ಸಮಾಜದಲ್ಲಿ ಹಿಂದುಳಿದ ವರ್ಗವೆಂದು ಬಿಂಬಿತವಾಗಿರುವ ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಮೊದಲು ವಿದ್ಯಾಭ್ಯಾಸ ಕೊಡಿಸಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಮಾಡಿ ಎಂದು ಹೆಚ್.ಮೇಲನಹಳ್ಳಿಯವರಾಗಿರುವ ಹಾಗೂ ಚಿತ್ರದುರ್ಗದ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀರಂಗಯ್ಯ ಅವರು ಕರೆ ನೀಡಿದರು.
ಹುಳಿಯಾರಿನಲ್ಲಿ ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣದ ದಿನದ ಕಾರ್ಯಕ್ರಮವನ್ನು ಶ್ರೀರಂಗಯ್ಯ ಅವರು ಉದ್ಘಾಟಿಸಿದರು. |
ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಪರಿನಿರ್ವಾಣದ ದಿನ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ತಮಟೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಸಮುದಾಯದವರು ಇಂದಿಗೂ ಸಹ ಶೈಕ್ಷಣಿಕ ರಂಗದಿಂದ ಹಿಂದುಳಿದಿದ್ದು ಸಮಾಜಮುಖಿಗೆ ಬರುವುದರಲ್ಲಿ ವಿಫಲರಾಗುತ್ತಿದ್ದಾರೆಂದು ವಿಷಾದಿಸಿದರು. ಗ್ರಾಮೀಣ ಭಾಗದ ಅನೇಕ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಬದಲು ತಮ್ಮ ಜೊತೆ ಕೂಲಿ ಮಾಡಲು ಕರೆದೊಯ್ಯುತ್ತಾರೆ ಇದರಿಂದ ಮಕ್ಕಳ ಉಜ್ವಲಭವಿಷ್ಯ ಹಾಳಾಗುತ್ತಿದೆ ಎಂದರು.
ಹುಳಿಯಾರಿನಲ್ಲಿ ತಾಲ್ಲೂಕು ದಲಿತ ಸಹಾಯವಾಣಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಡಿಯಲ್ಲಿ ನಡೆದ ತಾಲ್ಲೂಕು ಮಟ್ಟದ ತಮಟೆ ಸ್ಪರ್ಧೆಯಲ್ಲಿ ಕವಿ ಕೆ.ಬಿ.ಸಿದ್ದಯ್ಯ ಅವರನ್ನು ಸನ್ಮಾನಿಸಲಾಯಿತು. |
ದಲಿತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಸಂಘಟನೆಗಳಿವೆ ಆದರೆ ಅವುಗಳ ನಡುವೆ ಬಿರುಕುಂಟಾಗಿ ಒಗ್ಗಟ್ಟಿಲ್ಲದಂತಾಗಿದೆ. ಮೊದಲು ಸಂಘಟನೆಗಳು ಬಲಯುತವಾಗಬೇಕು ಎಂದು ತಿಳಿಸಿದರಲ್ಲದೆ, ಹಿಂದುಳಿದವರ ಏಳ್ಗೆಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಹಾಗೂ ತಮ್ಮ ಸಮುದಾಯದಲ್ಲಿ ತಿಳಿದವರು ಯಾರೊ ಒಬ್ಬರು ಈ ಸವಲತ್ತುಗಳನ್ನು ಪಡೆಯುವ ಬದಲು ಎಲ್ಲರಿಗೂ ಇವುಗಳನ್ನು ದೊರೆಯುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ಖ್ಯಾತ ಕವಿಗಳಾದ ಕೆ.ಬಿ.ಸಿದ್ದಯ್ಯನವರು ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳ ಪಾಲನೆಯ ಜೊತೆಗೆ, ದಲಿತ ಸಮುದಾಯದಲ್ಲಿ ಹಿಂದುಳಿದವರನ್ನು ವಿದ್ಯಾವಂತರಾದ ನಾವುಗಳು ನಮ್ಮ ಜೊತೆ ಕರೆದೊಯ್ಯಬೇಕು ಎಂದರು. ಸಮಾಜದಲ್ಲಿ ಹಿಂದುಳಿದ ಎಲ್ಲಾ ಸಮುದಾಯದವರ ಅಭಿವೃದ್ಧಿಗಾಗಿ ಅಂಬೇಡ್ಕರ್ ಸಂವಿಧಾನ ರಚಿಸಿದ್ದು,ಅವರ ಚಿಂತನೆ ನಿಲುವುಗಳ ಅಳವಡಿಕೆಯಾಗಬೇಕಿದೆ ಎಂದು ತಿಳಿಸಿದರು.
ಜಿ.ಪಂ.ಅಧ್ಯಕ್ಷ ವೈ.ಎಚ್. ಹುಚ್ಚಯ್ಯ , ಜಿ.ಪಂ.ಸದಸ್ಯೆ ಮಂಜುಳಾ, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ನ ಡಾ.ಜಿ.ಸಂಜಿವರಾಯ, ದಲಿತ ಹೋರಾಟಗಾರ ನಾರಾಯಣರಾಜು, ಚನ್ನಬಸವಯ್ಯ,ಲಿಂಗರಾಜು, ವಕೀಲರಾದ ರಾಮಚಂದ್ರಯ್ಯ, ಸದಾಶಿವಯ್ಯ,ಗ್ರಾ.ಪಂ.ಸದಸ್ಯೆ ದಾಕ್ಷಾಯಿಣಿ, ಡಿ.ಎಸ್.ಎಸ್.ನ ಹನುಮಂತಯ್ಯ, ಹಾಗಲವಾಡಿ ಚಿಕ್ಕಣ್ಣ, ಎ.ಎಸ್.ಐ .ರಾಜಣ್ಣ , ಬೆಸ್ಕಾಂನ ಗವಿರಂಗಯ್ಯ, ಶಿಕ್ಷಕರಾದ ನಂದವಾಡಗಿ,ಮಲ್ಲೇಶ್ ಸೇರಿದಂತೆ ಇತರರಿದ್ದರು.
ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ೨೦೧೩-೧೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ