ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಪ್ಯಾಸೆಂಜರ್ ಆಟೋ ರಸ್ತೆಯ ತಿರುವಿನಲ್ಲಿ ಆಕಸ್ಮಿಕವಗಿ ಉರುಳಿ ಬಿದ್ದು ಸುಮಾರು ೧೪ ಮಕ್ಕಳಿಗೆ ಗಾಯಗಳಾಗಿರುವ ಘಟನೆ ಬುಧವಾರ ಬೆಳಿಗ್ಗೆ ೯.೩೦ರ ಸಮಯದಲ್ಲಿ ಹೋಬಳಿ ಸಮೀಪದ ಕಾರೇಹಳ್ಳಿ ತಿರುವಿನಲ್ಲಿ ಘಟಿಸಿದೆ.
ಹುಳಿಯಾರು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು. |
ಈ ಆಟೋ ರಮೇಶ್ ಎಂಬುವರದ್ದಾಗಿದ್ದು, ಪ್ರತಿ ನಿತ್ಯದಂತೆ ಸೋಮನಹಳ್ಳಿ, ರಂಗನಕೆರೆ, ಗಾಣಧಾಳು ಗ್ರಾಮದ ಮಕ್ಕಳನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಹುಳಿಯಾರಿಗೆ ಬರುವಾಗ ಹುಳಿಯಾರು-ಶಿರಾ ಮಾರ್ಗ ಮಧ್ಯದ ಕಾರೇಹಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ಉರುಳಿಬಿದ್ದಿದೆ. ಆಟೋದಲ್ಲಿ ಸುಮಾರು ೨೫ ಮಕ್ಕಳಿದ್ದು, ಅದರಲ್ಲಿ ಇಬ್ಬರಿಗೆ ಮೊಣಕೈ, ಮಂಡಿ ಭಾಗಕ್ಕೆ ಹೆಚ್ಚು ಪೆಟ್ಟಾಗಿದ್ದರೆ , ಕೆಲ ಮಕ್ಕಳಿಗೆ ಹಣೆ, ಕೈ,ಕಾಲುಗಳಲ್ಲಿ ಗಾಯಗಳಾಗಿ. ಉಳಿದ ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದು ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಚಾಲಕನಿಗೂ ಸಹ ಗಾಯಗಳಾಗಿದ್ದು, ತೀವ್ರ ಪೆಟ್ಟಾಗಿದ್ದ ಮಕ್ಕಳನ್ನು ಚಿ.ನಾ.ಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಯಿತು. ಉಮಾ,ಸವ್ರಿನಾ,ಆಕಾಶ್, ಜಗದೀಶ್,ಪ್ರೀತಮ್, ಉದಯ್,ಪೂಜಾ, ದಿವ್ಯಶ್ರೀ, ಚಂದನ,ಶೈಲಾ,ರಮ್ಯ,ಅಂಜಲಿ ಹಾಗೂ ಜ್ಯೋತಿ ಎಂಬುವರಿಗೆ ಗಾಯಗಳಾಗಿವೆ.
ಆಟೋದಲ್ಲಿ ಓವರ್ ಲೋಡ್: ಆಟೋಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಹೋಗುತ್ತಿರುವ ಪರಿಣಾಮವಾಗಿ ಇಂತಹ ದುರ್ಘಟನೆಗಳು ದಿನೇ ದಿನೆ ನಡೆಯುತ್ತಿದ್ದು, ಸಾಕಷ್ಟು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದ ಅಕ್ಕಪಕ್ಕದ ಹಳ್ಳಿಗಳಿಗೆ ಸೂಕ್ತ ಬಸ್ ಸಂಪರ್ಕವಿಲ್ಲದ ಕಾರಣ ಜನ ಆಟೋದಲ್ಲಿ ಪ್ರಯಾಣಿಸುತ್ತಾರೆ. ಆದರೆ ಆಟೋದವರು ಅಗತ್ಯಕ್ಕಿಂತ ಹೆಚ್ಚು ಜನ ಹಾಗೂ ಮಕ್ಕಳನ್ನು ಕುರಿತುಂಬುವಂತೆ ತುಂಬಿಕೊಂಡು ಸಂಚರಿಸುತ್ತಿದ್ದಾರೆ. ಹಳ್ಳಿರಸ್ತೆಗಳಲ್ಲಿ ಗುಂಡಿಗಳಿರುವುದು ಹಾಗೂ ಆಟೋ ಚಾಲಕರು ವೇಗವಾಗಿ ಆಟೋ ಚಲಾಯಿಸುವುದರಿಂದ ಅಪಘಾತಗಳಾಗುತ್ತಿದ್ದರೂ ಈ ಬಗ್ಗೆ ಪೋಲಿಸ್ ಹಾಗೂ ಸಾರಿಗೆ ಇಲಾಖೆಯವರು ಮೌನವಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆಕ್ರೋಶಿತರಾದ ಪೋಷಕರು: ಪೆಟ್ಟಾಗಿದ್ದ ಮಕ್ಕಳನ್ನು ಚಿಕಿತ್ಸೆಗಾಗಿ ಹುಳಿಯಾರು ಸರ್ಕಾರಿ ಆಸ್ಪತ್ರೆಯಲ್ಲಿಗೆ ಕರೆತಂದರೆ ಪ್ರಥಮ ಚಿಕಿತ್ಸೆ ನೀಡಲು ವೈದ್ಯ ಹಾಗೂ ನರ್ಸ್ ಗಳಿಲ್ಲದಿದ್ದನ್ನು ಕಂಡ ಪೋಷಕರು ಆಕ್ರೋಶಿತರಾದರು. ನಂತರ ಬಂದ ನರ್ಸ್ ಒಬ್ಬರೂ ಮಕ್ಕಳಿಗೆ ಬ್ಯಾಂಡೇಜ್ ಹಾಕಿದರು, ಕೆಲ ಮಕ್ಕಳನ್ನು ಚಿ.ನಾ.ಹಳ್ಳಿಗೆ ಕಳುಹಿಸಿದರು. ಇಷ್ಟಾದರೂ ವೈದ್ಯರು ಮಾತ್ರ ಬಾರದಿದ್ದರಿಂದ ಸೋಮನಹಳ್ಳಿ,ಗಾಣಧಾಳು,ರಂಗನಕೆರೆ ಭಾಗದ ಅಪಾರ ಸಂಖ್ಯೆಯ ಜನರು ಆಸ್ಪತ್ರೆ ಮುಂದೆ ಜಮಾಯಿಸಿ, ನಿಗದಿತ ಸಮಯಕ್ಕೆ ಹಾಜರಿರದ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆ ಆವರಣದಲ್ಲಿ ಹೆಚ್ಚು ಜನ ಸೇರಿದ್ದರಿಂದ ಶಾಂತಿ ಕದಡದಂತೆ ಪಿಎಸೈ ಘೋರ್ಪಡೆ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ