂಗಡಿಗಳೆ ಜೀವನಾಧಾರವಾಗಿವೆ. ಈಗ ಅಂಗಡಿಗಳು ತೆರವಾದರೆ ಇವರೆಲ್ಲಾ ಬೀದಿಗೆ ಬರಬೇಕಾಗುತ್ತದೆ.
ಅಂತೆಯೇ ಶಂಕರಪುರ ಬಡಾವಣೆಯಲ್ಲಿರುವ ಅನೇಕ ಮನೆಗಳು ಸಹ ಕೆರೆ ಅಂಗಳದಲ್ಲಿದ್ದು ಈಗಾಗಲೇ ಪಂಚಾಯ್ತಿಯಿಂದ ರಸ್ತೆ,ಕುಡಿಯುವ ನೀರಿನ ಸೌಲಭ್ಯ,ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದಿದ್ದಾರಲ್ಲದೆ, ಮತಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿತರಾಗಿ ಗುರುತಿನ ಕಾರ್ಡ್ ಹಾಗೂ ಪಡಿತರ ಕಾರ್ಡ್ ಗಳನ್ನು ಸಹ ಹೊಂದಿದ್ದಾರೆ. ಇಲ್ಲಿನ ಅನೇಕ ಮನೆಗಳೀಗೆ ಪಂಚಾಯ್ತಿಯಿಂದ ಮ್ಯುಟೇಷನ್ ಸಹ ನೀಡಿ ಕಂದಾಯ ಕಟ್ಟಿಸಿಕೊಂಡಿದ್ದಾರೆ. ಇಲ್ಲಿರುವವರಲ್ಲಿ ಬಹುಪಾಲು ಮಂದಿ ಕಡುಬಡವರಾಗಿದ್ದು ಇವರಿಗೆ ಈಗಿರುವ ಜಾಗ ಬಿಟ್ಟರೆ ಬೇರೆಲ್ಲೂ ತುಂಡು ಜಾಗವೂ ಸಹ ಇಲ್ಲ. ನಿತ್ಯ ಕೂಲಿ ಮಾಡಿ ಬಂದ ಅಲ್ಪಸ್ವಲ್ಪ ಹಣದಿಂದ ನಿತ್ಯ ತುತ್ತಿನ ಚೀಲ ತುಂಬಿಸಿಕೊಂಡು ಜೀವನಬಂಡಿ ನಡೆಸುತ್ತಿದ್ದಾರೆ. ಇಂತಹದರ ನಡುವೆ ಅಂಗಡಿ ಹಾಗೂ ಮನೆಗಳು ತೆರವಾಗುತ್ತವೆಯೋ ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿವೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಜಿಲ್ಲಾಧಿಕಾರಿಗಳ ಆದೇಶದನ್ವಯ ಕೆರೆಗಳ ಒತ್ತುವರಿ ತೆರವು ಕಡ್ಡಾಯವಾಗಿದ್ದು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನಲಾಗುತ್ತಿದೆ.ತೆರವು ಕಾರ್ಯಾಚರಣೆ ವೇಳೆ ಯಾರಾದರೂ ಅಡ್ಡಿಪಡಿಸಿದರೆ ಅಥವಾ ತಕರಾರು ತೆಗೆದರೆ ಅವರ ಮೇಲೆ ಕಾನೂನುರೀತ್ಯಾ ಕ್ರಮ ಕೈಗೊಳ್ಳುವುದಾಗಿದ್ದು, ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಕಾರ್ಯ ನಡೆಯುವ ಸಾಧ್ಯತೆಯಿದ್ದು,ತೆರವಾದರೆ ಮುಂದೆ ಗತಿಯೇನು ನಾವೆಲ್ಲಿಗೆ ಹೋಗೋದು ಸರ್ಕಾರದಿಂದ ಪುನರ್ವಸತಿ ಕಲ್ಪಿಸುತ್ತಾರೆಯೇ ಇಲ್ಲವೋ ಎಂಬ ಯಕ್ಷಪ್ರಶ್ನೆಗಳು ಮೂಡಿವೆ.
ಆತಂಕ ಬೇಡ: ಶಂಕರಪುರ ಬಡಾವಣೆಯಲ್ಲಿರುವ ವಸತಿದಾರರಿಗೆ ಕೆರೆಸೂರಗೊಂಡನಹಳ್ಳಿ ಸರ್ವೆ ನಂ.೩೨ ರಲ್ಲಿ ನೀವೇಶನ ಗುರ್ತಿಸಲಾಗಿದ್ದು ಜಮೀನು ವಿಚಾರವಾಗಿ ಕೆಲವರು ಕಾನೂನು ಮೊರೆ ಹೋಗಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಡವಾಗುತ್ತಿದೆ. ಸಮಸ್ಯೆ ಬಗೆಹರಿದ ಕೂಡಲೇ ನೀವೇಶನ ಹಂಚಿಕೆ ಮಾಡಿ ಆನಂತರವಷ್ಟೇ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ್ ಸ್ಪಷ್ಠ ಪಡಿಸಿದ್ದು ಸದ್ಯ ಅಂಗಡಿ ತೆರವುಕಾರ್ಯ ತಹಸೀಲ್ದಾರ್ ಅವರ ಸಮಕ್ಷಮ ನಡೆಯುವುದು ಖಚಿತ ಎಂದಿದ್ದಾರೆ.
ಅಪಸ್ವರ : ಬಸ್ ನಿಲ್ದಾಣದ ಅಂಗಡಿಗಳ ತೆರವು ಸದ್ಯಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಹುಳಿಯಾರು ಅಮಾನಿಕೆರೆಯ ಸಂಪೂರ್ಣ ಒತ್ತುವರಿ ತೆರವು ಮಾಡಲೇಬೇಕು, ಒತ್ತಡಕ್ಕೆ ಮಣಿದು ತೆರವು ಮುಂದೂಡಿದಲ್ಲಿ ಪ್ರತಿಭಟಿಸುವುದಾಗಿ ಈಗಾಗಲೇ ಕಾರ್ಯಾಚರಣೆಯಲ್ಲಿ ತೋಟತುಡಿಕೆ ಕಳೆದುಕೊಂಡವರು ಎಚ್ಚರಿಸಿದ್ದಾರೆ
----------
ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿರುವ ಅಂಗಡಿಗಳಿಂದಲೇ ನಮ್ಮ ಜೀವನ ಸಾಗುತ್ತಿದೆ,ಈಗ ಅವನ್ನು ತೆರವುಗೊಳಿಸಿದರೆ ನಮ್ಮಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಮುಂದೆ ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯಲಿದ್ದು ಹೆಚ್ಚುವರಿ ಜಾಗದ ಅವಶ್ಯಕವಿದ್ದರೆ ಆಗ ತೆರವುಗೊಳಿಸಲಿ : ಕೋಳಿಅಂಗಡಿ ಶ್ರೀನಿವಾಸ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ