ಕಾನೂನು ಸಚಿವರಾಗಿರುವ ಟಿ.ಬಿ.ಜಯಚಂದ್ರ ಅವರನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಮೇಲ್ಮನೆನೆಯ ಪ್ರತಿಪಕ್ಷ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪನವರು ಬಾಯಿಗೆ ಬಂದಂತೆ ಮಾತಾಡಿ ನಿಂದಿಸಿರುವುದನ್ನು ಖಂಡಿಸಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪನವರ ಪ್ರತಿಕೃತಿಯನ್ನು ಶುಕ್ರವಾರದಂದು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಹುಳಿಯಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ಈಶ್ವರಪ್ಪನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. |
ಈ ವೇಳೆ ಹಿಂದುಳಿದ ವರ್ಗದ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಧನುಷ್ ರಂಗನಾಥ್ ಮಾತನಾಡಿ, ರಾಜ್ಯದ ಕಾನೂನು ಸಚಿವರು ಹಾಗೂ ಕಾಂಗ್ರೆಸ್ ನ ಜನಪ್ರಿಯ ನಾಯಕರು ಆಗಿರುವ ಟಿಬಿಜೆ ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಈಶ್ವರಪ್ಪನವರಿಗೆ ಶೋಭೆತರುವಂತದ್ದಲ್ಲ ಎಂದು ಕಿಡಿಕಾರಿದರು. ಉಪಮುಖ್ಯ ಮಂತ್ರಿಯಾಗಿಈಶ್ವರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಹಗರಣದಲ್ಲಿ ಸಿಲುಕಿಕೊಂಡಿದ್ದು ಅವರಿಗೆ ಟಿಬಿಜೆಯವರ ಬಗ್ಗೆ ಯಾವುದೇ ರೀತಿಯ ಮಾತನಾಡುವ ನೈತಿಕತೆಯಿಲ್ಲ ಎಂದರು. ಈಶ್ವರಪ್ಪನವರ ಮೇಲೆ ಸಭಾಧ್ಯಕ್ಷರು ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಸೇರಿ ಪ್ರತಿಭಟನೆ ಮಾಡಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಮಾಜಿ ಶಾಸಕ ಲಕ್ಕಪ್ಪ ಮಾತನಾಡಿ, ಕಲಾಪದಲ್ಲಿ ರಾಜ್ಯದ ಆಗುಹೋಗುಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದ್ದರೆ ಕೆಲ ಶಾಸಕರು ತಮ್ಮಿಷ್ಟದಂತೆ ಮಾತಾಡುತ್ತಾ, ಮೊಬೈಲ್ ಬಳಸುತ್ತಿರುವುದು ಟಿ.ವಿ, ಪತ್ರಿಕೆಗಳಲ್ಲಿ ಜಗಜ್ಜಾಹಿರವಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ಬಿಜೆಪಿಯ ನಾಯಕರು ಇಂತಹ ವಿವಾದಗಳಿಗೆ ಹೆಚ್ಚು ಎಡೆಮಾಡಿಕೊಡುತ್ತಿದ್ದಾರೆ ಇದರಿಂದ ರಾಜ್ಯಸರ್ಕಾರ ತಲೆ ತಗ್ಗಿಸುವಂತಾಗಿದ್ದು, ಉನ್ನತ ಸ್ಥಾನದಲ್ಲಿರುವ ಒಬ್ಬರು ಮತ್ತೊಬ್ಬರನ್ನು ಬಾಯಿಗೆ ಬಂದಂತೆ ಹರಟುವುದು ಸರಿಯಲ್ಲ , ನೆಹರು,ಇಂದಿರಾಗಾಂಧಿಯಂತಹ ಮಹಾನ್ ನಾಯಕರು ಕಟ್ಟಿ ಬೆಳೆಸಿದಂತ ಪಕ್ಷದವರ ಬಗ್ಗೆ ಈರೀತಿ ಮಾತಾಡುವುದು ಬಿಜೆಜೆ ಪಕ್ಷದವರಿಗೆ ಶೋಭೆತರುವಂತದ್ದಲ್ಲ ಎಂದರು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸುತ್ತಾ, ಘೋಷಣೆಗಳನ್ನು ಕೂಗುತ್ತಾ ಸಾಗಿ ಪೊಲೀಸ್ ಠಾಣೆಯ ವೃತ್ತದಲ್ಲಿ ಈಶ್ವರಪ್ಪನವರ ಪ್ರತಿಕೃತಿಯನ್ನು ದಹಿಸಿದರು. ಈ ವೇಳೆ ಚಿಕ್ಕನಾಯಕನಹಳ್ಳಿಯ ನಾರಾಯಣಗೌಡರು,ಘನೀಸಾಬ್,ಶಿವಕುಮಾರ್,ವಾಸುದೇವ್,ರಾಮಕೃಷ್ಣಯ್ಯ,ಕೃಷ್ಣೇಗೌಡ, ಹುಳಿಯಾರಿನ ಯುವಕಾಂಗ್ರಸ್ ನ ಮಾಜಿ ಅಧ್ಯಕ್ಷ ವೆಂಕಟೇಶ್, ಪರಮೇಶ್ವರ್, ಮುರುಳಿ,ಪರ್ವಿನ್ ಬಾನು, ಸುವರ್ಣಮ್ಮ,ರಾಧಮ್ಮ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ