ವರದಿ: ಡಿ.ಆರ್.ನರೇಂದ್ರಬಾಬು
-----------
ಹುಳಿಯಾರು: ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿಯಲ್ಲಿ ಕ್ವಿಂಟಾಲ್ ಗೆ ೨೦೦೦ದಂತೆ ಖರೀದಿ ಮಾಡಬೇಕಿದ್ದ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳ ನಿರ್ಲಕ್ಷತನದಿಂದ ರಾಗಿ ಖರೀದಿ ಕೇಂದ್ರ ಸ್ಥಾಪನೆ ಮರೀಚಿಕೆಯಾಗಿದ್ದು ಖರೀದಿ ಕೇಂದ್ರ ಪ್ರಾರಂಭವಾಗುತ್ತದೋ ಇಲ್ಲವೋ ಎಂಬಂತಾಗಿದೆ.
ಹುಳಿಯಾರಿನ ಎಪಿಎಂಸಿ ಕಛೇರಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆದಿದೆ ಎಂದು ತಿಳಿಸುವ ಬ್ಯಾನರ್ . |
ರಾಗಿ ಬೆಲೆ ಕುಸಿತದ ಹಿನ್ನಲೆಯಲ್ಲಿ ಮಧ್ಯ ಪ್ರವೇಶಿಸಿದ ಸರ್ಕಾರ ಉತ್ತಮ ಗುಣಮಟ್ಟದ ರಾಗಿಗೆ ಪ್ರತಿಕ್ವಿಂಟಾಲ್ ಗೆ ೧೫೫೦ ಹಾಗೂ ಪ್ರೋತ್ಸಾಹ ಧನ ೪೫೦ರೂ ಸೇರಿ ಪ್ರತಿಕ್ವಿಂಟಾಲ್ ಗೆ ಒಟ್ಟು ೨೦೦೦ ದರದಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಮೂಲಕ ಖರೀದಿ ಮಾಡುವುದಾಗಿ ತಿಳಿಸಿತ್ತು. ಇದೇ ಡಿಸೆಂಬರ್ ೧೫ ರಿಂದ ಜಿಲ್ಲೆಯ ತುಮಕೂರು , ಗುಬ್ಬಿ,ಕುಣಿಗಲ್, ತುರುವೇಕೆರೆ,ತಿಪಟೂರು,ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಅಂದಿನಿಂದ ಇದುವರೆಗೂ ಖರೀದಿ ಕೇಂದ್ರದ ಸ್ಥಾಪನೆಗೆ ಜಿಲ್ಲಾಧಿಕಾರಿಗಳಾಗಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಾಗಲಿ ಈ ಬಗ್ಗೆ ಮೌನವಹಿಸಿರುವುದು ರೈತರ ಅಸಹನೆಗೆ ಕಾರಣವಾಗಿದೆ.
ಯಾರಿಗೂ ಮಾಹಿತಿ ಇಲ್ಲ: ಖರೀದಿ ಕೇಂದ್ರ ಸ್ಥಾಪನೆಯಾಗಿರುವುದಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಬ್ಯಾನರ್ ಹಾಕಿರುವುದು ಬಿಟ್ಟರೆ ಒಳಹೊಕ್ಕು ನೋಡಿದರೆ ಖರೀದಿ ಕೇಂದ್ರ ಎಲ್ಲಿದೆ ಎಂದೆ ಯಾರೊಬ್ಬರಿಗೂ ತಿಳಿದಿಲ್ಲ.ಕಾರ್ಯದರ್ಶಿಗಳು ತಾವೀಗಾಗಲೇ ಎಪಿಎಂಸಿ ವತಿಯಿಂದ ಗೋಡನ್ ಹಾಗೂ ತೂಕದ ಆಳತೆ ಮಾಪನ ವ್ಯವಸ್ಥೆ ಮಾಡಿಕೊಟ್ಟಿದ್ದು ಖರೀದಿ ಕೇಂದ್ರ ತಡವಾಗುವುದಕ್ಕೆ ಕ.ಆ.ನ.ಸ.ನಿ.ನಿಯಮಿತದೆಡೆ ಬೆಟ್ಟು ಮಾಡುತ್ತಾರೆ.
ಟೆಂಡರ್ ನಲ್ಲಿ ಸಾಗಣೆದಾರರು ಯಾರು ಎಂದು ಅಂತಿಮ ಗೊಳಿಸುವ ಮುಂಚೆಯೇ ಖರೀದಿ ಕೇಂದ್ರದ ದಿನಾಂಕ ನಿಗದಿ ಮಾಡಿದ್ದು ಸಮಸ್ಯೆಗೆ ಕಾರಣಾವಾಗಿದ್ದು, ಶೀಘ್ರವೇ ಸಮಸ್ಯೆ ಪರಿಹರಿಸುತ್ತೇವೆ ಎಂದು ೧೦ದಿನಗಳ ಹಿಂದೆಯೇ ತಿಳಿಸಿದ್ದ ನಿಗಮದ ಜಿಲ್ಲಾ ನಿರ್ವಾಹಕರು ಇನ್ನೂ ಈ ಬಗ್ಗೆ ಗಮನಹರಿಸದಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹಿಡಿದ ಕನ್ನಡಿಯಾಗಿದೆ.
ತೊಂದರೆ : ಹೀಗಾಗಲೇ ರೈತರು ರಾಗಿ ಕಟಾವು ಮಾಡಿ ಒಕ್ಕಣೆ ಸಹ ಮಾಡುತ್ತಿದ್ದಾರೆ, ತಾಲ್ಲೋಕಿನೆಲ್ಲೆಡೆ ಸಕಾಲದಲ್ಲಿ ಉತ್ತಮ ಮಳೆಯಾದ್ದರಿಂದ ರಾಗಿ ಹುಲುಸಾಗಿ ಬೆಳೆದು ಬಂಪರ್ ಬೆಳೆ ಬಂದಿದೆ ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಕಂಡು ರೈತರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗುತ್ತದೆ ಎಂಬುದು ರೈತರಲ್ಲಿ ಹರ್ಷವನ್ನುಂಟು ಮಾಡಿತ್ತಾದರೂ ಸಹ ಇದುವರೆಗೂ ಕೇಂದ್ರ ತೆರಯದಿರುವುದು ಮತ್ತೆ ಆತಂಕಕ್ಕೀಡುಮಾಡಿದೆ. ರಾಗಿ ಖರೀದಿ ಕೇಂದ್ರ ಪ್ರಾರಂಭವಾಗುವ ಮುನ್ಸೂಚನೆ ಅರಿತ ವ್ಯಾಪಾರಸ್ಥರು ರಾಗಿ ಬೆಲೆಯನ್ನು ೧೨೦೦ರಿಂದ ೧೪೦೦ರ ವರೆಗೆ ಏರಿಸಿ ರೈತರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.
ಖರೀದಿಕೇಂದ್ರ ಪ್ರಾರಂಭವಾಗಿದೆ ಎಂದು ರಾಗಿ ಮಾರಲು ಎಪಿಎಂಸಿಗೆ ಬರುವ ರೈತರು ಖರೀದಿ ಕೇಂದ್ರವಿಲ್ಲದ ಕಾರಣ ಎಪಿಎಂಸಿಯ ಅಂಗಡಿಯವರಿಗೆ ಮಾರುವಂತಾಗಿದೆ ಇದರಿಂದ ರೈತರಿಗೆ ೬೦೦ ರೂ ಲುಕ್ಸಾನಾಗುತ್ತಿದೆ ಇದಕ್ಕೆ ನಿಗಮ ಮಂಡಳಿಯವರ ವಿಳಂಬ ನೀತಿಯೇ ಕಾರಣವಾಗಿದೆ. ಅಲ್ಲದೆ ರಾಗಿ ಖರೀದಿ ಕೇಂದ್ರ ಲೇಟಾಗಿ ತೆರೆಯುವುದರಿಂದ ವ್ಯಾಪಾರಸ್ಥರು ರೈತರಿಂದ ರಾಗಿ ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಅನುಕೂಲಮಾಡಿಕೊಟ್ಟಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ